Site icon Vistara News

Karnataka Election 2023: ಇನ್ನೂ ಒಂದು ತಿಂಗಳು ಜೆಡಿಎಸ್‌ ಶಾಸಕನಾಗಿಯೇ ಇರುವೆ, ನಂತರ ಕಾಂಗ್ರೆಸ್‌ಗೆ ಹೋಗುವೆ: ಕೆ.ಎಂ. ಶಿವಲಿಂಗೇಗೌಡ

K M ShivalingeGowda says I will remain a JDS MLA for another month and then I will go to Congress

#image_title

ಹಾಸನ: ಅರಸೀಕೆರೆ ಕ್ಷೇತ್ರದ ಬೆಂಬಲಿಗರು ಕಾಂಗ್ರೆಸ್‌ಗೆ ಹೋಗಬೇಕು ಎಂದು ಹೇಳಿದ್ದರಿಂದ ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ. ಇಂದು (ಮಾ.5) ಕಾಂಗ್ರೆಸ್ ಸೇರಬೇಕು ಎಂದು ಬೆಂಬಲಿಗರು ತಿಳಿಸಿದ್ದರು. ಆದರೆ, ನಾನು ಇವತ್ತು ಕಾಂಗ್ರೆಸ್ ಸೇರುತ್ತಿಲ್ಲ. ಇನ್ನೂ ಒಂದೂವರೆ ತಿಂಗಳು ಜೆಡಿಎಸ್‌ ಶಾಸಕನಾಗಿಯೇ ಇರುತ್ತೇನೆ. ತಾಂತ್ರಿಕ ತೊಡಕುಗಳು (Karnataka Election 2023) ನಿವಾರಣೆ ಆದ ಬಳಿಕ ಕಾಂಗ್ರೆಸ್‌ ಸೇರುತ್ತೇನೆ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಅರಸೀಕೆರೆ ತಾಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಸ್ತೋಮದ ಎದುರು ಕಾಂಗ್ರೆಸ್ ಸೇರಲು ಒಪ್ಪಿಗೆ ಕೇಳಿ, ನೀವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದರು. ಇದಕ್ಕೆ ಬೆಂಬಲಿಗರು ಕೈ ಎತ್ತಿ ಬೆಂಬಲ ಸೂಚಿಸಿದರು. ಇದರಿಂದ ತಾವು ಇನ್ನೂ ಒಂದೂವರೆ ತಿಂಗಳು ಜೆಡಿಎಸ್‌ ಶಾಸಕನಾಗಿಯೇ ಇರುತ್ತೇನೆ. ನಂತರ ಕಾಂಗ್ರೆಸ್‌ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ | Karnataka Bandh: ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾ.9ರಂದು ರಾಜ್ಯ ಬಂದ್‌: ಡಿ.ಕೆ. ಶಿವಕುಮಾರ್‌ ಘೋಷಣೆ

ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಶಿವಲಿಂಗೇಗೌಡ

ಅರಸೀಕೆರೆ ತಾಲೂಕಿನ ಅಭಿವೃದ್ಧಿಗೆ ಸಿದ್ದರಾಮಯ್ಯ ಬಹಳ ಸಹಕಾರ ಕೊಟ್ಟಿದ್ದಾರೆ. ನಾವೆಲ್ಲ ಒಂದೇ ಪಕ್ಷದಲ್ಲಿ ಇದ್ದೆವು, ಅವರು ವಿವಿಧ ಕಾರಣಗಳಿಂದ ಹೊರ ಹೋದರು. 2004ರಲ್ಲಿ ನಾನು ಹದಿನಾಲ್ಕು ಮತಗಳಿಂದ ಸೋತೆ, ಆದರೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಹೇಳಿದ್ದೆ. ನಂತರ ಅವರು ಮುಖ್ಯಮಂತ್ರಿಯಾದಾಗ ಶಿವಲಿಂಗೇಗೌಡ ನೀನು ಹೆದರಬೇಡ, ನಿನ್ನ ಎಲ್ಲ ಕೆಲಸಗಳನ್ನು ಮಾಡಿಕೊಡುತ್ತೇನೆ, ನೀನು ಬೆಳೆಯಬೇಕು ಎಂದಿದ್ದರು. ಸಿದ್ದರಾಮಯ್ಯ ಸಹಕಾರದಿಂದ ಹಳ್ಳಿಹಳ್ಳಿಗೆ ಡಾಂಬರ್ ರಸ್ತೆಗಳನ್ನು ಮಾಡಿದ್ದೇವೆ ಎಂದರು.

