Site icon Vistara News

Karnataka Election: ಕಲಬುರಗಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 35.5 ಲಕ್ಷ ರೂಪಾಯಿ ವಶಕ್ಕೆ

Kalaburagi Police seize 35.5 lakh Rs that was being transported without documents

ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ವಿವಿಧ ರೀತಿಯ ಆಮಿಷಗಳನ್ನು ರಾಜಕೀಯ ನಾಯಕರು ಒಡ್ಡುತ್ತಿದ್ದಾರೆ. ವಿವಿಧೆಡೆ ಅಕ್ರಮವಾಗಿ ಮದ್ಯ, ಹಣ ಹಾಗೂ ಇತರ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿದೆ. ಇಂಥವುಗಳಿಗೆ ಕಡಿವಾಣ ಹಾಕಲು ಚೆಕ್‌ಪೋಸ್ಟ್‌ಗಳಲ್ಲಿ ನಿಗಾ ಇಡಲಾಗಿದೆ. ಈ ನಡುವೆ ಗದಗ, ಕಲಬುರಗಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲಬುರಗಿಯಲ್ಲಿ 35.50 ಲಕ್ಷ

ಕಲಬುರಗಿ: ಚುನಾವಣೆ ದಿನಾಂಕ‌ ಘೋಷಿಸಿದ ಬೆನ್ನಲ್ಲೇ ತೆಲಂಗಾಣದಿಂದ ಕಲಬುರಗಿಗೆ ಸಾಗಿಸುತ್ತಿದ್ದ 35,50,000 ಲಕ್ಷ ರೂ.ಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿ, ಮೂವರನ್ನು ವಶಕ್ಕೆ ಪಡೆದಿದ್ದಾರೆ. ತೆಲಂಗಾಣದ ರಿಬ್ಬನಪಲ್ಲಿ ಇಂಟರ್ ಸ್ಟೇಟ್ ಚೆಕ್ ಪೊಸ್ಟ್‌ನಲ್ಲಿ ಹಣ ಸೀಜ್ ಮಾಡಲಾಗಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಪಂಚರಾಲಾ ಗ್ರಾಮದ‌ ದೇವೇಂದ್ರ ರೆಡ್ಡಿ, ಮಲ್ಲೇಶ್ ಹಾಗೂ ದಯಾಕರ ರೆಡ್ಡಿ ಎಂಬುವವರನ್ನು ಬಂಧಿಸಲಾಗಿದೆ.

ಕಲಬುರಗಿ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 35.5 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗದಗದಲ್ಲಿ 2.5 ಲಕ್ಷ ರೂಪಾಯಿ ಸೀಜ್

ಗದಗ: ನಗರದ ಜೆಟಿ ಕಾಲೇಜಿನ ಚೆಕ್‌ಪೋಸ್ಟ್ ಬಳಿ ಮಂಗಳವಾರ ತಡರಾತ್ರಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ರೂ.ಗಳನ್ನು ಗದಗ ಪೊಲೀಸರು ಜಪ್ತಿ ಮಾಡಿದ್ದಾರೆ. ಕೊಪ್ಪಳದಿಂದ ಗದಗ ಕಡೆಗೆ ಬರುತ್ತಿದ್ದ ವ್ಯಕ್ತಿಯ ಬಳಿಯಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ

ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಕ್ರಮ

ಕಾರವಾರ: ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾದ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಜಿಲ್ಲೆಯ ಚೆಕ್‌ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ 3 ಅಂತಾರಾಜ್ಯ, 14 ಅಂತರ ಜಿಲ್ಲಾ, 8 ಜಿಲ್ಲಾ ಚೆಕ್‌ಪೋಸ್ಟ್‌ ಸ್ಥಾಪನೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯ ಗಡಿಗಳಲ್ಲಿ ಹದ್ದಿನ ಕಣ್ಣಿರಿಸಿರುವ ಪೊಲೀಸ್ ಇಲಾಖೆ, ಜಿಲ್ಲೆಯ ಒಳಪ್ರವೇಶಿಸುವ ಪ್ರತಿಯೊಂದು ವಾಹನ ತಪಾಸಣೆ ಮಾಡುತ್ತಿದೆ. ಮದ್ಯ, ಹಣ, ಚುನಾವಣಾ ಆಮಿಷಕ್ಕೆ ಒಡ್ಡುವ ವಸ್ತುಗಳ ಸಾಗಾಟ, ಅನುಮಾನಾಸ್ಪದ ವರ್ತನೆ ಕಂಡುಬಂದಲ್ಲಿ ಕೂಡಲೇ ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ | Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೈ ಅಲರ್ಟ್

ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ, ಹಣ ಸಾಗಾಟ ತಡೆಗೆ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಗಡಿ ಚೆಕ್ ಪೋಸ್ಟ್ ಸೇರಿ ವಿವಿಧೆಡೆ ಈಗಾಗಲೇ 61 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಈಗಾಗಲೇ ನಗದು, ಸೀರೆ, ಮದ್ಯ ಸೇರಿ‌ 2 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಿಲ್ಲೆಯಲ್ಲಿ ಜಪ್ತಿ ಮಾಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲು 500ಕ್ಕೂ ಅಧಿಕ‌ ಚುನಾವಣೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.

Exit mobile version