Site icon Vistara News

Lok Sabha Election: ಕಲಬುರಗಿ ಲೋಕಸಭೆ ಕ್ಷೇತ್ರ: ಖರ್ಗೆ ಅಳಿಯ Vs ಜಾಧವ್;‌ ಯಾರಿಗೆ ಗೆಲುವಿನ ಸಿಹಿ?

Lok Sabha Election

Lok Sabha Election: Straight Fight Between Umesh Jadhav And Radhakrishna Doddamani In Kalaburagi Constituency

ಕಲಬುರಗಿ: 2019ರ ಲೋಕಸಭೆ ಚುನಾವಣೆಯಂತೆ (Lok Sabha Election 2024) ಕಲಬುರಗಿ ಲೋಕಸಭೆ ಕ್ಷೇತ್ರವು (Kalaburagi Constituency) ಈ ಬಾರಿಯೂ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಾಗಿರುವ ಕಲಬುರಗಿಯಲ್ಲಿ ಈ ಬಾರಿ ಹಾಲಿ ಸಂಸದ ಉಮೇಶ್‌ ಜಾಧವ್‌ (Umesh Jadhav) ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ (Radhakrishna Doddamani) ಅವರ ಮಧ್ಯೆ ನೇರ ಪೈಪೋಟಿ ಇದೆ.

2019ರ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿನ ಕಹಿಯನ್ನು ಮರೆಮಾಚಲು ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು, ನರೇಂದ್ರ ಮೋದಿ ಅವರ ಅಲೆ, ಭಾರತ್‌ ಮಾಲಾ ಯೋಜನೆ, ವಂದೇ ಭಾರತ್‌ ರೈಲು ಸೇರಿ ಹಲವು ಯೋಜನೆಗಳನ್ನು ಮುಂದಿಟ್ಟುಕೊಂಡು ಉಮೇಶ್‌ ಜಾಧವ್‌ ಅವರು ಚುನಾವಣೆ ಎದುರಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಅಳಿಯನ್ನು ಗೆಲ್ಲಿಸಿಕೊಂಡು ಬರುವ ಸವಾಲು ಎದುರಾಗಿದ್ದು, ಮತದಾರರ ಒಲವು ಯಾರ ಕಡೆಗೆ ಇದೆ ಎಂಬುದಕ್ಕೆ ಫಲಿತಾಂಶದವರೆಗೆ ಕಾಯಬೇಕಿದೆ.

ರಾಧಾಕೃಷ್ಣ ದೊಡ್ಡಮನಿ ಅವರು ಇದುವರೆಗೆ ಚುನಾವಣೆಗಳ ವೇಳೆ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್‌ ಖರ್ಗೆ ಅವರ ಬೆನ್ನಿಗೆ ನಿಂತು ಕೆಲಸ ಮಾಡುತ್ತಿದ್ದರು. ಇನ್ನು, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರೂ ಆಗಿದ್ದು, ಸ್ಥಳೀಯವಾಗಿ ಹಿಡಿತ ಸಾಧಿಸಲು ಅಳಿಯನ ಗೆಲುವು ನಿರ್ಣಾಯಕವಾಗಿದೆ. ರಾಜ್ಯದಲ್ಲಿ ಪ್ರಿಯಾಂಕ್‌ ಖರ್ಗೆ ಇನ್ನಷ್ಟು ಬಲಿಷ್ಠವಾಗಲು ಈ ಗೆಲುವು ಸಹಕಾರಿಯಾಗಲಿದೆ. ಹಾಗಾಗಿ, ಪ್ರಸಕ್ತ ಲೋಕಸಭೆ ಚುನಾವಣೆಯಲು ಖರ್ಗೆ ಕುಟುಂಬಕ್ಕೆ ಪ್ರತಿಷ್ಠೆಯ ಕಣವಾಗಿದೆ.