ಇದನ್ನೂ ಓದಿ | Apple Phone: ಬಿಜೆಪಿ ಸರ್ಕಾರದ್ದು ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ನೀತಿ: ಫಾಕ್ಸ್‌ಕಾನ್‌ ಕುರಿತು ಎಚ್‌.ಡಿ. ಕುಮಾರಸ್ವಾಮಿ ಟೀಕೆ

ಸಿದ್ದರಾಮಣ್ಣ ನಿಮಗೆ ಅವಕಾಶ ಸಿಕ್ಕರೆ ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ 15 ಸಾವಿರ ಬೆಂಬಲ ಬೆಲೆ ನಿಗದಿ ಮಾಡಿ ಎಂದು ಶಿವಲಿಂಗೇಗೌಡ ಮನವಿ ಮಾಡಿದರು. ತಾಲೂಕಿನ ಜನ ಫ್ಲೋರೈಡ್ ಮಿಶ್ರಿತ ನೀರು ಕುಡಿಯುತ್ತಿದ್ದರು. ಅವರಿಗೆ ಶುದ್ಧ ಕುಡಿಯುವ ನೀರು ಕೊಡುವ ಋಣ ನನ್ನ ಮೇಲಿತ್ತು. 530 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಕೊಡಲು ಸಿದ್ದರಾಮಯ್ಯ ಅವರ ಪಾತ್ರ ದೊಡ್ಡದು. ಸಿದ್ದರಾಮಯ್ಯ ಇಡೀ ಭಾರತದಲ್ಲಿ ಭಾಗ್ಯಗಳ ಕೊಡುಗೆ ನೀಡಿದ ನಾಯಕ ಎಂದು ಮಾಜಿ ಸಿಎಂ ಅವರನ್ನು ಹಾಡಿ ಹೊಗಳಿದರು.

ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ ಎಂದ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ, ದುಡ್ಡಿದೆ ಎಂದು ಸುಮ್ಮನೆ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಅವರಿಗೆ ಮತ ನೀಡಿದರೆ ಅದು ವೇಸ್ಟ್ ಆಗುತ್ತದೆ. ಅದು ಬಿಜೆಪಿಗೆ ಹೋಗುತ್ತದೆ. ಬಿಜೆಪಿ, ಜೆಡಿಎಸ್‌ನವರು ಹಿಂದುಳಿದವರು, ದಲಿತರು, ಶೋಷಿತರು ಹಾಗೂ ಅಲ್ಪಸಂಖ್ಯಾತರ ಪರವಾಗಿಲ್ಲ. ಬಿಜೆಪಿಯರು ಇದುವರೆಗೆ ಬಡವರಿಗೆ ಒಂದು ಮನೆ ಕೊಟ್ಟಿಲ್ಲ, ಹಾಗಿದ್ದರೆ ಇವರನ್ನು ಒದ್ದು ಓಡಿಸಬೇಕೋ ಬೇಡವೋ? ಅಧಿಕಾರದಿಂದ ಇಳಿಸಬೇಕೋ ಬೇಡವೋ ಎಂದು ಜನರಿಗೆ ಕೇಳಿದರು.

