ಬೆಂಗಳೂರು: ಕಬಿನಿ ಅಣೆಕಟ್ಟು ಬಿರುಕು ಬಿಟ್ಟಿಲ್ಲ, ನೀರು (Kabini Dam) ಸೋರಿಕೆಯಾಗುತ್ತಿಲ್ಲ. ಅಣೆಕಟ್ಟಿಗೆ ಯಾವುದೇ ತರಹದ ಅಪಾಯವಾಗಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ಕಬಿನಿ ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸುದ್ದಿಯಿಂದ ನದಿ ಪಾತ್ರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕಬಿನಿ ಅಣೆಕಟ್ಟು ಸುರಕ್ಷಿತವಾಗಿದೆ. ನದಿ ಪಾತ್ರದ ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ. ಅಣೆಕಟ್ಟು ಸುರಕ್ಷತೆಯ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದೆ ಎಂದು ಹೇಳಿದರು.
ನೀರಿನ ಹರಿವು ಹೆಚ್ಚಿದ್ದು, ನದಿ ಪಾತ್ರಗಳಲ್ಲಿ ಜನರು ಅನಗತ್ಯವಾಗಿ ಓಡಾಡದೆ ಸುರಕ್ಷಿತವಾಗಿ ಇರಬೇಕು. ಗುರುವಾರ ಸಂಜೆ ವೇಳೆಗೆ ತಮಿಳುನಾಡಿಗೆ 100 ಟಿಎಂಸಿಗೂ ಹೆಚ್ಚು ನೀರು ಹರಿದು ಹೋಗಿದೆ ಎಂದು ಹೇಳಿದರು.
ಇದನ್ನೂ ಓದಿ: Utthana Katha Spardhe 2024: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ; ಕಥೆ ತಲುಪಿಸಲು ಅ.10 ಕೊನೆಯ ದಿನ
ಕೇರಳ ರಾಜ್ಯ ಸಂಕಷ್ಟದಲ್ಲಿದ್ದು, ನಮ್ಮ ರಾಜ್ಯದ ಸಂಪೂರ್ಣ ಸಹಕಾರ ಅವರಿಗಿದೆ. ನಾವು ಕೇರಳ ಹಾಗೂ ಕೇರಳಿಗರ ಜತೆಗಿದ್ದೇವೆ. ಯಾವುದೇ ರೀತಿಯ ಸಹಾಯ ಮಾಡಲೂ ತಯಾರಿದ್ದೇವೆ. ಮೃತರ ಆತ್ಮಗಳಿಗೆ ಶಾಂತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.