ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ ಹಲವು ಐತಿಹಾಸಿಕ ತೀರ್ಪುಗಳಿಗೆ ಕಾರಣರಾಗಿದ್ದ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ (Retd Justice Abdul Nazeer) ಅವರು ಈಗ ಆಂಧ್ರ ಪ್ರದೇಶದ ರಾಜ್ಯಪಾಲರಾಗುವ (Governor of Andhra Pradesh) ಮೂಲಕ ಮತ್ತೊಂದು ಮೈಲಿಗಲ್ಲು ಬರೆದಿದ್ದಾರೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಮೂಡುಬಿದಿರೆಯ ಬೆಳುವಾಯಿಯ ಕಾನ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಇವರು, ಇಂದು ಈ ಮಟ್ಟಿಗೆ ಬೆಳೆದು ನಿಲ್ಲುತ್ತಾರೆಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಅಷ್ಟರಮಟ್ಟಿಗೆ ಅವರ ಸಾಧನೆ, ಛಲ ಹಾಗೂ ಪರಿಶ್ರಮವು ಫಲ ನೀಡುತ್ತಲೇ ಬಂದಿದೆ. ನ್ಯಾಯವಾದಿಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿವರೆಗಿನ ಅವರ ಪಯಣವು ಈಗ ಮತ್ತೊಂದು ಮಜಲಿಗೆ ತಂದು ನಿಲ್ಲಿಸಿದೆ.
ಯಾರಿವರು ನ್ಯಾ. ಅಬ್ದುಲ್ ನಜೀರ್?
ನ್ಯಾ. ಅಬ್ದುಲ್ ನಜೀರ್ ಅವರು 1958ರ ಜನವರಿ 5ರಂದು ಬೆಳುವಾಯಿಯಲ್ಲಿ ಜನಿಸಿದರು. ಮಹಾವೀರ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡಿದ ಇವರಿಗೆ ವಕೀಲಿಕೆ ವೃತ್ತಿ ಮೇಲೆ ವಿಶೇಷವಾದ ಆಸಕ್ತಿ ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದುಕೊಂಡರು.
ಕಾನದಲ್ಲಿ ಹುಟ್ಟಿ ಬೆಳೆದಿದ್ದ ಇವರಿಗೆ ಅಲ್ಲಿನ ಸ್ಥಳೀಯತೆ ಮೈಗೂಡಿತ್ತು. ಅಲ್ಲದೆ, ತಂದೆ ಫಕೀರ್ ಸಾಹೇಬ್ ಮತ್ತು ತಾಯಿ ಹಮೀದಾಬಿ ಅವರ ಸರಳತೆಯೂ ಇವರಲ್ಲಿ ಬೆಳೆದುಬಂದಿತ್ತು. ಬಹುಮುಖ ಪ್ರತಿಭೆಯಾಗಿದ್ದ ಇವರು ಕಾಲೇಜು ದಿನಗಳಲ್ಲಿ ಭಾಷಣ, ಕ್ವಿಝ್, ನಾಟಕಗಳಂತಹ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಸ್ಥಳೀಯ ತುಳು ಭಾಷೆಯ ಜತೆ ಜತೆಗೆ ಹಿಂದಿಯಲ್ಲಿಯೂ ಪಾಂಡಿತ್ಯ ಹೊಂದಿದ್ದ ಇವರು ಈ ಎರಡೂ ಭಾಷೆಯ ನಾಟಕಗಳಲ್ಲಿ ಅಭಿನಯಿಸಿ ಜನ ಮೆಚ್ಚುಗೆ ಗಳಿಸಿದ್ದರು.
ಇದನ್ನೂ ಓದಿ: Tanuja Movie: ವಿದ್ಯಾರ್ಥಿಗಳ ಮನಗೆದ್ದ ನೈಜ ಕಥೆ ಆಧಾರಿತ ತನುಜಾ ಚಿತ್ರ; ಹರಿಹರದಲ್ಲಿ ಉಚಿತ ಪ್ರದರ್ಶನ
ವಕೀಲಿಕೆ ಆರಂಭ
ಕಾನೂನು ಪದವಿ ಪಡೆದುಕೊಂಡವರು 1983ರ ಫೆಬ್ರವರಿ 18ರಲ್ಲಿ ವಕೀಲಿಕೆ ವೃತ್ತಿಯನ್ನು ಆರಂಭಿಸಿದರು. ಬಳಿಕ ಬೆಂಗಳೂರಿಗೆ ಬಂದ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಶುರು ಮಾಡಿದರು. 2003ರ ಮೇ 12ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅಬ್ದುಲ್ ನಜೀರ್ ಅವರು 2004ರ ಸೆಪ್ಟೆಂಬರ್ 24ರಲ್ಲಿ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಇದಾದ ಬಳಿಕ ಅಂದರೆ 2017ರ ಫೆಬ್ರವರಿ 17ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದುಕೊಂಡರು. ನ್ಯಾ. ನಜೀರ್ ಅವರು 2023ರ ಜನವರಿ 4ರಂದು ನಿವೃತ್ತರಾದರು. ಇವರು ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪು ನೀಡಿದ ಪೀಠದ ಭಾಗವಾಗಿದ್ದರು ಎಂಬುದು ಮತ್ತೊಂದು ವಿಶೇಷ.
