ಕಲಬುರಗಿ: ಸರ್ಕಾರ ಏನೇ ಮಾಡಿದರೂ ಅಲ್ಪಸಂಖ್ಯಾತರ ತುಷ್ಟೀಕರಣ (Muslim Appeasement) ಎಂದು ಆಪಾದಿಸುವ ಬಿಜೆಪಿ ಮತ್ತು ಜೆಡಿಎಸ್ (BJP JDS) ಪಕ್ಷಗಳಿಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ (Basavaraja Rayareddy) ಅವರು ತಿರುಗೇಟು ನೀಡಿದ್ದಾರೆ.
ಬಿಜೆಪಿಯವರು ಬಹಳ ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ನೀಡಲಾಗಿದೆ ಎಂದು ಆರೋಪಿಸುತ್ತಾರೆ. ನಾವು ಎಲ್ಲ ಅಲ್ಪಸಂಖ್ಯಾತರಿಗೂ ಬಜೆಟ್‌ನಲ್ಲಿ ಹಣ ನೀಡಿದ್ದೇವೆ. ಅಲ್ಪಸಂಖ್ಯಾತರು ಎಂದರೆ ಬರೀ ಮುಸ್ಲಿಮರು ಮತ್ತು ಕ್ರೈಸ್ತರು ಅಲ್ಲ. ರಾಜ್ಯದಲ್ಲಿ 17% ಮೈನಾರಿಟಿ ಇದ್ದಾರೆ ಎಂದು ಹೇಳಿದ ಅವರು, ಪ್ರತಿ ಸಾರಿಯೂ ಮುಸ್ಲಿಮರಿಗೆ ಕೊಟ್ರಿ, ಮುಸ್ಲಿಮರಿಗೆ ಕೊಟ್ರಿ ಎಂದು ಗುಲ್ಲೆಬ್ಬಿಸುತ್ತಾರೆ. ಮುಸ್ಲಿಮರು ನಮ್ಮ ದೇಶದವರಲ್ವಾ? ಎಂದು ಪ್ರಶ್ನೆ ಮಾಡಿದರು. ಲಿಂಗಾಯತ ಸಮುದಾಯಕ್ಕೆ ವಚನ ಮಂಟಪ ,ಬಸವ ಮಂಟಪ ಕ್ಕೂ ಹಣ ನೀಡಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಸರ್ಕಾರಿ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಹಾಗಿದ್ದರೆ ಬಸ್ ನಲ್ಲಿ ಕೇವಲ ಮುಸ್ಲಿಂ ಮಹಿಳೆಯರು ಮಾತ್ರ ಹೋಗ್ತಾರಾ? ಎಲ್ಲ ವರ್ಗದವರು ಸಹ ಉಚಿತವಾಗಿ ಹೋಗುತ್ತಾರಲ್ವಾ ಎಂದು ಹೇಳಿದರು. ಗೃಹ ಜ್ಯೋತಿ ಉಚಿತ ವಿದ್ಯುತ್ ಎಲ್ಲರಿಗೂ ಸಿಗುತ್ತಿದೆಯಲ್ವಾ? ಗೃಹ ಲಕ್ಷ್ಮಿ ಯೋಜನೆ ಮುಸ್ಲಿಂ ಮಹಿಳೆಯರಿಗೆ ಮಾತ್ರ ಸಿಗುತ್ತಿದೆಯಾ? ಹಾಗಾಗಿ ಬಿಜೆಪಿ ಹಗುರವಾಗಿ ಮಾತನಾಡೋದನ್ನ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸಭಾ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ ಇಲ್ಲ
ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡುವ ಭೀತಿ ಬಗ್ಗೆ ಪ್ರತಿಕ್ರಿಯಸಿದ ಅವರು, ಕಾಂಗ್ರೆಸ್‌ಗೆ ಅಡ್ಡ ಮತದ ಭೀತಿ ಇಲ್ಲ. ಒಬ್ಬ ಅಭ್ಯರ್ಥಿಗೆ 40 ಮೊದಲ ಪ್ರಶಸ್ತ್ಯದ ಮತದಾನ ಆದ್ರೆ ಸಾಕು. ನಮ್ಮಲ್ಲಿ 135 ಮತಗಳಿವೆ. ಹೀಗಾಗಿ ಮೂವರು ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಹೇಳಿದರು ಬಸವರಾಜ ರಾಯರೆಡ್ಡಿ.
