Site icon Vistara News

Congress Guarantee: ಗ್ಯಾರಂಟಿ ಯೋಜನೆಗಳಿಂದ ಅವಕಾಶ ವಂಚಿತರಿಗೆ ನ್ಯಾಯ: ಸಿಎಂ ಸಿದ್ದರಾಮಯ್ಯ

CM Siddaramaiah

ಮೈಸೂರು: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು (Congress Guarantee), ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ ಯೋಜನೆಗಳು ಎಲ್ಲ ಜಾತಿ ಧರ್ಮದ ಜನರಿಗೂ ತಲುಪುತ್ತಿದ್ದು, ಇವು ಅವಕಾಶ ವಂಚಿತರಿಗೆ ನ್ಯಾಯ ಒದಗಿಸುವ ಯೋಜನೆಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿದ್ದಸಿಂಹಾಸನದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಮೈಸೂರು ವಿಭಾಗೀಯ ಮಠದಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಹಿಂದುಳಿದ, ದಲಿತರು, ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಬೇಕು. ಶಕ್ತಿ ಯೋಜನೆಯಡಿ 70 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರಿಂದ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆ ಚುರುಕುಗೊಂಡು, ರಾಜ್ಯದ ಜಿಡಿಪಿ ಹೆಚ್ಚಾಗುತ್ತಿದೆ. ರಾಜ್ಯದ ತಲಾವಾರು ಆದಾಯ ಹೆಚ್ಚಾಗಿದೆ. ಪ್ರತಿ ಅರ್ಹ ಫಲಾನುಭವಿ ಕುಟುಂಬಕ್ಕೆ ವಾರ್ಷಿಕವಾಗಿ 50 ರಿಂದ 60 ಸಾವಿರ ಸರ್ಕಾರ ಒದಗಿಸುತ್ತಿದ್ದು, ಕುಟುಂಬದ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ | ATM Sarkara : ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದ ಬಿಜೆಪಿ; ರಾಹುಲ್‌, ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಪೋಸ್ಟರ್‌ ಸಮರ

ಆರೋಪಗಳು ಸತ್ಯವಲ್ಲ

ಜನರ ಆಶೀರ್ವಾದದ ಫಲದಿಂದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಇತರೆ ರಾಜಕೀಯ ಪಕ್ಷಗಳು ರಾಜಕೀಯ ಪ್ರೇರಿತವಾಗಿ ಟೀಕೆ ಮಾಡುತ್ತದೆ. ವಿರೋಧಪಕ್ಷಗಳು ಮಾಡುವುದು ಕೇವಲ ಆರೋಪಗಳೇ ಹೊರತು, ಸತ್ಯವಲ್ಲ ಎಂದು ಸಿಎಂ ಟೀಕಿಸಿದರು.

ಜಾತ್ಯತೀತ ರಾಜಕೀಯ

ನಾನು ರಾಜಕೀಯಕ್ಕೆ ಬಂದು 50 ವರ್ಷಗಳಾಗಿದೆ. 2005 ರಲ್ಲಿ ಜೆಡಿಎಸ್‌ನಿಂದ ನನ್ನನ್ನು ಉಚ್ಚಾಟನೆ ಮಾಡಿದ ನಂತರ ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಗಿ ಬಂತು. ಅಹ್ಮದ್ ಪಟೇಲ್ ಸೇರಿ ಅಂದಿನ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ತಿಳಿಸಿದರು. ಜನರ ಆಶೀರ್ವಾದದಿಂದ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದ್ದು, ಜಾತ್ಯತೀತ ರಾಜಕೀಯ ನೀತಿಯನ್ನು ಪಾಲಿಸುವುದಾಗಿ ತಿಳಿಸಿದರು.

ಸಂವಿಧಾನದಲ್ಲಿ ತಿಳಿಸಿದಂತೆ ಎಲ್ಲ ಜಾತಿ ಮತ್ತು ಧರ್ಮದವರನ್ನು ಗೌರವಿಸಿ, ಜಾತ್ಯತೀತವಾಗಿರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾ, ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ವರ್ಗಗಳ ಪರವಾಗಿ ನಿಲ್ಲುವುದಾಗಿ ಹೇಳಿದರು.

