Site icon Vistara News

Karnataka Election: ಎಸ್‌ಸಿ ಜನಾಂಗದ ಅಭಿವೃದ್ಧಿಗೆ ಬಿಜೆಪಿ ರಾಜಕೀಯ ಇಚ್ಛಾಶಕ್ತಿ ತೋರಿದೆ: ಕೆ. ರತ್ನಪ್ರಭಾ

K Ratna Prabha says BJP has shown political will for the development of SC community

K Ratna Prabha says BJP has shown political will for the development of SC community

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರ (Karnataka Election) ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅಭಿವೃದ್ಧಿ ಮಾಡಲು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಬಿಜೆಪಿ ನಾಯಕಿ ಕೆ. ರತ್ನಪ್ರಭಾ ಹೇಳಿದ್ದಾರೆ.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ, ದಲಿತರ ಉದ್ಧಾರಕ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಆಶಯದಂತೆ, ಸಮಾಜ ಸುಧಾರಕ, ವಿಶ್ವ ಮಾನವತಾವಾದಿ ಬಾಬು ಜಗಜೀವನ್‌ರಾಂ ಕನಸಿನಂತೆ ಬಿಜೆಪಿ ಎಸ್‌ಸಿ ಜನಾಂಗದ ಸುಧಾರಣೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದೆ. ರಾಜ್ಯದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17 ಮೀಸಲಾತಿ ಹೆಚ್ಚಳ ಮಾಡಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಕೆ. ರತ್ನಪ್ರಭಾ ತಿಳಿಸಿದರು.

ಪರಿಶಿಷ್ಟ ಜಾತಿಗಳಿಗೆ ಈ ಹಿಂದೆ ನೀಡಲಾಗಿದ್ದ 15% ಮೀಸಲಾತಿಯಿಂದ ಕೆಲವೇ ಉಪಜಾತಿಗಳಿಗೆ ಲಾಭವಾಗುತ್ತಿತ್ತು. ಹೀಗಾಗಿ ಒಳಮೀಸಲಾತಿ ಜಾರಿಗೆ ಮಾಡಬೇಕೆಂದು 1990ರ ದಶಕದಿಂದ ಹೋರಾಟ ನಡೆಯುತ್ತಲೇ ಬಂದಿದೆ. ಇದರ ಪರಿಣಾಮವಾಗಿ 2005ರಲ್ಲಿ ಸದಾಶಿವ ಆಯೋಗ ರಚನೆಯಾಗಿ 2012ರಲ್ಲಿ ಆಯೋಗ ಒಳಮೀಸಲಾತಿ ಕುರಿತಂತೆ ತನ್ನ ವರದಿ ಸಲ್ಲಿಸಿತ್ತು. ಆದರೆ 2013-18ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಇದರ ಅನುಷ್ಠಾನ ಮಾಡಲಿಲ್ಲ. ದೀರ್ಘಕಾಲದ ಬೇಡಿಕೆಯಾಗಿದ್ದ ವರ್ಗೀಕರಣವನ್ನು ಜಾರಿಗೆ ತರಲು ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದು ಸಮಾಜದ ದುರ್ಬಲ ವರ್ಗಗಳ ಉನ್ನತಿಗೆ ಬಿಜೆಪಿಯ ಬದ್ಧತೆಯನ್ನು ತೋರಿಸುತ್ತದೆ ಎಂದು ಕೆ. ರತ್ನಪ್ರಭಾ ಹೇಳಿದರು.

ಇದನ್ನೂ ಓದಿ | Karnataka Election 2023: ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್‌ ಮಾಡಿ: ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಸವಾಲು

ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಸಮುದಾಯದ ಉಪ ಜಾತಿಗಳು ಒಳಮೀಸಲಾತಿ ಕಲ್ಪಿಸುವ ಈ ನಿರ್ಧಾರ ಐತಿಹಾಸಿಕವಾಗಿದ್ದು, ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಈ ಸಮುದಾಯದ ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮೋದಿ ಸರ್ಕಾರ, ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್‌ಗೆ 35,534 ಕೋಟಿ ರೂ. ಹಂಚಿಕೆ ಮಾಡಿ ವಾರ್ಷಿಕ 60 ಲಕ್ಷ ರೂ. ಸ್ಕಾಲರ್‌ಶಿಪ್ ನೀಡುತ್ತಿರುವುದು, ಇತರ ಹಲವು ಯೋಜನೆಗಳನ್ನು ಜಾರಿ ಮಾಡಿರುವುದು ನಿಜಕ್ಕೂ ಪರಿಶಿಷ್ಟ ಜಾತಿ ಪರ ಇರುವ ಕಾಳಜಿ ತೋರಿಸುತ್ತಿದೆ ಎಂದು ಕೆ. ರತ್ನಪ್ರಭಾ ಹೇಳಿದರು.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಈ ಸಮಯದಾಯಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಯಡಿಯೂರಪ್ಪನವರ ಸರ್ಕಾರ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗೆ 18,228.20 ಕೋಟಿ ರೂ. ಖರ್ಚು ಮಾಡಿತ್ತು. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರಬುದ್ಧ ಯೋಜನೆಯಡಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ವಿದೇಶಿ ವಿವಿಗಳಿಗೆ ನಿಯೋಜಿಸಲಾಗಿದ್ದು ಅದರ ಒಟ್ಟಾರೆ ಖರ್ಚನ್ನು ಭರಿಸುವ ಯೋಜನೆಯನ್ನು ಬಿಎಸ್‌ವೈಯವರು ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿದ್ದರು ಎಂದು ಕೆ. ರತ್ನಪ್ರಭಾ ಹೇಳಿದರು.