ನಮ್ಮಲ್ಲಿ ಯಾರೂ ಅಡ್ಡ ಮತದಾನ ಮಾಡೋದಿಲ್ಲ. ಮಾಡುವ ಹಾಗೂ ಇಲ್ಲ. ಮತದಾನ ಮಾಡಿದ್ದನ್ನು ತೋರಿಸಬೇಕಾಗುತ್ತದೆ ಎಂದು ಹೇಳಿದ ಅವರು, ಬಿಜೆಪಿಯ ಒಬ್ಬ ಅಭ್ಯರ್ಥಿ ಗೆಲುವು ಆಗುತ್ತದೆ ಅಷ್ಟೆ. ಜೆಡಿಎಸ್‌ನಿಂದ ಸುಮ್ಮನೆ ಸೋಲುವುದಕ್ಕೆ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ ಎಂದು ಹೇಳಿದರು. ನಮಗೆ ಬಿಜೆಪಿಯ ಒಂದೆರಡು ಮತಗಳು ಬರುವ ಸಾಧ್ಯತೆ ಇದೆ ಎಂದಿದ್ದಾರೆ.
ಬಜೆಟ್‌ನಲ್ಲಿ ಆರ್ಥಿಕ ಸಲಹೆಗಾರನಾಗಿ ಕೆಲಸ ಮಾಡಿದ್ದೇನೆ
ಬಜೆಟ್ ತಯಾರಿಯ ಬಗ್ಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಸಿದ್ಧತೆ ಮಾಡಲು ಹೇಳಿದರು. ನಾನು ಆರ್ಥಿಕ ಸಲಹೆಗಾರನಾಗಿ ಸಿದ್ದತೆ ಮಾಡಿದ್ದೇನೆ. ಈ ಬಾರಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃಧ್ಧಿ ಮಂಡಳಿಗೆ ಐದು ಸಾವಿರ ಕೋಟಿ ಇಟ್ಟಿದ್ದೇವೆ, ಐದು ಸಾವಿರ ಕೋಟಿಗೆ ಕ್ರಿಯಾ ಯೋಜನೆ ಮಾಡುವ ನಿಟ್ಟಿನಲ್ಲಿ ಕಾರ್ಯದರ್ಶಿಗೆ ಎರಡು ದಿನದಲ್ಲಿ ನಿರ್ದೇಶನ ನೀಡಲಾಗುವುದು ಎಂದರು.
ನಾನು ಯಾವತ್ತು ಸರ್ಕಾರದ ಸೌಲಭ್ಯ ಪಡೆದುಕೊಳ್ಳುವುದಿಲ್ಲ. ಮನೆ ಬಾಡಿಗೆ, ನನ್ನ ಸಂಬಳ, ಖರ್ಚು ವೆಚ್ಚ ನಾನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ : Hindu Temples : ದೇಗುಲದ ಹಣ ಚರ್ಚ್, ಮಸೀದಿಗೆ ಹೋಗ್ತಿದೆ ಎನ್ನೋದು ಸುಳ್ಳು; ಅರ್ಚಕರ ಸಂಘ
ದೇವಸ್ಥಾನದ ಹುಂಡಿಗೆ ಕೈ ಹಾಕಿಲ್ಲ ಎಂದ ರಾಯರೆಡ್ಡಿ
ದೇವಸ್ಥಾನಗಳ ಹುಂಡಿಗೆ ನಾವು ಯಾವತ್ತೂ ಕೈ ಹಾಕಿಲ್ಲ. ದೇವಸ್ಥಾನದ ಹಣವನ್ನು ದೇವಸ್ಥಾನಕ್ಕೇ ಖರ್ಚು ಮಾಡಲಾಗುತ್ತದೆ ಎಂದು ಹೇಳಿದ ರಾಯರೆಡ್ಡಿ ಅವರು, ಮುಖ್ಯಮಂತ್ರಿಗಳ ಮನೆ ನವೀಕರಣ ಮಾಡುವ ಅವಶ್ಯಕತೆ ಇತ್ತು. ಯಾವುದೇ ದೊಡ್ಡ ಮಟ್ಟದ ಹಣ ಅಲ್ಲಿ ಖರ್ಚಾಗಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಣಾಳಿಕೆ?
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾದ ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಸೇರಿಸುವ ಬಗ್ಗೆ ಕೇಳಿದಾಗ ಅದನ್ನು ಪ್ರಣಾಳಿಕೆ ಸಮಿತಿ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಏಳನೆ ವೇತನ ಆಯೋಗಕ್ಕೆ ಸಂಬಂಧಿಸಿ ಸಮಿತಿ ರಚನೆಯಾಗಿದೆ. ಇಷ್ಟರಲ್ಲಿಯೇ ವರದಿ ಬರಲಿದೆ. ಆಯೋಗವು ಸಿಎಂ ಹೇಳಿದ್ದನ್ನು ಒಪ್ಪಿಕೊಳ್ಳಲಿದೆ ಎಂದು ಹೇಳಿದರು. ಈಗಾಗಲೇ 17 ಶೇಕಡಾ ವೇತನ ಹಾಗು ಹೆಚ್ಚಳದ ಬಗ್ಗೆ ತೀರ್ಮಾನ ಆಗಿದೆ ಎಂದು ರಾಯರೆಡ್ಡಿ ತಿಳಿಸಿದರು.