ಕಲಬುರಗಿ : ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡಿದರೆ, ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿ ಆಗಿದ್ದ ದಂಪತಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಕ್ಯಾಪಿಟಲ್ ಗ್ರೋ ಲರ್ನ್ ಟ್ರೇಡಿಂಗ್ ಕಂಪನಿಯ ಮಾಲೀಕ ಉತ್ಕರ್ಷ ವರ್ಧಮಾನೆ ಮತ್ತು ಪತ್ನಿ ಸಾವಿತ್ರಿ ವರ್ಧಮಾನೆ ಇಬ್ಬರು ಕಲಬುರಗಿ JMFC 2 ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಇವರಿಬ್ಬರ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ (Fraud Case) ಆರೋಪ ಕೇಳಿಬಂದಿತ್ತು. ವಂಚನೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಕಿಲಾಡಿ ದಂಪತಿ ಪರಾರಿಯಾಗಿದ್ದರು. ಕಳೆದ ಎರಡು ದಿನಗಳ ಹಿಂದೆ ಆರೋಪಿಗಳ ವಿರುದ್ಧ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಂಪತಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದರು.
14 ದಿನಗಳ ನ್ಯಾಯಾಂಗ ಬಂಧನ
ಕಲಬುರಗಿಯಲ್ಲಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿನ್ಸಿಪಲ್ ಜೆಎಂಎಫ್‌ಸಿ ನ್ಯಾಯಾಲಯವು ಇಬ್ಬರಿಗೂ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆನ್ನಲ್ಲೆ ಪೊಲೀಸರು ಆರೋಪಿಗಳಿಗೆ ಮೆಡಿಕಲ್ ಟೆಸ್ಟ್‌ಗೆ ಕರೆದೊಯ್ದಿದ್ದಾರೆ. ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ನಡೆಯಲಿದೆ. ನಂತರ ಕೇಂದ್ರಿಯ ಕಾರಾಗೃಹಕ್ಕೆ ಕರೆ ತರಲಿದ್ದಾರೆ.
ಇದನ್ನೂ ಓದಿ: Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ
ಏನಿದು ಪ್ರಕರಣ?
ಕಿಲಾಡಿ ದಂಪತಿ ಕಲಬುರಗಿಯಲ್ಲಿ ಶಿಕ್ಷಕ ಸೇರಿ ಹಲವರಿಂದ ಸುಮಾರು 30 ಕೋಟಿ ರೂ. ಪಡೆದು ವಂಚಿಸಿರುವ ಘಟನೆ ನಡೆದಿತ್ತು. ಕಲಬುರಗಿ ತಾಲೂಕಿನ ಕುರಿಕೋಟಾ ಗ್ರಾಮದ ಶಿಕ್ಷಕ ವೀರೇಶ ಭೀಮಾಶಂಕರ ಭಾಗೋಡಿ (24) ಎಂಬುವವರು ನೀಡಿದ ದೂರಿನ ಮೇರೆಗೆ ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉತ್ಕರ್ಷ ವರ್ಧಮಾನೆ ಮತ್ತು ಪತ್ನಿ ಸಾವಿತ್ರಿ ವರ್ಧಮಾನೆ ಅವರು ನಗರದ ಗಾಂಧಿ ನಗರದ ಬಿ.ಎಲ್.ಕಾಂಪ್ಲೆಕ್ಸ್‌ನಲ್ಲಿ ಒಂದು ಆಫೀಸ್ ಮಾಡಿಕೊಂಡಿದ್ದರು. 1 ಲಕ್ಷ ತುಂಬಿದರೆ ಒಂದು ವರ್ಷದಲ್ಲಿ 2 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದರು. ಇದನ್ನು ನಂಬಿ ಹಂತ ಹಂತವಾಗಿ ವೀರೇಶ ಭೀಮಾಶಂಕರ ಭಾಗೋಡಿ ಅವರು 5.5 ಲಕ್ಷ ರೂ. ನೀಡಿದ್ದರು. ಇವರಂತೆ ಮಹ್ಮದ್ ಇಬ್ರಾಹಿಂ, ಗುಂಡಪ್ಪ ವಾರದ, ಚಂದ್ರಕಾಂತ ರಾಠೋಡ್, ಸುನಿತಾ, ಶರಣು ಎಂಬುವವರು ಸೇರಿ ಇತರರು ಸುಮಾರು 30 ಕೋಟಿಗೂ ಹೆಚ್ಚು ಹಣವನ್ನು ಉತ್ಕರ್ಷ ವರ್ಧಮಾನೆ ಅವರಿಗೆ ನೀಡಿದ್ದರು.
ಈ ಹಣವನ್ನು ಉತ್ಕರ್ಷ ವರ್ಧಮಾನೆ ಮತ್ತು ಅವರ ಪತ್ನಿ ಸಾವಿತ್ರಿ ವರ್ಧಮಾನೆ ತೆಗೆದುಕೊಂಡು ಪರಾರಿಯಾಗಿದ್ದರು ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದರು. ಈ ಪ್ರಕರಣದಲ್ಲಿ ವರ್ಧಮಾನೆ ದಂಪತಿಗೆ ಪರಾರಿಯಾಗಲು ಸಹಕರಿಸಿದ ಸಂಬಂಧಿಕರಾದ ಸುಧಾ ಠಾಕೂರ್ ಮತ್ತು ವಿಜಯಸಿಂಗ್ ಹಜಾರೆ ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ರೋಜಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಆರೋಪಿಗಳು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