ಹಾಸನ: ಅರಸೀಕೆರೆಯ ಜೆಡಿಎಸ್ ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಭಾನುವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅರಸೀಕೆರೆ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ (Karnataka Election) ಶಿವಲಿಂಗೇಗೌಡ ಕಾಂಗ್ರೆಸ್ ಸೇರಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಕೆ.ಎಂ.ಶಿವಲಿಂಗೇಗೌಡ ಅವರು, ನಾನು ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದೇನೆ. ಸಿದ್ದರಾಮಯ್ಯ ಹೇಗೆ ಜನತಾ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದರೋ ಹಾಗೆಯೇ ನನ್ನ ಹಣೆಯಲ್ಲಿ ಬರೆದಿತ್ತು ಅಂತ ಕಾಣುತ್ತದೆ. ಹಾಗಾಗಿ ನಾನು ಕಾಂಗ್ರೆಸ್ ಸೇರಿದ್ದೇನೆ. ಸಂತೋಷದಿಂದ ಜೆಡಿಎಸ್ ಜತೆಗಿನ 20 ವರ್ಷದ ಸಂಬಂಧ ಕಡಿದುಕೊಂಡು ಬಂದಿದ್ದೇನೆ. ನನ್ನ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸೇರಿಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷಾಂತರವಾಗಿದ್ದೇನೆ ಎಂದು ಹೇಳಿದರು.
ನಾನು ಇಬ್ಬರು ನಾಯಕರ ಮಡಿಲಿಗೆ ಬಂದಿದ್ದೇನೆ ಎಂದ ಅವರು, ಅರಸೀಕೆರೆ ಕ್ಷೇತ್ರಕ್ಕೆ ಬಿಜೆಪಿಯಿಂದ ನಿಲ್ಲಲು ಬಂದಿರುವ ಪುಣ್ಯಾತ್ಮ ಇಲ್ಲಿ ಆಗಿರುವ ಎಲ್ಲಾ ಕಾರ್ಯಕ್ರಮ ಬಿಜೆಪಿಯದು ಎಂದಿದ್ದಾನೆ ಎಂದು ಹೆಸರು ಹೇಳದೆ ಎನ್.ಆರ್.ಸಂತೋಷ್ ವಿರುದ್ಧ ಗುಡುಗಿದರು. ಕ್ಷೇತ್ರದಲ್ಲಿ ಆಗಿರುವ ಯಾವುದೇ ಕಾರ್ಯಕ್ರಮ ಬಿಜೆಪಿ ಸರ್ಕಾರದಲ್ಲಿ ಆಗಿಲ್ಲ. ಕ್ಷೇತ್ರದ ಮನೆ ಮನೆಗೆ ನೀರು ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರದ ಸಿದ್ದರಾಮಣ್ಣ, ಎತ್ತಿನಹೊಳೆ ಯೋಜನೆಗೆ ಅರಸೀಕೆರೆಯನ್ನು ಸೇರಿಸಿದ್ದು ಕೂಡ ಸಿದ್ದರಾಮಯ್ಯ ಎಂದು ಹೇಳಿದರು.
ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರಕ್ಕೆ ಇಳಿದಿದೆ. ರಾಜಕಾರಣಿಗಳ ಮಾನ ಮಾರ್ಯಾದೆಯನ್ನು ಬೀದಿಯಲ್ಲಿ ಹರಾಜಿಗೆ ಇಟ್ಟಿದ್ದಾರೆ. ನಿಮ್ಮಂತಹ ನೀತಿಗೆಟ್ಟ, ಮಾನಗೆಟ್ಟ ಸರ್ಕಾರ ನೋಡಿಲ್ಲ ಎಂದ ಅವರು, ಊರೂರಿಗೆ ಬಾರ್ ಕೊಟ್ಟಿದ್ದೇ ಬಿಜೆಪಿಯವರ ಸಾಧನೆಯಾಗಿದೆ. ಗ್ಯಾಸ್ ಬೆಲೆ 1200 ರೂಪಾಯಿ ಆಗಿದೆಯಲ್ಲಾ, ನಿಮಗೆ ಮಾನ ಮಾರ್ಯಾದೆ ಇದೆಯಾ? ಜನ ಗ್ಯಾಸ್ ನಂಬಿ ಒಲೆ ಕಿತ್ತು ಹಾಕಿದ್ದಾರೆ. ಆದರೆ ಈಗ ಗ್ಯಾಸ್ ಬೆಲೆ ಏರಿ ಜನರಿಗೆ ಸಮಸ್ಯೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ಅದಾನಿ ಪರ
ಬಿಜೆಪಿ ಅದಾನಿ ಪರವಾಗಿರುವ ಪಕ್ಷವಾಗಿದೆ. ನಿಮಗೆ ಬಹಳ ಕಾಲ ಉಳಿಗಾಲ ಇಲ್ಲಾ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಶಿವಲಿಂಗೇಗೌಡ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ.ಸುರೇಶ್ ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ತಾಲೂಕಿನ ಯಾವ ಊರಿಗೆ ಹೋದರೂ ಈ ಬಾರಿಯಾದರೂ ಮಂತ್ರಿಯಾಗುತ್ತೀರಾ ಅಣ್ಣ ಎಂದು ಕೇಳುತ್ತಾರೆ. ಇದಕ್ಕೆ ಜನರ ಅಶೀರ್ವಾದ ಅಗತ್ಯ ಎಂದ ಅವರು, ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರ ಬಂದರೆ ಸಚಿವ ಸ್ಥಾನ ಕೊಡಿ ಎಂದು ಕೈ ನಾಯಕರನ್ನು ಕೇಳಿದರು.
ಇದನ್ನೂ ಓದಿ | D ಕೋಡ್ ಅಂಕಣ: ರಾಜಕೀಯ ಹವಾಮಾನ ವರದಿ: ಕಾಂಗ್ರೆಸ್ ಕಡೆಗೆ ಬೀಸುವಂತಿದೆ ತಂಗಾಳಿ; ಪಕ್ಷಾಂತರಿಗಳಿಗೆ ತಿಳಿದಿದೆಯೇ ಒಳಸುಳಿ?
ಶಿವಲಿಂಗೇಗೌಡರನ್ನು ಬೆಳೆಸಿದ್ದೇನೆ ಎನ್ನುತ್ತಾರೆ. ಆಗ ಅರಸೀಕೆರೆ ಕ್ಷೇತ್ರದಲ್ಲಿ ಪಕ್ಷದ ಮತಗಳು ಎಷ್ಟಿದ್ದವು, ಈಗ 95 ಸಾವಿರಕ್ಕೆ ಮುಟ್ಟಿಸಿದ್ದೇನೆ ಎಂದು ಜೆಡಿಎಸ್ ವಿರುದ್ಧ ಗುಡುಗಿದ ಅವರು, ಸಿದ್ದರಾಮಯ್ಯರನ್ನು ಹೊಗಳಿದ್ದೇ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಜಲಧಾರೆ ಕಾರ್ಯಕ್ರಮಕ್ಕೆ ಹೋಗದೆ ಅರಸೀಕೆರೆ ಕ್ಷೇತ್ರದವರಿಗೆ ಎಂಎಲ್‌ಸಿ ಸ್ಥಾನ ಕೊಡಿ ಎಂದು ಕೇಳಿದ್ದೆ, ಆದರೆ ಕೊಡಲಿಲ್ಲ. ತೆಂಗು ಬೆಳೆಗಾರರಿಗೆ ಪರಿಹಾರ ಕೊಡಿ ಎಂದು ಹೋರಾಟ ಮಾಡಿದರೆ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ದೊಡ್ಡಗೌಡರ ಬಾಯಲ್ಲಿ ಇಂತಹ ಮಾತು ಬಂದಮೇಲೆ ಜೆಡಿಎಸ್ ಪಕ್ಷದಲ್ಲಿ ಇರಕೂಡದು ಎಂದು ತೀರ್ಮಾನ ಮಾಡಿದ್ದೆ. ರಾಜಕೀಯವೇ ಬೇಡ ಎಂದುಕೊಂಡಿದ್ದೆ, ಆದರೆ ಜನರು ಬಿಡಲಿಲ್ಲ. ಹಾಗಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ತಿಳಿಸಿದರು.