ಸಮಾಜದ ಅಂಕು ಡೊಂಕು ತಿದ್ದುವ ಸಾಧನವೇ ಶಿಕ್ಷಣ: ಸಿದ್ದರಾಮಯ್ಯ

ಮೈಸೂರು: ವೈಚಾರಿಕ , ವೈಜ್ಞಾನಿಕ ಚಿಂತನೆಗೆ ಶಿಕ್ಷಣ ಅಗತ್ಯ. ಮೌಢ್ಯ ಹಾಗೂ ಕಂದಾಚಾರದಿಂದ ಸಮಾಜದ ಹಿನ್ನಡೆಯಾಗುತ್ತದೆ. ಶಿಕ್ಷಣ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಧನವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ “20ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಜ್ಞಾನ ವಿಕಾಸವಾಗಲು ಶಿಕ್ಷಣ ಅಗತ್ಯ. ನಾವೂ ಅನಕ್ಷರಸ್ಥರಂತೆ ನಡೆದುಕೊಳ್ಳುವುದಾದರೆ ಶಿಕ್ಷಣದ ಅಗತ್ಯವೇ ಇಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆಯಿದೆ. ಜಾತಿಯಿಂದಲೇ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯಿದೆ. ಶೂದ್ರರು, ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದರು. ಸಮಾಜದಲ್ಲಿ ಅವಕಾಶಗಳಿಂದ, ನ್ಯಾಯದಿಂದ ವಂಚಿತರಾಗಿದ್ದರೆ, ಅವರ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂದು ಕರೆ ನೀಡಿದರು.

ವೈಚಾರಿಕ , ವೈಜ್ಞಾನಿಕ ಚಿಂತನೆಗೆ ಶಿಕ್ಷಣ ಅಗತ್ಯ. ಮೌಢ್ಯಗಳು, ಕಂದಾಚಾರದಿಂದ ಸಮಾಜದ ಹಿನ್ನಡೆಯಾಗಿದೆ. ಶಿಕ್ಷಿತರು ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಬೇಕು. ಚಲನೆಯಿಲ್ಲದ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಣದಿಂದ ಸಮಾಜಕ್ಕೆ ಚಲನೆ ದೊರೆತು ಆರ್ಥಿಕ, ಸಾಮಾಜಿಕ ಸಬಲತೆ ಸಾಧ್ಯವಾಗುತ್ತದೆ. ಇಂತಹ ಶಿಕ್ಷಣ, ಕಾಲೇಜುಗಳಲ್ಲಿ ದೊರೆಯಬೇಕು. ವಿಜ್ಞಾನದ ಜತೆಗೆ ಮೌಢ್ಯ, ಕಂದಾಚಾರಗಳಿಗೆ ಅವಕಾಶವಿಲ್ಲ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಧನ ಶಿಕ್ಷಣವಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ | Yuvaraja College: ಪಿಯುಸಿ ಸೆಕೆಂಡ್ ಕ್ಲಾಸು, ಅದ್ಕೇ ಮೆಡಿಕಲ್‌‌ ಸೀಟ್ ಸಿಗಲಿಲ್ಲ ಎಂದ ಸಿದ್ದರಾಮಯ್ಯ

ನಾನು ಸಾಮಾಜಿಕ ನ್ಯಾಯದ ಪರ

ಜಾತಿವಿರೋಧಿ ಎಂಬ ಆರೋಪ ನನ್ನ ಮೇಲಿದೆ. ಆದರೆ ನಾನು ಯಾವ ಜಾತಿಯ ವಿರೋಧಿಯೂ ಅಲ್ಲ. ನಾನು ಸಾಮಾಜಿಕ ನ್ಯಾಯದ ಪರವಾಗಿದ್ದು, ಮನುಷ್ಯ ಜಾತಿಯ ಪರವಾಗಿದ್ದೇನೆ. ಕುವೆಂಪು ಹೇಳಿದಂತೆ, ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿದ್ದು, ಬೆಳೆದಂತೆ ಅಲ್ಪಮಾನವರಾಗುತ್ತೇವೆ. ನಾವೆಲ್ಲರೂ ವಿಶ್ವಮಾನವರಾಗಿಯೇ ಉಳಿದುಕೊಳ್ಳುವುದೇ ಶಿಕ್ಷಣದ ಗುರಿಯಾಗಬೇಕು. ಸಂವಿಧಾನದ ವಿರುದ್ಧ ಮಾತನಾಡುವವರಿಗೆ ಕೆಲವು ವಿದ್ಯಾವಂತರು ಚಪ್ಪಾಳೆ ತಟ್ಟುವುದು ವಿಷಾದನೀಯ. ಅವಕಾಶವಂಚಿತರಿಗೆ ಸಮಾನತೆಯ ಅವಕಾಶ ದೊರೆಕಿಸಿಕೊಡುವುದೇ ಶಿಕ್ಷಣದ ಗುರಿಯಾಗಬೇಕು ಎಂದರು.

Exit mobile version