ನಾನು ಶಿವಲಿಂಗೇಗೌಡ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇನೆ. ಅವರು ಬಡ ಕುಟುಂಬದಿಂದ ಬಂದು ಶಾಸಕರಾದವರು. ನೀವು ಅವರನ್ನು ಮೂರು ಸಾರಿ ಗೆಲ್ಲಿಸಿದ್ದೀರಿ, ಗೆಲ್ಲಿಸಿದ್ದು ಸಾರ್ಥಕ ಆಗಿದೆ. ವಿಧಾನಸಭಾ ಸದಸ್ಯರು ಆಗುವುದು ಶೋಕಿ ಮಾಡಲು ಅಲ್ಲ. ಬದಲಾಗಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಎಂದ ಅವರು, ಶಿವಲಿಂಗೇಗೌಡ ಶಾಸಕರಾಗಿ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಸದನದಲ್ಲಿ ಯಾವುದೇ ವಿಚಾರ ಬಂದರೂ ಮಾತನಾಡುತ್ತಾರೆ ಎಂದು ಹೊಗಳಿದರು.

ಅರಸೀಕೆರೆ ತಾಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.

ಬಿಜೆಪಿಯವರನ್ನು ಅಧಿಕಾರದಿಂದ ಇಳಿಸುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ. ಜೆಡಿಎಸ್ 123 ಸೀಟ್ ಗೆಲ್ಲುತ್ತೇವೆ ಎನ್ನುತ್ತಾರೆ, ಅದು ಹೇಗಾಗುತ್ತಪ್ಪ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ ಅವರು, ಜೆಡಿಎಸ್‌ನವರು ಗೆದ್ದೆತ್ತಿನ ಬಾಲ ಹಿಡಿಯುವವರು, ಶಿವಲಿಂಗೇಗೌಡ ನನ್ನ ಹೊಗಳಿದ ಎಂಬ ಒಂದೇ ಕಾರಣಕ್ಕೆ ಪಕ್ಷದಿಂದ ದೂರ ಮಾಡಿದ್ದಾರೆ ಎಂದು ಹೇಳಿ, ನಾನು ನಿನಗೆ ಆಹ್ವಾನ ಕೊಡುತ್ತೇನೆ, ನಮ್ಮ ಪಕ್ಷಕ್ಕೆ ಸೇರ್ಪಡೆಯಾಗು ಎಂದು ಶಾಸಕ ಶಿವಲಿಂಗೇಗೌಡರಿಗೆ ಆಹ್ವಾನ ನೀಡಿದರು.

ಇದನ್ನೂ ಓದಿ | BJP Karnataka: ದೇಶದ ಅಭಿವೃದ್ಧಿಯ ಪಯಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು: ಬಿ.ವೈ. ವಿಜಯೇಂದ್ರ

ನಾನು ಶಿವಲಿಂಗೇಗೌಡ ಜತೆ ಮಾತನಾಡಿದ್ದೇನೆ, ಅವರು ನಮ್ಮ ಜತೆ ಬರಲು ಒಪ್ಪಿಕೊಂಡಿದ್ದಾರೆ ಎಂದು ಘೋಷಣೆ ಮಾಡಿದ ಸಿದ್ದರಾಮಯ್ಯ, ನಮ್ಮ ಪಕ್ಷಕ್ಕೆ ಶಿವಲಿಂಗೇಗೌಡ ಬಂದರೆ ಗೆಲ್ಲಿಸುತ್ತೀರಾ ಎಂದು ಜನರಿಗೆ ಕೇಳಿದರು. ಇದಕ್ಕೆ ಹೌದು ಎಂದು ಒಕ್ಕೊರಲಿನಿಂದ ಕಾರ್ಯಕ್ರಮದಲ್ಲಿ ಸೇರಿದ್ದ ಜನರು ಕೂಗಿ ಹೇಳಿದರು.

ಬಹಳ ಜನ ದೇಶ ಭಕ್ತಿ ಬಗ್ಗೆ ಪಾಠ ಹೇಳಲು ಶುರು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಪುಂಕಾನು ಪುಂಕವಾಗಿ ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ, ಆರ್‌ಎಸ್ಎಸ್‌ನವರು ಯಾರೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವರಲ್ಲಿ ಯಾರಾದರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ? ಹೆಡಗೆವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಹೋರಾಟ ಮಾಡಿದ್ದಾರಾ? ಹಾಗಿದ್ದರೆ ಅವರು ಯಾಕೆ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.

Exit mobile version