Site icon Vistara News

Kalaburagi News: ಕಲಬುರಗಿ ಉಚ್ಚಾಯಿ ರಥೋತ್ಸವದಲ್ಲಿ ದುರಂತ; ತೇರಿನ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ದುರ್ಮರಣ

Kalaburagi News

ಕಲಬುರಗಿ: ನಗರದಲ್ಲಿ (Kalaburagi News) ಶ್ರೀ ಶರಣ ಬಸವೇಶ್ವರ ಜಾತ್ರಾ ಮಹೋತ್ಸವದ (Sri Sharana Basaveshwara Jatre) ಭಾಗವಾಗಿ ಶುಕ್ರವಾರ ನಡೆದ ಉಚ್ಚಾಯಿ ರಥೋತ್ಸವದಲ್ಲಿ ತೇರಿನ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ಸಿಬ್ಬಂದಿ ದುರ್ಮರಣ ಹೊಂದಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ಬೀದರ್ ಜಿಲ್ಲೆ ಇಟಗಾ ಗ್ರಾಮದ ರಾಮು ಸಿದ್ದಪ್ಪ (28) ಮೃತ ದುದೈವಿ. ಅಶೋಕರೆಡ್ಡಿ ಗಾಯಾಳು. ತೇರು ಎಳೆಯುವ ವೇಳೆ ಉಂಟಾದ ಗದ್ದಲ, ಭಕ್ತರನ್ನು ನಿಯಂತ್ರಿಸುವ ವೇಳೆ ಸಿಬ್ಬಂದಿ ಚಕ್ರಕ್ಕೆ ಸಿಲುಕಿ ಸಾವಿಗೀಡಾಗಿದ್ದಾರೆ. ಗಾಯಾಳು ಸಿಬ್ಬಂದಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಉಂಟಾದ ಗದ್ದಲದ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರ್‌.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Dead Body Found : ವಾಟರ್‌ ಟ್ಯಾಂಕ್‌ನಲ್ಲಿತ್ತು ಕೊಳೆತ ಶವ; ಅದೇ ನೀರು ಕುಡಿದವರು ಕಕ್ಕಾಬಿಕ್ಕಿ

ತಲೆ ಮೇಲೆ ಹರಿದ ಲಾರಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು, ಮತ್ತೊಬ್ಬ ಗಂಭೀರ

ಆನೇಕಲ್: ವೇಗವಾಗಿ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಮಿರ್ಜಾ ರಸ್ತೆಯಲ್ಲಿ ಘಟನೆ (Road Accident) ನಡೆದಿದೆ.

ರಾಕೇಶ್ (28) ಮೃತ ದುರ್ದೈವಿ. ಮತ್ತೋರ್ವ ಅರಣ್ಯ ಇಲಾಖೆ ಸಿಬ್ಬಂದಿ ವಿನಯ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಇವರಿಬ್ಬರು ಆನೇಕಲ್ ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಬೈಕ್‌ನಲ್ಲಿ ತೆರಳಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ರಾಕೇಶ್ ತಲೆಯ ಮೇಲೆಯೇ ಲಾರಿಯ ಚಕ್ರ ಹರಿದಿದೆ. ಪರಿಣಾಮ ನಜ್ಜುಗುಜ್ಜಾದ ರಾಕೇಶ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಇದನ್ನೂ ಓದಿ | Accident Case : ಮರ ಕಡಿಯುವಾಗ ಕರೆಂಟ್‌ ಶಾಕ್‌ಗೆ ಬಲಿ; ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು

ಅಪಘಾತದಲ್ಲಿ ವಿನಯ್‌ಗೂ ಗಂಭೀರ ಗಾಯವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ವಿದ್ಯುತ್ ಶಾಕ್‌ನಿಂದ ದಿನಗೂಲಿ ಕಾರ್ಮಿಕ ಸಾವು

ತುಮಕೂರು: ವಿದ್ಯುತ್‌ ಶಾಕ್‌ ಹೊಡೆದ ಪರಿಣಾಮ ದಿನಗೂಲಿ ಕಾರ್ಮಿಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ. ತುಮಕೂರಿನ ಕ್ಯಾದಗೊಂಡನಹಳ್ಳಿಯಲ್ಲಿ ಅವಘಡ ನಡೆದಿದೆ. ನರೇಂದ್ರ ಕುಮಾರ್ (25) ಮೃತ ದುರ್ದೈವಿ. ನರೇಂದ್ರ ಕುಮಾರ್‌ ತುಮಕೂರಿನ ಮಧುಗಿರಿ ತಾಲೂಕಿನ ದೊಡ್ಡಯಲ್ಕೂರು ಗ್ರಾಮದ ನಿವಾಸಿಯಾಗಿದ್ದಾರೆ.

ವಿದ್ಯುತ್ ತಂತಿಗೆ ಅಡ್ಡಿಯಾಗಿದ್ದ ಮರವನ್ನು ಕಡಿಯುವಾಗ ವಿದ್ಯುತ್ ಸ್ಪರ್ಶ ಆಗಿದೆ. ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾರೆ. ಇತ್ತ ಮೃತ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು. ಮಧುಗಿರಿ ಸರ್ಕಾರಿ ಆಸ್ಪತ್ರೆ ಎದುರು ಮೃತ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version