Site icon Vistara News

country made pistol | ಮಧ್ಯಪ್ರದೇಶದಲ್ಲಿ ನಾಡ ಬಂದೂಕು ಖರೀದಿಸಿ ಭೀಮಾತೀರದಲ್ಲಿ ಅಕ್ರಮ ಮಾರಾಟ

nada banduku

ಕಲಬುರಗಿ: ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ನಾಡ ಪಿಸ್ತೂಲ್ (country made pistol) ಖರೀದಿಸಿ ಅದನ್ನು ತಂದು ಕಲಬುರಗಿ ಭಾಗದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಕಲಬುರಗಿಯ ಅಫಜಲಪುರ ಪೊಲೀಸರು ಬಂಧಿಸಿದ್ದಾರೆ. ನಾಡ ಪಿಸ್ತೂಲ್ ಮಾರಾಟ ಮತ್ತು ಖರೀದಿ ದಂಧೆಯಲ್ಲಿ ತೊಡಗಿದ್ದ ಭೀಮಣ್ಣ, ಸಿದ್ದಪ್ಪ, ಸಲೀಂ, ಪರಸಯ್ಯ ಎಂಬ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತರಿಂದ ನಾಲ್ಕು ನಾಡ ಪಿಸ್ತೂಲ್ ಹಾಗೂ 18 ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಭೀಮಣ್ಣ ಎಂಬಾತ ಮಧ್ಯಪ್ರದೇಶದಿಂದ 20 ಸಾವಿರಕ್ಕೆ ಪಿಸ್ತೂಲ್‌ ಖರೀದಿಸಿ ಬಳಿಕ ಕಲಬುರಗಿಯಲ್ಲಿ 65 ರಿಂದ 80 ಸಾವಿರಕ್ಕೆ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ.

ಖರೀದಿ ಮಾಡಿದವರ ಕಥೆಯೇ ರೋಚಕ

ಭೀಮಣ್ಣನಿಂದ ಪಿಸ್ತೂಲ್‌ ಖರೀದಿ ಮಾಡಿದ ಒಬ್ಬೊಬ್ಬರ ಕಥೆಯೂ ರೋಚಕವಾಗಿಗೆ. ಪಿಸ್ತೂಲು ಖರೀದಿಸಿದವರಲ್ಲಿ ಸಲೀಂ ಎಂಬವನೊಬ್ಬನಿದ್ದಾನೆ. ಇವನು ಅಲ್ಲಿ ನಿಧಿ ಇದೆ, ಇಲ್ಲಿ ನಿಧಿ ಇದೆ ಎಂದು ಜನರನ್ನು ನಂಬಿಸುತ್ತಿದ್ದ. ಅವರಿಂದ ದುಡ್ಡು ಪಡೆದು ಬಳಿಕ ನಿಧಿಯೂ ಇಲ್ಲ, ಅವನೂ ಇಲ್ಲ ಎಂಬಂತೆ ವಂಚನೆ ಮಾಡುತ್ತಿದ್ದ. ಈ ನಡುವೆ, ಸಲೀಂ ನಮಗೆಲ್ಲ ಮೋಸ ಮಾಡಿದ್ದಾನೆ ಎಂದು ತಿಳಿದ ಊರವರು ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದರು. ಹೀಗಾಗಿ ಜನರಿಂದ ರಕ್ಷಣೆ ಪಡೆಯಲು, ನಾಡ ಪಿಸ್ತೂಲ್ ಖರೀದಿ ಮಾಡಿ ಜತೆಗಿಟ್ಟುಕೊಳ್ಳುತ್ತಿದ್ದ ಸಲೀಂ.
ಇತ್ತ ಮತ್ತೊಬ್ಬ ಆರೋಪಿ ಪರಸಯ್ಯ ಎಂಬಾತ ಆಸ್ತಿ ವಿಚಾರದಲ್ಲಿ ಗಲಾಟೆ ಸಂಬಂಧ ಪಿಸ್ತೂಲ್ ಖರೀದಿ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನಾಡ ಪಿಸ್ತೂಲ್ ದಂಧೆಯ ಹಿಂದಿರುವ ಕಿಂಗ್‌ ಪಿನ್ ಸೈಫನ್ ಎಂಬಾತ ಎಸ್ಕೇಪ್ ಆಗಿದ್ದು, ಆತನ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಲಬುರಗಿ ಪೊಲೀಸ್‌ ವರಿಷ್ಠಾಧಿಕಾರಿ ಇಷಾ ಪಂತ್, ಉತ್ತರ ಕರ್ನಾಟಕದ ಅಕ್ರಮ ಪಿಸ್ತೂಲ್ ದಂಧೆಗೆ ಮಧ್ಯಪ್ರದೇಶ ಲಿಂಕ್ ಇರುವುದು ತನಿಖೆ ವೇಳೆ ಬಯಲಾಗಿದೆ. ಮಧ್ಯ ಪ್ರದೇಶದಲ್ಲಿ ರೆಡಿ ಆಗಿ ಭೀಮಾ ತೀರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮಧ್ಯವರ್ತಿ ಆರೋಪಿ ಸೈಫನ್‌ ಎಂಬಾತ ಎಸ್ಕೇಪ್‌ ಆಗಿದ್ದು, ಅಕ್ರಮ ಪಿಸ್ತೂಲ್ ದಂಧೆಯ ಪ್ರಕರಣದಲ್ಲಿ ಈಗಾಗಲೇ 10 ಕೇಸ್‌ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Country-made pistol | ಬೆಂಗಳೂರಿಗೆ ನಾಡ ಪಿಸ್ತೂಲು ಪೂರೈಕೆಗೆ ಮುಂಬೈ ಗ್ಯಾಂಗ್‌ಸ್ಟರ್ ಲಿಂಕ್‌

Exit mobile version