Site icon Vistara News

Kaatera Movie: ಕಾಟೇರ ಚಿತ್ರಕ್ಕೆ ಎದುರಾಯ್ತು ‘ಸರ್ಪ ದೋಷ’! ಅರಣ್ಯಾಧಿಕಾರಿಗೆ ದೂರು

Kaatera

ಬೆಂಗಳೂರು: ಬಿಡುಗಡೆಯಾಗಲು ಸಿದ್ಧಗೊಂಡಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅಭಿನಯದ ಕಾಟೇರ ಚಿತ್ರಕ್ಕೆ (Kaatera Movie) ಸಂಕಷ್ಟ ಎದುರಾಗಿದೆ. ಚಿತ್ರದಲ್ಲಿನ ಡೈಲಾಗ್‌ವೊಂದಕ್ಕೆ ವನ್ಯಜೀವಿ ಸಂರಕ್ಷಣಾ ಒಕ್ಕೂಟದಿಂದ ಆಕ್ಷೇಪ ವ್ಯಕ್ತವಾಗಿದ್ದು, ಚಿತ್ರದಲ್ಲಿನ ಆಕ್ಷೇಪಾರ್ಹ ಡೈಲಾಗ್‌ಗೆ ಕತ್ತರಿ ಹಾಕಬೇಕು ಎಂದು ಅರಣ್ಯಾಧಿಕಾರಿಗೆ ದೂರು ನೀಡಲಾಗಿದೆ.

ಡಿ.16ರಂದು ಬಿಡುಗಡೆಯಾದ ಕಾಟೇರ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಟ್ರೈಲರ್‌ಗೆ ಕೂಡ ದಾಖಲೆಯ ವೀವ್ಸ್‌ ಸಿಗುತ್ತಿದೆ. ಆದರೆ, ಚಿತ್ರದಲ್ಲಿ ಖಳನಟ ಹೇಳಿರುವ ಡೈಲಾಗ್‌ಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ಚಿತ್ರದಲ್ಲಿರುವ ಡೈಲಾಗ್‌ ಅನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿರುವ ಒಕ್ಕೂಟ, ಕ್ರಮಕ್ಕೆ ಆಗ್ರಹಿಸಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕರಿಗೆ ದೂರು ಸಲ್ಲಿಸಿದೆ.

ಚಿತ್ರದ ಟ್ರೈಲರ್‌ನಲ್ಲಿ ನಟ ಜಗಪತಿ ಬಾಬು ಅವರು, ಊರಿನ ಬಡ ಜನರನ್ನು ಉದ್ದೇಶಿಸಿ,” ಇವೆಲ್ಲ ಹಾವುಗಳಿದ್ದಂಗೆ. ವಿಷ ಇಲ್ಲ ಅಂದ್ರೆ ಹಿಡೀಬೇಕು. ವಿಷ ಇದ್ರೆ ಹೊಡೀಬೇಕು” ಎಂದು ಹೇಳಿದ್ದಾರೆ. ಈ ಡೈಲಾಗ್‌ಗೆ ಆಕ್ಷೇಪ ವ್ಯಕ್ತವಾಗಿದೆ. ಚಿತ್ರದಲ್ಲಿ ಹಾವುಗಳನ್ನು ಹೊಡೆದು ಸಾಯಿಸಬೇಕು ಎನ್ನುವ ಅರ್ಥದಲ್ಲಿ ಮಾತನಾಡಲಾಗಿದೆ. ಈ ಹೇಳಿಕೆ ಸಿನಿಮಾ ನೋಡುವವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಳಿವಿನ ಅಂಚಿನಲ್ಲಿರುವ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ. ವಿಷಕಾರಿ ಹಾವುಗಳನ್ನು ಉಳಿಸಿಕೊಂಡು ಹೋಗಬೇಕೇ ಹೊರತು ಹೊಡೆದು, ಕೊಲ್ಲೋಕೆ ಪ್ರಚೋದನೆ ನೀಡಬಾರದು ಎಂದು ಒಕ್ಕೂಟ ತಿಳಿಸಿದೆ.

ಇದನ್ನೂ ಓದಿ | Year Ender 2023: ಈ ವರ್ಷ ಅತೀ ಹೆಚ್ಚು ಸರ್ಚ್‌ ಆದ ಸಿನಿಮಾಗಳಿವು; ನೀವೂ ನೋಡಿದ್ರಾ?

ದೂರಿನಲ್ಲಿ ಏನಿದೆ?

