ಶಿವಮೊಗ್ಗ: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಅಪಪ್ರಚಾರ ಆಗುತ್ತಿದೆ. ಕೆಲ ಕಾರ್ಯಕರ್ತರಿಗೆ ಮೆಚ್ಯುರಿಟಿ ಕಡಿಮೆ, ಹೀಗಾಗಿ ರಾಜೀನಾಮೆ ಕೊಡುತ್ತಿದ್ದಾರೆ. ರಾಜೀನಾಮೆ ಕೊಡುವುದು ಹೇಡಿಗಳ ಲಕ್ಷಣ, ಒಬ್ಬರು ರಾಜೀನಾಮೆ ಕೊಟ್ಟರೆ, ಬೇರೊಬ್ಬರು ಪಕ್ಷ ಸೇರುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರ ರಾಜೀನಾಮೆ ಬಗ್ಗೆ ನಗರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ದೇಶದ್ರೋಹಿ ಕೊಲೆಗಾರರಿಗೆ ಬುದ್ಧಿ ಕಲಿಸುವವರೆಗೆ ಬಿಡಲ್ಲ. ಇಡೀ ಸಮಾಜ ಜಾಗೃತವಾಗುತ್ತಿರುವುದರಿಂದ ಸಹಜವಾಗಿ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಏಕೆ ಹಿಂದು ಕಾರ್ಯಕರ್ತರ ಕೊಲೆ ಆಗುತ್ತಿದೆ ಎಂಬ ಆಕ್ರೋಶ ಎಲ್ಲರಿಗೂ ಇದೆ ಎಂದರು.
ಕೊಲೆಗೆ ಕೊಲೆ ಮಾಡಬೇಕು ಎನ್ನುವ ಉದ್ದೇಶ ನಮಗೆ ಇಲ್ಲ, ಕಾನೂನು ಬದ್ಧವಾಗಿ ಮುಸಲ್ಮಾನ್ ಕೊಲೆಗಡುಕರಿಗೆ ಏನು ಬುದ್ಧಿ ಕಲಿಸಬೇಕೋ ಅದನ್ನು ಮಾಡುತ್ತೇವೆ. ಉತ್ತರ ಪ್ರದೇಶದಲ್ಲಿರುವಂತಹ ಕಠಿಣ ಕ್ರಮಗಳನ್ನು ನಮ್ಮಲ್ಲಿ ಏಕೆ ಕೈಗೊಳ್ಳುತ್ತಿಲ್ಲ ಎಂಬ ಮಾತು ಕೇಳಿಬರುತ್ತಿವೆ. ಕಾನೂನು ತಿದ್ದುಪಡಿ ಮಾಡಬೇಕು ಎನ್ನುವ ಬಗ್ಗೆ ಗೃಹ ಸಚಿವರ ಜತೆ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ | ಸಿದ್ದರಾಮೋತ್ಸವ | ಸಿದ್ದರಾಮಯ್ಯಗೆ ವರವೋ? ಶಾಪವೋ?
ಪ್ರವೀಣ್ ಹತ್ಯೆ ಬಳಿಕ ಮುಸಲ್ಮಾನ್ ಯುವಕನ ಕೊಲೆ ಏಕೆ ಆಗಿದೆ ಎಂಬ ಸ್ಪಷ್ಟತೆ ಇಲ್ಲ. ಹಿಂದು ಯುವಕರು ಕೊಲೆ ಮಾಡಿದರಾ? ಪ್ರೇಮ ಪ್ರಕರಣ ಕಾರಣವಾಯಿತಾ ಅಥವಾ ಮುಸ್ಲಿಮರೇ ಕೊಲೆ ಮಾಡಿದರಾ ಎಂಬುದು ಗೊತ್ತಿಲ್ಲ. ಹರ್ಷ, ಪ್ರವೀಣ್ ಕೊಲೆಯಾಗಿರಬಹುದು, ಆದರೆ ಈ ಮೂಲಕ ನಮ್ಮ ಸಿದ್ಧಾಂತವನ್ನು ಕೊಲ್ಲಲು ಸಾಧ್ಯವಿಲ್ಲ, ರಾಜೀನಾಮೆ ಕೊಡುತ್ತೇವೆ ಎನ್ನುವುದು ಹೇಡಿಗಳ ಲಕ್ಷಣ, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಹೀಗೆ ಮಾಡಬಾರದು ಎಂದರು.
ಪಕ್ಷವನ್ನು ನಾವು ಕಟ್ಟಿದ್ದಲ್ಲ, ಅನೇಕ ಹಿರಿಯರು ಪ್ರಾಣ ತ್ಯಾಗ ಮಾಡಿ ಕಟ್ಟಿದ್ದಾರೆ. ನಾವೆಲ್ಲ ಉನ್ನತ ಸ್ಥಾನಮಾನದಲ್ಲಿ ಇದ್ದೇವೆ. ಯುವ ಮೋರ್ಚಾ ಕಾರ್ಯಕರ್ತರು ಈಗ ಕಣ್ಣು ಬಿಡುತ್ತಿದ್ದಾರೆ, ಈಗಲೇ ರಾಜೀನಾಮೆ ಕೊಡುತ್ತೇನೆ ಎಂದರೆ ಹೇಗೆ? ರಾಜೀನಾಮೆ ಕೊಡುವುದು ನಂತರದ ವಿಷಯ. ನೀವು ಪಕ್ಷಕ್ಕೆ ಕೊಟ್ಟಿರುವ ಕೊಡುಗೆಯಾದರೂ ಏನು ಎಂಬುವುದನ್ನು ಅರಿಯಬೇಕು ಎಂದು ಹೇಳಿದರು.
ಕೆಲ ಮುಸಲ್ಮಾನರು ಗೂಂಡಾಗಿರಿ ಮೂಲಕ ಕೊಲ್ಲಲು ಯತ್ನಿಸುತ್ತಿದ್ದಾರೆ. ನಮ್ಮ ದೇಶಕ್ಕೆ ಬದಲಾವಣೆ ಮಾಡುವ ಶಕ್ತಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಏನು ನಿರ್ದೇಶನ ಕೊಡುತ್ತಾರೋ ಅದನ್ನು ಪಾಲಿಸುತ್ತೇವೆ. ಕೆಲ ಕಾರ್ಯಕರ್ತರು ಸಿಟ್ಟಿನಿಂದ ರಾಜೀನಾಮೆ ಕೊಟ್ಟಿದ್ದಾರೆ ಅಷ್ಟೇ, ಸಮಾಧಾನ ಮಾಡುತ್ತೇವೆ. ರಾಜೀನಾಮೆ ಕೊಡುವುದರಿಂದ ಹಿಂದುತ್ವ ಸಿದ್ಧಾಂತಕ್ಕೆ ಹಾಗೂ ನಮ್ಮ ನಾಯಕರಿಗೆ ಅಪಮಾನ ಮಾಡಿದ ಹಾಗೆ. ಹೀಗಾಗಿ ರಾಜೀನಾಮೆ ಕೊಟ್ಟಿರುವವರು ವಾಪಸ್ ಪಡೆಯಬೇಕು ಎಂದು ತಿಳಿಸಿದರು.
ಇದನ್ನೂ ಓದಿ | Praveen Nettaru | ಕೊಲೆ ಮಾಡುವ ಧೈರ್ಯವೇ ಬಾರದಂತೆ ಕ್ರಮ ಕೈಗೊಳ್ಳಿ: ಮಾಜಿ ಸಚಿವ ಈಶ್ವರಪ್ಪ