Site icon Vistara News

Karnataka Politics : ಇನ್ನೂ 5 ತಿಂಗಳು ಟೈಂ ಕೊಡ್ತೀನಿ, ಕಾಂಗ್ರೆಸ್‌ನಿಂದ 50 ಶಾಸಕರನ್ನು ಸೆಳೆಯಿರಿ: ಪ್ರಿಯಾಂಕ್‌ ಖರ್ಗೆ

Priyank Kharge

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಮುಗಿದ ಬಳಿಕ ಬಿಜೆಪಿ – ಜೆಡಿಎಸ್‌ನಲ್ಲಿ ಯಾರೂ ಉಳಿಯಲ್ಲ, ನೋಡ್ತಾ ಇರಿ. ಇನ್ನೂ ಐದು ತಿಂಗಳು ಟೈಂ ಕೊಡ್ತೀನಿ, ಕಾಂಗ್ರೆಸ್‌ನ ಐವತ್ತು ಜನ ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ ಎಂದು ಬಿಜೆಪಿಗೆ ಸಚಿವ ಪ್ರಿಯಾಂಕ್‌ ಖರ್ಗೆ (Minister Priyank Kharge) ಸವಾಲು ಹಾಕಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) “ಆಪರೇಷನ್‌ ಕಮಲ” (Operation Kamala) ಮಾಡುವಂತೆ ಪ್ರಿಯಾಂಕ್‌ ಸವಾಲು ಹಾಕಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಮಾತೆತ್ತಿದರೆ ವರಿಷ್ಠರು ವರಿಷ್ಠರು ಅಂತಾರೆ ಬಿಜೆಪಿಯವರು. ಯಾಕೆ ರಾಜ್ಯ ನಾಯಕರಿಗೆ ಬೆಲೆ ಇಲ್ವಾ? ಎಲ್ಲವನ್ನೂ ವರಿಷ್ಠರೇ ಮಾಡುತ್ತಾ ಇದ್ದರೆ, ನೀವೇನು ಮಾಡುತ್ತಾ ಇದೀರಿ, ಬೆರಳು ಚೀಪ್ತಾ ಇದ್ದೀರಾ? ಬಿಜೆಪಿಯವರೇ ಐವತ್ತು ಜನ ಬರೋದಕ್ಕೆ ರೆಡಿ ಇದ್ದಾರೆ ನೆನಪಿಡಿ. ನಿಮ್ಮ ಎಲ್ಲ ಸಮಸ್ಯೆಗಳನ್ನು ಸರಿ ಮಾಡಿಕೊಂಡು ಬೆಳಗಾವಿ ಅಧಿವೇಶನಕ್ಕೆ ಬರಲಿ ಎಂದು ಹೇಳಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗುವುದಾದರೆ ಜೆಡಿಎಸ್‌ನ 19 ಶಾಸಕರ ಬೆಂಬಲವನ್ನೂ ಕೊಡುತ್ತೇವೆ ಎಂಬ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ಪ್ರಿಯಾಂಕ್‌ ಖರ್ಗೆ, ಕುಮಾರಸ್ವಾಮಿ ಅವರ ಬೆಂಬಲ ಕೇಳಿದ್ಯಾರು? ಈಗ ನಮಗೆ ಅವರ ಅವಶ್ಯಕತೆ ಏನಿದೆ? ಯಾರು ಸಿಎಂ ಆಗ್ತಾರೆ ಪಿಸಿಸಿ ಅಧ್ಯಕ್ಷರಾಗುತ್ತಾರೆ ಅಂತ ಕಟ್ಟಿಕೊಂಡು ಅವರಿಗೆ ಏನಾಗಬೇಕು? ಬಿಜೆಪಿ ಜತೆ ಜೆಡಿಎಸ್ ಬಹುತೇಕ ವಿಲೀನ ಆಗಿದೆ. ಜೆಡಿಎಸ್ ಪೀಪಲ್ ಲೆಸ್ ಪಾರ್ಟಿ, ಬಿಜೆಪಿ ಲೀಡರ್ ಲೆಸ್ ಪಾರ್ಟಿಯಾಗಿದೆ. ನಮಗೆ ಅವರ ಅವಶ್ಯಕತೆ ಇಲ್ಲ. ಅವರ ಅಸ್ತಿತ್ವಕ್ಕೆ ಏನು ಬೇಕಾದರೂ ಹೇಳಿಕೊಳ್ಳಲಿ. ಜೆಡಿಎಸ್ ಬಳಿ ಯಾವುದೇ ವಿಷಯ ಇಲ್ಲ. ಅವರು ಮೊದಲು ಭ್ರಷ್ಟಾಚಾರ ವಿಚಾರ ಮಾತನಾಡಿದರು. ಅವರ ಪೆನ್ ಡ್ರೈವ್ ಅವರ ಜೇಬಿನಲ್ಲೇ ಉಳಿಯಿತು. ಅವರ ಮನೆ ಗೊಂದಲಗಳನ್ನು ಮೊದಲು ನಿವಾರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: CM Siddaramaiah : ಮೈಸೂರನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ಮಾಡಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ

ಪದೇ ಪದೇ ಕಲಬುರಗಿ ಜನ ನನ್ನನ್ನು ಯಾಕೆ ಆರಿಸಿ ಕಳಿಸಿದ್ದಾರೆ? ಕೆಲಸ ಮಾಡದೇ ಜನ ಸುಮ್ಮನೆ ಆರಿಸ್ತಾರಾ? ಜೆಡಿಎಸ್‌ನವರಿಗೆ ಕೇಳಿ ಜನರು ನಮಗೆ ಓಟು ಹಾಕ್ತಾರಾ? ನಾನು ಏನೇನು ಮಾಡಿದ್ದೇನೆ ಅಂತ ಬೇಕಿದ್ದರೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಹೋಗಿ ತೋರಿಸುತ್ತೇನೆ. ಇವರು ಏನು ಮಾಡಿದ್ದಾರೆ ಅಂತ ತಿಳಿದೇ ಜನರು ಇವರನ್ನು ದೂರ ಇಟ್ಟಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

Exit mobile version