ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿನ ಕಬಿನಿ ಜಲಾಶಯಕ್ಕೆ (Kabini Dam) ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರು ಸೋಮವಾರ ಸಂಜೆ ಬಾಗಿನ ಅರ್ಪಿಸಿದರು. ಧನುರ್ ಲಗ್ನದಲ್ಲಿ ಪೂಜೆ ಸಲ್ಲಿಸಿ, ಸಿಎಂ, ಡಿಸಿಎಂ ಬಾಗಿನ ಅರ್ಪಣೆ ಮಾಡಿದರು. ಈ ವೇಳೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿ ಹಳೆ ಮೈಸೂರು ಭಾಗದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಉತ್ತಮ ಮಳೆಯಾಗಿ ರಾಜ್ಯ ಸಮೃದ್ಧಿಯಿಂದ ಕೂಡಿದೆ: ಸಿಎಂ ಸಿದ್ದರಾಮಯ್ಯ
ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿದೆ. ಇದರಿಂದ ರಾಜ್ಯ ಸಮೃದ್ಧಿಯಿಂದ ಕೂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮಿಳುನಾಡು ನಮಗೂ ಕಾವೇರಿ ನೀರು ಹಂಚಿಕೆ ಸಮಸ್ಯೆ ಉಂಟಾಗಿದೆ. ಇದರಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 47 ಟಿಎಂಸಿ ನೀರು ಬಿಡುವಂತೆ ಆದೇಶ ನೀಡಿತ್ತು. ಇದೀಗ ತಮಿಳುನಾಡಿಗೆ 80 ಟಿಎಂಸಿಗೂ ಹೆಚ್ಚು ನೀರು ಬಿಡಲಾಗಿದೆ. ರಾಜ್ಯದಲ್ಲಿ 66 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ರಾಜ್ಯ ಸಮೃದ್ಧಿಯಿಂದ ಕೂಡಿದೆ ಎಂದು
ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಬಿನಿ ಜಲಾಶಯ ನಮ್ಮೆಲ್ಲರ ಮರ್ಯಾದೆ ಉಳಿಸಿದೆ ಎಂದ ಡಿಸಿಎಂ
ಕಬಿನಿ ಜಲಾಶಯ ನಮ್ಮೆಲ್ಲರ ಮರ್ಯಾದೆ ಉಳಿಸಿದೆ. ತಮಿಳುನಾಡಿಗೆ ನೀರು ಬಿಡಬೇಕಿತ್ತು. ಜಲಾಶಯ ತುಂಬಿದ್ದರಿಂದ ನೀರನ್ನು ಬಿಡಲಾಗಿದೆ. ನಾನು, ಸಿಎಂ ಇಂದು ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೇವೆ. ಕಪಿಲೆ ಮೈದುಂಬಿ ಹರಿಯುತ್ತಿದ್ದಾಳೆ ಎಂದು ಬಾಗಿನ ಅರ್ಪಣೆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ | BJP-JDS Padayatra: ರಾಜ್ಯ ಸರ್ಕಾರದ ವಿರುದ್ಧ ಆ.3ರಿಂದ ಬೆಂಗಳೂರು-ಮೈಸೂರು ಪಾದಯಾತ್ರೆ: ಬಿ.ವೈ.ವಿಜಯೇಂದ್ರ
ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ; ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ
ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್) ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿದರು. ಬೆಳಗ್ಗೆ 11 ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ಜಲಾಶಯಕ್ಕೆ (KRS Dam) ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ ಅವರು, ನಂತರ ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದರು.
ಬಾಗಿನ ಅರ್ಪಿಸುವ ವೇಳೆ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಎನ್. ಚೆಲುವರಾಯಸ್ವಾಮಿ, ವೆಂಕಟೇಶ್, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಮೇಕೆದಾಟು ಯೋಜನೆ ಬಗ್ಗೆ ಚರ್ಚೆಗೆ ಸಿದ್ಧ ಎಂದ ಸಿದ್ದರಾಮಯ್ಯ
ಮೆಟ್ಟೂರು ಅಣೆಕಟ್ಟು ತುಂಬಿ ನೀರು ವ್ಯರ್ಥವಾಗುತ್ತಿದ್ದು, ಈ ಬಗ್ಗೆ ತಮಿಳುನಾಡು ಸರ್ಕಾರದೊಂದಿಗೆ ನಾವು ಮಾತನಾಡಲು ತಯಾರಿದ್ದೇವೆ. ಮೇಕೆದಾಟು ಯೋಜನೆಯಿಂದ ಅವರಿಗೆ ತೊಂದರೆಯಾಗದಿದ್ದರೂ ಮಾತನಾಡಲು ಅವರು ಸಿದ್ಧರಿಲ್ಲ. ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟರೇ ನಾವು ನಿರ್ಮಾಣ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಿಜೆಪಿ ಪಾದಯಾತ್ರೆ: ರಾಜಕೀಯವಾಗಿ ವಿರೋಧಿಸುತ್ತೇವೆ
ವಾಲ್ಮೀಕಿ ಮತ್ತು ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಮಾಡಲಿ, ನಾವೂ ಕೂಡ ರಾಜಕೀಯವಾಗಿ ವಿರೋಧಿಸುತ್ತೇವೆ. ವಾಲ್ಮೀಕಿ ಹಗರಣದಲ್ಲಿ ನಾವು 84.63 ಕೋಟಿ ಹಗರಣವಾಗಿದೆ ಎನ್ನುವುದು ನಿಜ. ಎಸ್.ಐ.ಟಿ ರಚನೆಯಾಗಿದ್ದು ತನಿಖೆಯಾಗುತ್ತಿದೆ. ಅವರೂ ಕೂಡ ಸಿಬಿಐ, ಇಡಿಯವರೂ ತನಿಖೆ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ | BJP-JDS Padayatra: ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡಲ್ಲ: ಗೃಹ ಸಚಿವ ಪರಮೇಶ್ವರ್
ಬಿಜೆಪಿ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ?
ಉಪಮುಖ್ಯಮಂತ್ರಿಗಳು ಅಯೋಗ್ಯ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ? ಅದಕ್ಕಾಗಿಯೇ 21 ಹಗರಣಗಳನ್ನು ಪಟ್ಟಿ ಮಾಡಿ ಹೇಳಿದ್ದೇನೆ ಎಂದರು. ಕೆಲವು ತನಿಖೆಗಳು ನಡೆಯುತ್ತಿವೆ. ರಾಘವೇಂದ್ರ ಸಹಕಾರಿ ಬ್ಯಾಂಕ್ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಇಂದಿನವರೆಗೂ ಸಿಬಿಐ ತನಿಖೆ ಪೂರ್ಣಗೊಳಿಸಿಲ್ಲ. ಅವರ ಅವಧಿಯಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ. 7-8 ಹಗರಣಗಳನ್ನು ಸಿಬಿಐಗೆ ವಹಿಸಲಾಗಿದೆ. ಇದೆ ಬಿಜೆಪಿ ನಾವು ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು. ಈಗ ಸಿಬಿಐ ಗೆ ಮೇಲೆ ಇವರಿಗೇನು ಪ್ರೀತಿ ಎಂದರು. ಈ ಕುರಿತ ದಾಖಲೆಗಳನ್ನು ನಾನು ಕೊಡುತ್ತೇನೆ ಎಂದರು.