ಕಾಟೇರ ಸಿನಿಮಾದಲ್ಲಿನ “ಇವರೆಲ್ಲ ಹಾವುಗಳು ಇದ್ದಂಗೆ, ವಿಷ ಇಲ್ಲ ಅಂದ್ರೆ ಹಿಡೀಬೇಕು, ವಿಷ ಇದ್ರೆ ಹೊಡೀಬೇಕು” ಎಂಬ ಡೈಲಾಗ್ ರದ್ದುಪಡಿಸಬೇಕು ಎಂದು ಕೋರಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟ ದೂರು ನೀಡಿದೆ.

ಕಾಟೇರ ಸಿನಿಮಾದಲ್ಲಿನ ಡೈಲಾಗ್ ಅನ್ನು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೀಕಿಸಿದ್ದು, ಚಿತ್ರದ ಟ್ರೈಲರ್ ಅನ್ನು ಮುಖ್ಯಮಂತ್ರಿಗಳೇ ರಿಲೀಸ್ ಮಾಡಿದ್ದಾರೆ. ಚಿತ್ರದಲ್ಲಿ ಹಾವುಗಳನ್ನು ಹೊಡೀರಿ, ಇಡೀರಿ ಎಂಬ ಡೈಲಾಗ್ ಅನ್ನು ಬಳಸಿರುವುದು ಸರಿಯಲ್ಲ. ಇದರಿಂದ ಸಮಾಜದಲ್ಲಿ ಪ್ರಾಣಿ ಸಂಕುಲದ ಮೇಲೆ ಬಹಳಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಹಾವುಗಳು ಸಹ ವನ್ಯಜೀವಿ ಸಂರಕ್ಷಣಾ ಕಾಯ್ದೆ ವ್ಯಾಪ್ತಿಗೆ ಒಳಪಡುವುದರಿಂದ ಅವುಗಳನ್ನು ಕೊಲ್ಲುವುದು ಕಾನೂನು ಅಪರಾಧವಾಗಲಿದೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆ ಪ್ರಕಾರವು ಪ್ರಚೋದನೆ ನೀಡಿದಂತಾಗಲಿದೆ.

ಹಾವುಗಳಿಗೆ ಭಾರತೀಯ ಹಿಂದು ಸಂಪ್ರದಾಯದಲ್ಲಿ ದೈವಿಕ ಸ್ಥಾನಮಾನವನ್ನು ನೀಡಿದ್ದು, ಇಂತಹ ಡೈಲಾಗ್‌ಗಳಿಂದ ಸಮಾಜದಲ್ಲಿ ಹಾವುಗಳನ್ನು ಹಿಡಿಯುವುದು ಮತ್ತು ಹೊಡೆಯುವುದು ಎರಡು ಕೂಡ ಹೆಚ್ಚಾಗಲಿದೆ. ಇದರಿಂದ ಪ್ರಾಣಿ ಸಂಕುಲಕ್ಕೆ ಅಪಾಯವಿದೆ. ತಕ್ಷಣವೇ ಈ ಚಿತ್ರದ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿ, ಈ ಡೈಲಾಗ್ ಅನ್ನು ಕೈ ಬಿಡುವಂತೆ ಆಗ್ರಹಿಸುತ್ತೇವೆ. ತಕ್ಷಣವೇ ಸರ್ಕಾರವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಈ ವಿಷಯವಾಗಿ ತಡೆಯಾಜ್ಞೆ ತರಬೇಕು.

ಇದನ್ನೂ ಓದಿ | Salaar Release Trailer: ʻಸಲಾರ್‌ʼ ಎರಡನೇ ಟ್ರೈಲರ್‌ ಔಟ್‌; ಪ್ರಭಾಸ್‌ ದರ್ಬಾರ್‌ ಜೋರು!

ಈಗಾಗಲೇ ಲಕ್ಷಾಂತರ ಜನ ಸಾಮಾಜಿಕ ಜಾಲತಾಣದಲ್ಲಿ ಈ ಡೈಲಾಗ್‌ನಿಂದ ಪ್ರೇರಣೆ ಪಡೆದಿರುವ ಸಾಧ್ಯತೆ ಇದೆ. ಡಿ.29ರಂದು ಈ ಚಿತ್ರವು ಬಿಡುಗಡೆಯಾಗುವುದರಿಂದ ಚಿತ್ರಕ್ಕೆ ಸೆನ್ಸಾರ್ ಮಂಡಳಿ ನೀಡಿರುವ ಪ್ರಮಾಣ ಪತ್ರವನ್ನು ತಕ್ಷಣವೇ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವನ್ಯಜೀವಿ ಸಂರಕ್ಷಣಾ ಒಕ್ಕೂಟ ಒತ್ತಾಯಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version