ಇದನ್ನೂ ಓದಿ | Congress Manifesto : ಸಪ್ತ ಭಾಗ್ಯ, ಮೀಸಲಾತಿ ಏರಿಕೆ, ಬಜರಂಗದಳ ನಿಷೇಧ; ಕಾಂಗ್ರೆಸ್‌ನ TOP 25 ಭರವಸೆಗಳು

ಬೊಮ್ಮಾಯಿ ನೇತೃತ್ವದ ಸರ್ಕಾರ ಕೂಡ ಪರಿಶಿಷ್ಟರಿಗೆ ವಿಶೇಷ ಸವಲಗಳನ್ನು ಕಲ್ಪಿಸಿದೆ. ಈ ವರ್ಷದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಿಪಿಎಲ್ ಕುಟುಂಬಕ್ಕೆ 75 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಯಲ್ಲಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ರಚನೆ, 58 ಕೋಟಿ ರೂ. ವೆಚ್ಚದಲ್ಲಿ ವಿಕಾಸಸೌಧ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣಕ್ಕೆ ಶಿಲಾನ್ಯಾಸ, ಲೋಕೋಪಯೋಗಿ ಇಲಾಖೆಯಿಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಲ್ಲಿ, 750 ಕೋಟಿ ರೂ. ವೆಚ್ಚದಲ್ಲಿ 100 ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯ ಹಾಗೂ 11 KRIES ವಸತಿ ಶಾಲೆಗಳ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅದೇ ರೀತಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮಾಸಿಕ ಭೋಜನ ವೆಚ್ಚ 1600 ರೂ. ನಿಂದ 1750 ರೂ.ಗೆ ಏರಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿಯ 12.80 ಲಕ್ಷ ವಿದ್ಯಾರ್ಥಿಗಳಿಗೆ 572.18 ಕೋಟಿ ರೂ. ವಿದ್ಯಾರ್ಥಿವೇತನ, ಭೂ ಒಡೆತನ ಯೋಜನೆಯಡಿ, ಕಳೆದೊಂದು ವರ್ಷದಲ್ಲಿ ಪರಿಶಿಷ್ಟ ಜಾತಿಯ 1,717 ಫಲಾನುಭವಿಗಳಿಗೆ 227.86 ಕೋಟಿ ರೂ. ವೆಚ್ಚದಲ್ಲಿ 2241.62 ಎಕರೆ ಜಮೀನು ವಿತರಣೆ ಸೇರಿ ಹಲವು ಯೋಜನೆಗಳನ್ನು ಬೊಮ್ಮಾಯಿ ಸರ್ಕಾರ ಜಾರಿ ಮಾಡಿದೆ ಎಂದರು.

ಇದನ್ನೂ ಓದಿ | Karnataka Election 2023: ಏಳು ಸುತ್ತಿನ ಕೋಟೆಯಂತೆ ಬಿಜೆಪಿಯ ಏಳು ಸುರಕ್ಷತೆಯ ಯೋಜನೆಗಳು; ಪ್ರಧಾನಿ ಮೋದಿ ಬಣ್ಣನೆ

ಈ ಹಿಂದಿನ ಯಾವುದೇ ಸರ್ಕಾರ ಕೂಡ ನೀಡದ ವಿಶೇಷ ಸವಲತ್ತುಗಳನ್ನು ಪರಿಶಿಷ್ಟ ಜಾತಿಯವರಿಗೆ ಬಿಜೆಪಿ
ನೀಡಿದೆ. ಪರಿಶಿಷ್ಟ ಜಾತಿಗೆ ಸಾಮಾಜಿಕ ನ್ಯಾಯವನ್ನು ರಾಜ್ಯ ಬಿಜೆಪಿ ಕೊಟ್ಟಿದೆ. ರಾಜಕೀಯವನ್ನು ಜಾತಿ ರಾಜಕೀಯವನ್ನಾಗಿ ಮಾಡದೆ, ಅಭಿವೃದ್ಧಿಯ ಹರಿಕಾರನಾಗಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ ಎಂದು ತಿಳಿಸಿದರು.

Exit mobile version