ಬೆಂಗಳೂರು, ಕರ್ನಾಟಕ: ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದ ಶ್ರೀಮಂತ್ ಪಾಟೀಲ್ ಅವರು 2019ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಗವಾಡ ಮತದಾರರು ಶ್ರೀಮಂತ್ ಪಾಟೀಲ್ ಅವರನ್ನು ಸೋಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಅವರಿಗೆ ಗೆಲುವಿನ ಹಾರ ತೊಡಸಿದ್ದಾರೆ. ಭರಮಗೌಡ(ರಾಜು) ಕಾಗೆ ಅವರು 82838 ಮತಗಳನ್ನು ಪಡೆದುಕೊಂಡರೆ, ಬಿಜೆಪಿಯ ಶ್ರೀಮಂತ್ ಪಾಟೀಲ್ 73948 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದ್ದಾರೆ. ಅಥಣಿಯ ಪಕ್ಕದ ಕ್ಷೇತ್ರವೇ ಕಾಗವಾಡ ಆಗಿದೆ. ಇಲ್ಲಿಯೂ ಲಕ್ಷ್ಮಣ್ ಸವದಿ ಬಿಜೆಪಿ ಬಿಟ್ಟಿರುವ ಎಫೆಕ್ಟ್ ಆದಂಗಿದೆ(Kagwad Results).
2023ರ ಚುನಾವಣಾ ಅಭ್ಯರ್ಥಿಗಳು
ಬಿಜೆಪಿಯಿಂದ ಶ್ರೀಮಂತ್ ಪಾಟೀಲ್ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ರಾಜು ಕಾಗೆ ಅವರು ಕಣದಲ್ಲಿದ್ದರು. ಆಪ್‌ನಿಂದ ಗುರಪ್ಪ ಬಿ ಮುಗದುಮ್ ಅವರು ಕಣದಲ್ಲಿದ್ದಾರೆ.
2018ರ ಚುನಾವಣೆ ಫಲಿತಾಂಶ ಏನಾಗಿತ್ತು?
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತುರುರಿಸಿನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್‌ನಿಂದ ಶ್ರೀಮಂತ್ ಪಾಟೀಲ್ ಹಾಗೂ ಬಿಜೆಪಿಯಿಂದ ರಾಜು ಕಾಗೆ ಅವರು ಸ್ಪರ್ಧಿಸಿದ್ದರು. ಈ ವೇಳೆ, ಶ್ರೀಮಂತ್ ಪಾಟೀಲ್ ಅವರು 83060 ಮತಗಳನ್ನು ಪಡೆದುಕೊಂಡರೆ, ರಾಜು ಕಾಗೆ ಅವರು 50118 ಮತಗಳನ್ನು ಪಡೆದುಕೊಂಡಿದ್ದರು. ಶ್ರೀಮಂತ್ ಪಾಟೀಲ್ ಅವರು ಗೆಲುವು ಸಾಧಿಸಿದ್ದರು. ಮುಂದೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಶ್ರೀಮಂತ್ ಪಾಟೀಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡರು. ಬಿಜೆಪಿಯಲ್ಲಿದ್ದ ರಾಜು ಕಾಗೆ ಅವರು ಕಾಂಗ್ರೆಸ್ ಪಾಳೆಯಕ್ಕೆ ಬಂದರು. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮತ್ತೆ ಇವರಿಬ್ಬರ ನಡುವೆ ಕದನದಲ್ಲಿ ಶ್ರೀಮಂತ್ ಪಾಟೀಲ್ ಅವರು ಗೆದ್ದು ನಗೆ ಬೀರಿದರು.