ಕಲಬುರಗಿ: ಅಕ್ಟೋಬರ್ 28 ಮತ್ತು 29ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination authority-KEA) ನಡೆಸಿದ ನಿಗಮ ಮತ್ತು ಮಂಡಳಿ ನೇಮಕಾತಿ ಪರೀಕ್ಷೆಯ (Exam Scam) ವೇಳೆ ಅಭ್ಯರ್ಥಿಗಳಿಗೆ ಬ್ಲೂ ಟೂತ್ ಮೂಲಕ ಮಾಹಿತಿ ನೀಡಿ ಅಕ್ರಮ ಎಸಗಿದ ಕೃತ್ಯದಲ್ಲಿ ಕಿಂಗ್‌ಪಿನ್ ಆಗಿರುವ ಆರ್.ಡಿ. ಪಾಟೀಲ್‌ಗಾಗಿ (RD Patil) ಪೊಲೀಸರು ಇನ್ನೂ ಶೋಧ ನಡೆಸುತ್ತಲೇ ಇದ್ದಾರೆ. ಇದರ ನಡುವೆ, ಪರಾರಿಯಾಗಿರುವ ಆತನ ಸಹಚರ ಮತ್ತು ಪಾಟೀಲ್‌ಗೆ ಆಶ್ರಯ ನೀಡಿದವರನ್ನು ಬಂಧಿಸಲಾಗಿದೆ. ಪಾಟೀಲ್ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಅಕ್ರಮ ನಡೆದು 13 ದಿನಗಳಾದರೂ ಆರ್.ಡಿ. ಪಾಟೀಲ್ ಬಂಧನ ಆಗಿಲ್ಲದೆ ಇರುವುದು ಪೊಲೀಸರಿಗೆ ಮುಜುಗರ ತಂದಿದೆ. ಕಳೆದ ಶುಕ್ರವಾರ ಕಲಬುರಗಿರಯ ಅವನ ಮನೆ ಮೇಲೆ ದಾಳಿ ಮಾಡಿದಾಗ ಆತ ಅಲ್ಲಿಂದ ತಪ್ಪಿಸಿಕೊಂಡಿದ್ದ. ಈ ರೀತಿ ತಪ್ಪಿಸಿಕೊಳ್ಳಲು ಪೊಲೀಸರೇ ನೆರವು ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.
ಇದೀಗ ಆತನ ಸಹಚರ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದ ಶಿವಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಶಿವಕುಮಾರ್ ಆರ್ ಡಿ ಪಾಟೀಲ್ ಆಪ್ತ ಮತ್ತು ಗುತ್ತಿಗೆದಾರನಾಗಿದ್ದಾರೆ.
ಆರ್ ಡಿ ಪಾಟೀಲ್ ಎಸ್ಕೇಪ್ ಆದ ಬಳಿಕ ಶಿವಕುಮಾರ್ ಜತೆ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ. ಕಾಲ್ ಹಿಸ್ಟರಿಯಲ್ಲಿ ಶಿವಕುಮಾರ್ ಸಂಪರ್ಕದಲ್ಲಿರೋದು ಪತ್ತೆಯಾದ ಹಿನ್ನೆಲೆಯಲ್ಲಿ ಶಿವಕುಮಾರ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಆಶ್ರಯ ನೀಡಿದ ಇಬ್ಬರು ಅರೆಸ್ಟ್
ಈದೇ ವೇಳೆ ಆರೋಪಿ ಆರ್.ಡಿ ಪಾಟೀಲ್ ಗೆ ಆಶ್ರಯ ಕೊಟ್ಟ ಆರೋಪದಲ್ಲಿ ಅಫ್ಜಲ್‌ಪುರ ಪೊಲೀಸರು, ಶಹಾಪುರ ನಿವಾಸಿ ಶಂಕರ್ ಗೌಡ ಯಳವಾರ ಮತ್ತು ದೀಲಿಪ್ ಪವಾರ್ ಎಂಬವರನ್ನು ಬಂಧಿಸಿದ್ದಾರೆ.
ಶಂಕರ ಗೌಡ ಅವರು ವರದಾ ನಗರದ ಅಪಾರ್ಟ್ಮೆಂಟ್ ಮಾಲೀಕರು. ದಿಲೀಪ್ ಪವಾರ್ ಅಪಾರ್ಟ್ಮೆಂಟ್ ನೋಡಿಕೊಳ್ಳುತ್ತಿದ್ದ. ಕಳೆದ ಅಕ್ಟೋಬರ್ 3ರಂದೇ ಇವರು ಆರ್.ಡಿ ಪಾಟಿಲ್‌ಗೆ ಕೋಣೆಯ ಕೀ ಕೊಟ್ಟಿದ್ದರು.
