ಕಲಬುರಗಿ: ಜಿಲ್ಲೆಯ ಆಳಂದದಲ್ಲಿರುವ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ಶಿವಲಿಂಗ ಪೂಜೆಯ ವಿಚಾರ ಮತ್ತೆ ಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ ಶಿವರಾತ್ರಿಯಂದು ಪೂಜೆಗೆ ಅವಕಾಶ ಸಿಗುವುದೇ ಇಲ್ಲವೇ ಎಂಬ ಗೊಂದಲ ಎದುರಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ಲಾಡ್ಲೇ ಮಶಾಕ್ ದರ್ಗಾದಲ್ಲಿ ಒಂದು ಶಿವಲಿಂಗವಿದ್ದು, ಇದಕ್ಕೆ ಪೆಬ್ರವರಿ 18ರಂದು ಶಿವರಾತ್ರಿ ದಿನ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಹಿಂದೂ ಸಮುದಾಯ ಕೋರಿತ್ತು. ಇದಕ್ಕೆ ಕಲಬುರಗಿ ವಕ್ಫ್ ಟ್ರಿಬ್ಯೂನಲ್ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿತ್ತು. ಹದಿನೈದು ಜನರಿಗೆ ಪೂಜೆಗೆ ಅವಕಾಶ ನೀಡಲಾಗಿತ್ತು.
ಇದೀಗ ವಕ್ಫ್ ಟ್ರಿಬ್ಯೂನಲ್ ಕೋರ್ಟ್ ಆದೇಶ ಪ್ರಶ್ನಿಸಿ ದರ್ಗಾ ಕಮಿಟಿಯು ಹೈಕೋರ್ಟ್ ಮೆಟ್ಟಿಲೇರಿದೆ. ಶಿವಲಿಂಗ ಪೂಜೆಗೆ ಅವಕಾಶ ನೀಡಬಾರದು ಎಂದು ವಾದಿಸಿದೆ. ಇಂದು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ವಿಚಾರಣೆ ಸಾಧ್ಯತೆಯಿದೆ.
ನಾಳೆ ಶಿವರಾತ್ರಿಯ ಹಿನ್ನೆಲೆಯಲ್ಲಿ ಪೂಜೆ ನಡೆಯಬೇಕಿದ್ದು, ಹೈಕೋರ್ಟ್ ಏನು ಆದೇಶ ಹೊರಡಿಸುತ್ತದೆ ಅನ್ನುವ ಕುತೂಹಲದಲ್ಲಿರೋ ಎರಡೂ ಕೋಮಿನ ಜನರು ಮತ್ತು ಅಧಿಕಾರಿಗಳಿದ್ದಾರೆ. ಸ್ಥಳದಲ್ಲಿ ಈಗಾಗಲೇ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಇದನ್ನೂ ಓದಿ: Dharma Dangal : ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಧರ್ಮ ದಂಗಲ್ ಬಿಸಿ