ಬೆಂಗಳೂರು: ಒಬ್ಬ ತಾಯಿಗೆ ಕೇವಲ ತನ್ನ ಗಂಡನ ಆಸ್ತಿಯಲ್ಲಿ ಮಾತ್ರ ಪಾಲು ಇರುವುದಲ್ಲ. ಒಂದೊಮ್ಮೆ ಆಸ್ತಿ ಪಾಲು ಸಂದರ್ಭದಲ್ಲಿ ಒಬ್ಬ ಮಗ ಮೃತಪಟ್ಟಿದ್ದರೆ ಆತನ ಆಸ್ತಿಯಲ್ಲೂ ಪಾಲು ನೀಡಬೇಕು ಎಂದು ರಾಜ್ಯ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇದು ತಾಯಿ ವಿಧವೆಯಾಗಿರುವ ಪ್ರಕರಣಗಳಲ್ಲಿ ಮಾತ್ರ ಅನ್ವಯಿಸುತ್ತದೆ.
ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 8ರ ಅಡಿ ಮೃತ ಪುತ್ರನ ಆಸ್ತಿಯಲ್ಲಿ ವಿಧವೆ ತಾಯಿಗೂ ಹಕ್ಕಿದೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಆದೇಶ ಮಾಡಿದೆ. ಪುತ್ರ ಸಾವನ್ನಪ್ಪಿರುವುದನ್ನು ಪರಿಗಣಿಸಲು ವಿಫಲವಾಗಿ ಆದೇಶ ಮಾಡಿದ್ದ ಎರಡು ಅಧೀನ ನ್ಯಾಯಾಲಯಗಳ ಆದೇಶದಲ್ಲಿ ಹೈಕೋರ್ಟ್ ಮಾರ್ಪಾಡು ಮಾಡಿದೆ.
ಬೀದರ್ ಜಿಲ್ಲೆಯ ಹುಮನಾಬಾದ್ ನಿವಾಸಿಯಾಗಿರುವ ಹನುಮಂತ ರೆಡ್ಡಿ ಎಂಬವರ ಪತ್ನಿ ಈರಮ್ಮ ಅವರು ಅಧೀನ ನ್ಯಾಯಾಲಯಗಳು ಆಸ್ತಿ ವಿಭಾಗ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ಮತ್ತು ಮೃತ ಪುತ್ರನ ಆಸ್ತಿಯಲ್ಲಿ ತಾಯಿಗೂ ಪಾಲು ನೀಡಬೇಕು ಎಂದು ಸೂಚಿಸಿದೆ.
ಏನಿದು ಪ್ರಕರಣ?
ಹನುಮಂತರೆಡ್ಡಿ-ಈರಮ್ಮ ದಂಪತಿಗೆ ಪೊರಸರೆಡ್ಡಿ, ಭೀಮರೆಡ್ಡಿ (ಮೃತಪಟ್ಟಿದ್ದಾರೆ), ರೇವಮ್ಮ ಮತ್ತು ಬಸವರೆಡ್ಡಿ ಎಂಬವರು ನಾಲ್ಕು ಮಕ್ಕಳು. ಹನುಮಂತ ರೆಡ್ಡಿ ಮೃತರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಧವೆ ಪತ್ನಿಯರಿಗೆ ಆಸ್ತಿಯಲ್ಲಿ ಸ್ವತಂತ್ರ ಪಾಲು ಇಲ್ಲ. ಗಂಡನ ಪಾಲಿನಲ್ಲಿ ಅವರಿಗೆ ಹಕ್ಕಿರುತ್ತದೆ. ಹಾಲಿ ಪ್ರಕರಣದಲ್ಲಿ ದಂಪತಿಯ ಮತ್ತೊಬ್ಬ ಪುತ್ರ ಭೀಮರೆಡ್ಡಿ ಸಹ ಮೃತ ಪಟ್ಟಿದ್ದಾರೆ. ಆಸ್ತಿ ವಿಭಾಗ ಮಾಡುವಾಗ ಎರಡು ಅಧೀನ ನ್ಯಾಯಾಲಯಗಳು ಎರಡನೇ ಪುತ್ರ ಭೀಮರೆಡ್ಡಿ ನಿಧನರಾಗಿರುವ ವಿಚಾರ ಪರಿಗಣಿಸುವಲ್ಲಿ ವಿಫಲವಾಗಿದ್ದವು. ಮೃತ ಪುತ್ರನ ಆಸ್ತಿಯ ಪಾಲಿನಲ್ಲಿ ತಾಯಿಗೂ ಹಕ್ಕಿರುವುದನ್ನು ಕೆಳ ನ್ಯಾಯಾಲಯಗಳು ಗಮನಿಸಿರಲಿಲ್ಲ. ಇದೆಲ್ಲವನ್ನೂ ಪರಿಗಣಿಸಿದ ಹೈಕೋರ್ಟ್ ವಿಧವೆ ಈರಮ್ಮ ಅವರಿಗೆ ಹಾಗೂ ಇತರರಿಗೆ ಆಸ್ತಿಯಲ್ಲಿ ಸಲ್ಲಬೇಕಾದ ಪಾಲಿನ ಬಗ್ಗೆ ವಿವರವಾಗಿ ಆದೇಶಿಸಿದೆ. ಹನಮಂತರೆಡ್ಡಿ ಹಾಗೂ ಅವರ ನಾಲ್ಕು ಮಂದಿ ಮಕ್ಕಳು ಆಸ್ತಿಯಲ್ಲಿ ಪ್ರತಿಯೊಬ್ಬರೂ 1/5ನೇ ಭಾಗಕ್ಕೆ ಅರ್ಹರಾಗಿದ್ದಾರೆ. ಹನಮಂತರೆಡ್ಡಿ ಮರಣ ಹೊಂದಿರುವ ಹಿನ್ನೆಲೆಯಲ್ಲಿ ಅವರ ಪಾಲಿನ 1/5ನೇ ಭಾಗದ ಆಸ್ತಿಯನ್ನು ಪತ್ನಿ ಹಾಗೂ ನಾಲ್ವರು ಮಕ್ಕಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು. ಇದರ ಅನ್ವಯ ಮಕ್ಕಳು ತಮ್ಮ ಪಾಲಿನ 1/5ನೇ ಭಾಗ ಹಾಗೂ 1/25ನೇ ಭಾಗದ ಆಸ್ತಿಗೆ ಅರ್ಹರಾಗುತ್ತಾರೆ.
ಈರಮ್ಮ ಅವರು ಪತಿಯ ಆಸ್ತಿಯಲ್ಲಿನ ಭಾಗದ ಪೈಕಿ 1/25ನೇ ಭಾಗಕ್ಕೆ ಅರ್ಹರಾಗುತ್ತಾರೆ. ಮೃತ ಪುತ್ರ ಭೀಮರೆಡ್ಡಿಯ ಒಟ್ಟಾರೆ 6/25ನೇ ಭಾಗದಲ್ಲಿ (1/5 + 1/25) ಅವರ ಪತ್ನಿ, ಪುತ್ರಿ ಹಾಗೂ ಈರಮ್ಮ ಅವರು ಸಮಾನ ಪಾಲಿಗೆ ಅರ್ಹರಾಗಿದ್ದಾರೆ. ಹೀಗಾದಾಗ ಈರಮ್ಮ ಅವರು ಪಾಲು 6/75ನೇ ಭಾಗದಷ್ಟಾಗುತ್ತದೆ ಎಂದು ಸೂಚಿಸಿದೆ.