ಪಾಸ್‌ಪೋರ್ಟ್ ಕೂಡಾ ಇರಲಿಲ್ಲ!
ನ್ಯಾ. ನಜೀರ್ ಅವರು ಬಹಳ ಸರಳ ವ್ಯಕ್ತಿತ್ವದವರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದರೂ ಎಂದೂ, ಎಲ್ಲಿಯೂ ಆಡಂಬರತೆಯನ್ನು ಮೆರೆದವರಲ್ಲ. ೨೦೧೯ರವರೆಗೆ ಅವರಿಗೆ ಪಾಸ್‌ಪೋರ್ಟ್ ಕೂಡಾ ಇರಲಿಲ್ಲ ಎಂಬುದು ಮತ್ತೊಂದು ವಿಶೇಷವಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಸಹ ಶ್ಲಾಘನೆ ವ್ಯಕ್ತಪಡಿಸಿ, ಸರಳತೆ ಬಗ್ಗೆ ಕೊಂಡಾಡಿದ್ದರು.
“ನ್ಯಾ. ನಜೀರ್ ಅವರು ಎಷ್ಟು ಸರಳತೆಯ ವ್ಯಕ್ತಿ ಎಂದರೆ ತೀರಾ ಇತ್ತೀಚಿನವರೆಗೂ ಅವರು ಚಾಲನಾ ಪರವಾನಗಿ ಮತ್ತು ನ್ಯಾಯಮೂರ್ತಿಗಳ ಗುರುತಿನ ಚೀಟಿಯನ್ನು ಮಾತ್ರವೇ ಹೊಂದಿದ್ದರು. ಅವರು ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದು, 2019ರಲ್ಲಿ ಎಂಬುದು ಗಮನಾರ್ಹ. ಕೆಲ ವಾರಗಳ ಹಿಂದಷ್ಟೇ ಅವರು ಮಾಸ್ಕೋ ಪ್ರಯಾಣಿಸಿದ್ದರು. ಆ ವೇಳೆ ಅವರ ಪಾಸ್‌ಪೋರ್ಟ್‌ನಲ್ಲಿ ಮೊದಲ ಸ್ಟಾಂಪ್ ಮೂಡಿತ್ತು” ಎಂದು ನ್ಯಾ. ಚಂದ್ರಚೂಡ್ ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: Aero India 2023 : ಏರೋ ಇಂಡಿಯಾ ಶೋಗೆ ಪ್ರಧಾನಿ ಮೋದಿ ನಾಳೆ ಚಾಲನೆ, ಇಲ್ಲಿದೆ ವಿವರ
ಐತಿಹಾಸಿಕ ತೀರ್ಪುಗಳೇನು?
ನ್ಯಾಯಮೂರ್ತಿ ನಜೀರ್ ನೇತೃತ್ವದ ಸಾಂವಿಧಾನಿಕ ಪೀಠವು ಕೇಂದ್ರ ಸರ್ಕಾರ 2016ರಲ್ಲಿ ಕೈಗೊಂಡಿದ್ದ ಡಿಮಾನಿಟೈಸೇಶನ್ ಪ್ರಕ್ರಿಯೆಯನ್ನು ಎತ್ತಿಹಿಡಿದಿತ್ತು. ಇದಲ್ಲದೆ, ಸಚಿವರು, ಸಂಸದರು, ಶಾಸಕರು ಮತ್ತು ನಾಯಕರ ವಾಕ್ ಸ್ವಾತಂತ್ರ್ಯದ ಹಕ್ಕಿನ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುವ ಅಗತ್ಯವಿಲ್ಲ ಎಂದು ಸಹ ನ್ಯಾ. ನಜೀರ್ ಅವರು ಘೋಷಿಸಿದ್ದರು.
2017ರಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿ ಅಬ್ದುಲ್ ನಜೀರ್ ಅವರೂ ಇದ್ದರು. ಈ ನ್ಯಾಯಪೀಠವು ತ್ರಿವಳಿ ತಲಾಖ್ ಅನ್ನು ಅಸಿಂಧುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಅಲ್ಲದೆ, ಆಧಾರ್ ಕಾರ್ಡ್ ಗುರುತಿನ ಚೀಟಿಯ ಖಾಸಗಿತನಕ್ಕೆ ಸಂಬಂಧಿಸಿದ ತೀರ್ಪು ನೀಡಿದ ಪೀಠದಲ್ಲಿಯೂ ಇವರು ಇದ್ದರು.
ಇದನ್ನೂ ಓದಿ: Appointments of Governors: ಆಂಧ್ರಕ್ಕೆ ನಿವೃತ್ತ ಜಡ್ಜ್, ಕನ್ನಡಿಗ ಅಬ್ದುಲ್ ನಜೀರ್ ರಾಜ್ಯಪಾಲ, ಒಟ್ಟು 12 ಗವರ್ನರ್ ನೇಮಕ
ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಂತಿ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳುಳ್ಳ ನ್ಯಾಯಪೀಠದಲ್ಲಿ ಇದ್ದಂತಹ ಏಕೈಕ ಅಲ್ಪಸಂಖ್ಯಾತ ನ್ಯಾಯಮೂರ್ತಿ ಇವರಾಗಿದ್ದರು.