ಕ್ಷೇತ್ರದಲ್ಲಿರುವ ಮತದಾರರು

ಪುರುಷರು10.34 ಲಕ್ಷ
ಮಹಿಳೆಯರು10.30 ಲಕ್ಷ
ಲಿಂಗತ್ವ ಅಲ್ಪಸಂಖ್ಯಾತರು336
ಒಟ್ಟು20.65 ಲಕ್ಷ

ಮತ್ತೊಂದೆಡೆ, ಉಮೇಶ್‌ ಜಾಧವ್‌ ಅವರು ಈ ಬಾರಿ ನರೇಂದ್ರ ಮೋದಿ ಅವರ ಅಲೆಯನ್ನೊಂದೇ ನೆಚ್ಚಿಕೊಂಡೋ, ಅಥವಾ ತಾವು ಮಾಡಿದ ಕೆಲಸಗಳಿಂದಲೇ ಗೆಲುವು ಸಾಧಿಸಿಬಿಡುತ್ತೇನೆ ಎಂಬ ಅತಿಯಾದ ವಿಶ್ವಾಸವೋ ಕಾಣಿಸುತ್ತಿಲ್ಲ. ಇದಕ್ಕೆ, ಖರ್ಗೆ ಕುಟುಂಬ ಬಲಿಷ್ಠವಾಗಿರುವುದು, ಮೋದಿ ಅವರ ಅಲೆಯು ಕ್ಷೇತ್ರದಲ್ಲಿ ತುಸು ಕಡಿಮೆಯಾಗಿರುವುದು, ಪಕ್ಷದ ನಾಯಕರಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಭಿನ್ನಾಭಿಪ್ರಾಯವು ಅವರಿಗೆ ಮುಳುವಾಗುವ ಸಾಧ್ಯತೆ ಇದೆ. ಆದರೂ, ಇಬ್ಬರು ಪ್ರಬಲರ ನಡುವಿನ ಕಾಳಗದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬ ಕುತೂಹಲವಂತೂ ಹೆಚ್ಚಾಗಿದೆ.

2019ರ ಚುನಾವಣೆ ಫಲಿತಾಂಶ ಏನಾಗಿತ್ತು?

ಪ್ರಸಕ್ತ ಸಾರ್ವತ್ರಿಕ ಚುನಾವಣೆಯಂತೆ 2019ರಲ್ಲೂ ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಮಲ್ಲಿಕಾರ್ಜುನ ಖರ್ಗೆ ಅವರ ಪ್ರತಿಷ್ಠಿತ ಕ್ಷೇತ್ರದಲ್ಲಿ ಬಿಜೆಪಿಯ ಉಮೇಶ್‌ ಜಾಧವ್‌ ಅವರು ಗೆಲುವು ಸಾಧಿಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ನರೇಂದ್ರ ಮೋದಿ ಅವರ ಅಲೆಯಿಂದಾಗಿ ಉಮೇಶ್‌ ಜಾಧವ್‌ ಅವರು 6,20,192 ಮತಗಳನ್ನು ಪಡೆದರೆ, ಮಲ್ಲಿಕಾರ್ಜುನ ಖರ್ಗೆ ಅವರು 5,24,740 ಮತಗಳನ್ನು ಪಡೆದು ಸೋಲನುಭವಿಸಿದರು. ಸೋಲಿನ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ಪ್ರವೇಶಿಸಿಸಿದರು. ಇನ್ನು, 2014ರಲ್ಲಿ ಕಲಬುರಗಿಯಲ್ಲಿ ಬಿಜೆಪಿ ರೇವು ನಾಯಕ್‌ ಬೆಳಮಗಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: PM Narendra Modi: ಎಕ್ಸಿಟ್‌ ಪೋಲ್‌ ರಿಸಲ್ಟ್‌ ಬೆನ್ನಲ್ಲೇ ಪ್ರಧಾನಿ ಮೋದಿ ಬ್ಯಾಕ್‌ ಟು ಬ್ಯಾಕ್‌ ಮೀಟಿಂಗ್‌

Exit mobile version