ಬಸವರಾಜ್ ಪಾಟೀಲ್ ಎಂಬುವ ಹೆಸರಿನಲ್ಲಿ ಆರ್.ಡಿ. ಪಾಟೀಲ್ ಕೀ ಪಡೆದಿದ್ದ ಎನ್ನಲಾಗಿದೆ. ತಾನು ರಿಯಲ್ ಎಸ್ಟೆಟ್ ವ್ಯವಹಾರ ಮಾಡುತ್ತಿರುವುದಾಗಿ ಆತ ಕೋಣೆಯನ್ನು ಬಾಡಿಗೆಗೆ ಪಡೆದಿದ್ದ.
ಎಲ್ಲಿದ್ದಾನೆ ಆರ್.ಡಿ. ಪಾಟೀಲ್?
ಕಳೆದ 13 ದಿನಗಳಿಂದ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿರುವ ಆರ್.ಡಿ. ಪಾಟೀಲ್ ಮಹಾರಾಷ್ಟ್ರದಲ್ಲಿ ಅಡಗಿ ಕುಳಿತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಪೊಲೀಸರು ಏಳು ತಂಡಗಳನ್ನು ಕಟ್ಟಿಕೊಂಡು ಪಾಟೀಲ್ ಬೇಟೆಗೆ ಇಳಿದಿದ್ದಾರೆ.
ತಾಂತ್ರಿಕವಾಗಿ ಎಕ್ಸ್‌ಪರ್ಟ್ ಆಗಿರುವ ಆರ್.ಡಿ ಪಾಟೀಲ್ ಯಾವುದೇ ಸುಳಿವು ಬಿಟ್ಟು ಕೊಡುತ್ತಿಲ್ಲ. ಹೀಗಾಗಿ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ ಎನ್ನಲಾಗಿದೆ.
ಮೊಬೈಲ್ ಸಿಮ್ ಬಳಸಿದರೆ ಸಿಕ್ಕಿ ಬೀಳುವ ಆತಂಕ ಎದುರಿಸುತ್ತಿರುವ ಆರ್.ಡಿ ಪಾಟೀಲ್ ವಾಟ್ಸ್ ಆಪ್ ಕಾಲ್, ಮೆಸೇಜ್‌ಗಳ ಮೂಲಕವೇ ಸಂಪರ್ಕ ಸಾಧಿಸುತ್ತಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿ ಪೊಲೀಸ್ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ: RD Patil : PSI ಹಗರಣದ ಮಾಸ್ಟರ್ ಮೈಂಡ್, KEA ಅಕ್ರಮದಲ್ಲೂ ಕಿಂಗ್‌ಪಿನ್! ಯಾರೀತ ಆರ್.ಡಿ ಪಾಟೀಲ್?
ಇಂದು ಜಾಮೀನು ಅರ್ಜಿ ವಿಚಾರಣೆ
ಪೊಲೀಸರಿಂದ ತಲೆಮರೆಸಿಕೊಂಡಿರುವ ಆರೋಪಿ ಆರ್.ಡಿ. ಪಾಟೀಲ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಲಿದೆ.
ಯಾದಗಿರಿಯ ನಗರ ಪೊಲೀಸ್ ಠಾಣೆಯಲ್ಲಿ ಆರ್.ಡಿ ಪಾಟೀಲ್ ವಿರುದ್ಧ ಐದು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ನಾಲ್ಕು ಪ್ರಕರಣಗಳಲ್ಲಿ ಆತ ಅರ್ಜಿ ಸಲ್ಲಿಸಿದ್ದಾನೆ. ಈಗಾಗಲೇ ತಮ್ಮ ವಕೀಲರ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.
ಬಂಧಿತ ಆರೋಪಿಗಳು ನೀಡಿರುವ ಹೇಳಿಕೆಯ ಆಧಾರದಲ್ಲಿ ಆರ್ ಡಿ ಪಾಟೀಲ ವಶಕ್ಕೆ ಪಡೆಯಲು ಯಾದಗಿರಿ ಪೊಲೀಸರು ಮುಂದಾಗಿದ್ದಾರೆ. ಕಲಬುರಗಿ ಪೊಲೀಸರ ಒಂದು ತಂಡ ಯಾದಗಿರಿಯಲ್ಲಿ ಬೀಡುಬಿಟ್ಟಿದೆ. ಮಹಾರಾಷ್ಟ್ರದಲ್ಲೂ ಆತನಿಗಾಗಿ ಹುಡುಕಾಟ ನಡೆಯುತ್ತಿದೆ.