Site icon Vistara News

KEA Exam Scam: ಸರ್ಕಾರಿ ನೌಕರಿಗೆ ಸೇರಿ ಒಂದೇ ತಿಂಗಳಲ್ಲಿ ಜೈಲು ಸೇರಿದ ವಾರ್ಡನ್!

KEA Exam Scam Basavaraj

ಕಲಬುರಗಿ: ‌ಕೆಇಎ ಪರೀಕ್ಷೆ ಅಕ್ರಮಕ್ಕೆ (KEA Exam Scam) ಸಂಬಂಧಪಟ್ಟಂತೆ ಎಫ್‌ಡಿಎ ಪರೀಕ್ಷೆ (FDA Exam) ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮತ್ತೊಬ್ಬನ ಬಂಧನವಾಗಿದೆ. ಸರ್ಕಾರಿ ನೌಕರರಿಗೆ ಸೇರಿದ ಒಂದೇ ತಿಂಗಳಲ್ಲಿ‌ ವಾರ್ಡನ್‌ವೊಬ್ಬ ಜೈಲು ಹಕ್ಕಿಯಾಗಿದ್ದಾನೆ.

ಚಿಕ್ಕಬಳ್ಳಾಪುರದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್‌ ಬಸವರಾಜ್ ಯಾಳವಾರ ಬಂಧಿತ ಆರೋಪಿಯಾಗಿದ್ದಾನೆ. ಜನವರಿ 19ರಂದು ಬಸವರಾಜ್ ವಾರ್ಡನ್ ಆಗಿ ಕೆಲಸಕ್ಕೆ ಸೇರಿದ್ದ. ಈಗ ಫೆಬ್ರವರಿ 21ರಂದು ಸಿಐಡಿ ಬಲೆಗೆ ಬಿದ್ದಿದ್ದಾನೆ.

ಇಂಗ್ಲಿಷ್‌ನಲ್ಲಿ ಎಂ.ಎ, ಬಿ.ಇಡಿ ಪದವೀಧರನಾಗಿರುವ ಬಸವರಾಜ್ ಯಾಳವಾರ್‌ ಮೇಲೆ ಈ ಹಿಂದೆ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಾಗುತ್ತಿದ್ದಂತೆ ಬಸವರಾಜ್ ನಾಪತ್ತೆಯಾಗಿದ್ದ. ಹೀಗಾಗಿ ಸಿಐಡಿ ಪೊಲೀಸರು ಬಸವರಾಜ್ ಬಂಧನಕ್ಕೆ ಬಲೆ ಬೀಸಿದ್ದರು. ಬಸವರಾಜ್ ಓದಿದ ಪ್ರದೇಶಗಳಲ್ಲಿ, ಕಲಬುರಗಿ ವಿವಿ, ಸಿಂದಗಿ ಹಾಗೂ ಬೆಂಗಳೂರು ಕಡೆ ಹುಡುಕಾಟವನ್ನು ನಡೆಸಿದ್ದರು. ಕೊನೆಗೆ ಚಿಕ್ಕಬಳ್ಳಾಪುರದಲ್ಲಿ ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ಆಗಿದ್ದ ಎಂದು ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.

ಇಬ್ಬರು ಪ್ರಿನ್ಸಿಪಾಲ್‌ಗೆ 40 ಲಕ್ಷ ರೂ. ಸಂದಾಯ!

ಇದಲ್ಲದೆ, ಕೆಇಎ ಪರೀಕ್ಷಾ ಅಕ್ರಮದ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಅಫಜಲಪುರ ತಾಲೂಕಿನ‌ ಸರ್ಕಾರಿ ಪಿಯು ಕಾಲೇಜಿನ ಇಬ್ಬರು ಪ್ರಿನ್ಸಿಪಾಲ್‌ಗೆ 40 ಲಕ್ಷ ರೂಪಾಯಿ ಹಣ ಸಂದಾಯವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಿಐಡಿ‌ ತನಿಖೆಯಲ್ಲಿ ಈ ಬಗ್ಗೆ ಸ್ಫೋಟಕ ಮಾಹಿತಿ ಬಯಲಾಗಿದೆ.

ಬಂಧಿತ ಆರೋಪಿ ಬಸವರಾಜ್ ಯಾಳವಾರ ತನಿಖೆ ವೇಳೆ ಒಂದೊಂದೇ ಸಂಗತಿಯನ್ನು ಬಾಯಿಬಿಟ್ಟಿದ್ದಾನೆ. ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ್, ಕರ್ಜಗಿ ಸರ್ಕಾರಿ ಕಾಲೇಜಿನ‌ ಪ್ರಾಚಾರ್ಯ ಬಸವಣ್ಣ ಪೂಜಾರಿ‌ ಅವರಿಂದ ಸಹಾಯ ಪಡೆದುಕೊಂಡಿರುವ ಬಗ್ಗೆ ಬಸವರಾಜ್‌ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Dog Attack: ಬೆಳಗಾವಿಯಲ್ಲಿ ಬೀದಿ ನಾಯಿಗಳ ದಾಳಿ; 4 ಮಕ್ಕಳಿಗೆ ಗಾಯ

ಚಂದ್ರಕಾಂತ ಅಫಜಲಪುರದ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ಮುಖ್ಯಸ್ಥರಾಗಿದ್ದರು. ಬಸಣ್ಣಪ್ಪ ಪೂಜಾರಿ ಕಷ್ಟೋಡಿಯನ್ ಆಗಿ‌ ಕೆಲಸ‌ ಮಾಡಿದ್ದರು. ಕಿಂಗ್ ಪಿನ್‌ ಆರ್.ಡಿ ಪಾಟೀಲ್ ನಿರ್ದೇಶನದ ಮೇರೆಗೆ 40 ಲಕ್ಷ ರೂಪಾಯಿಯನ್ನು ನೀಡಿದ್ದರು. ಪರೀಕ್ಷೆ ಆರಂಭಕ್ಕೂ ಮುನ್ನವೇ ಬ್ಯಾಗ್‌ನಲ್ಲಿ 40 ಲಕ್ಷ ರೂಪಾಯಿ ನೀಡಿದ್ದ ಸಂಗತಿ ಬಯಲಾಗಿದೆ.

Exit mobile version