Site icon Vistara News

Love Case : ಅವನಿಗೆ 18, ಅವಳಿಗೆ 15; ಪ್ರೇಮದ ಬಲೆಗೆ ಸಿಲುಕಿ ಸಾವಿಗೆ ಶರಣು

Lovers suicide

ಕಲಬುರಗಿ: ಅವನಿಗೆ 18 ವರ್ಷ, ಅವಳಿಗೆ ಇನ್ನೂ 15 ವರ್ಷ. ಅಮರ ಪ್ರೇಮಿಗಳಾಗುವ ದಿಕ್ಕಿನಲ್ಲಿ ಕನಸುಗಳನ್ನು ಕಟ್ಟುತ್ತಿದ್ದ ಅವರೀಗ ಸಾವಿಗೆ ಶರಣಾಗಿದ್ದಾರೆ (Lovers end life). ಸಣ್ಣ ವಯಸ್ಸಿನಲ್ಲೇ ಪ್ರೀತಿ ಪ್ರೇಮದ ಅಮಲಿನಲ್ಲಿ (Love case) ಬಿದ್ದು, ಅದಕ್ಕೆ ಎದುರಾಗುವ ಅಡೆತಡೆಗಳನ್ನು ಎದುರಿಸಲು ಬೇಕಾದ ಮಾನಸಿಕ ಶಕ್ತಿ ಇಲ್ಲದೆ ಸೋತು ಪ್ರಾಣಬಿಟ್ಟಿದ್ದಾರೆ (Self Harming).

ಘಟನೆ ನಡೆದಿರುವುದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಚೌಕಿ ತಾಂಡ ಬಳಿ. ಬೇರೆ ಬೇರೆ ನಿವಾಸಿಗಳಾದ ಆಕಾಶ್ (18) ಮತ್ತು ರಾಧಿಕಾ (15) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮೃತ ಆಕಾಶ್ ಚಿತ್ತಾಪುರ ಕೊಲ್ಲುರು ಗ್ರಾಮದ ನಿವಾಸಿ. ರಾಧಿಕಾ ರಾಂಪೂರಹಳ್ಳಿ ನಿವಾಸಿ. ಇಬ್ಬರದೂ ಅಕ್ಕಪಕ್ಕದ ಹಳ್ಳಿ.

ಅವನದು ದ್ವಿತೀಯ ಪಿಯುಸಿ ಓದುವ ವಯಸ್ಸು, ಇವಳದು ಎಸ್ಸೆಸ್ಸೆಲ್ಸಿ ಓದಿನ ಕಾಲ. ಕಳೆದ ಒಂದು ವರ್ಷದ ಹಿಂದೆ ಇವರ ನಡುವೆ ಪ್ರೀತಿ ಹುಟ್ಟಿ ಅದು ಬಿಟ್ಟಿರಲಾಗದಷ್ಟು ಗಟ್ಟಿಯಾಗಿದೆ ಎಂದುಕೊಂಡಿದ್ದರು. ಬದುಕಿನ ಬಗ್ಗೆ ಯಾವ ಪ್ಲ್ಯಾನ್‌ಗಳೂ ಇಲ್ಲದ ಇವರು ಪ್ರೀತಿಯಲ್ಲಿ ಮುಳುಗಿ ಹೋಗಿದ್ದರು.

ಅವರ ಮೇಲೆ ಯಾರ ದೃಷ್ಟಿ ಬಿತ್ತೋ, ಯಾರು ಬೈದರೋ, ಯಾರು ಬುದ್ಧಿ ಹೇಳಿದರೋ ಅಂತೂ ಕೆಲವು ದಿನಗಳಿಂದ ಅವರಿಗೆ ಪ್ರೀತಿಯನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂಬ ಪರಿಸ್ಥಿತಿ ಎದುರಾಗಿದೆ ಎನಿಸುತ್ತದೆ. ಹೀಗಾಗಿ ಚೌಕಿ ತಾಂಡ ಬಳಿಗೆ ಹೋಗಿ ಪ್ರಾಣ ಕಳೆದುಕೊಳ್ಳಲು ನಿರ್ಧರಿಸಿದ್ದಾರೆ.

ಸಂಜೆಯ ಹೊತ್ತಿಗೆ ಇಬ್ಬರೂ ತಾಂಡದ ಬಳಿ ಬಂದಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ಕಳೆದ ತಡ ರಾತ್ರಿಯಾಗುತ್ತಿದ್ದಂತೆಯೇ ವಿಷ ಸೇವನೆ ಮಾಡಿದ್ದಾರೆ. ಆದರೆ, ವಿಷ ಕುಡಿದ ಬಳಿಕ ಆಕಾಶ್‌ಗೆ ಹೆದರಿಕೆಯಾಗಿದೆ. ಅವನು ಕೂಡಲೇ ತನ್ನ ತಾಯಿಗೆ ಫೋನ್‌ ಮಾಡಿದ್ದಾನೆ. ಇನ್ನೂ ಯಾಕೆ ಮಗ ಬಂದಿಲ್ಲ ಎಂದು ಉದ್ವೇಗದಲ್ಲಿದ್ದ ಅವರಿಗೆ ಮಗ ಈ ರೀತಿ ವಿಷ ಸೇವಿಸಿ ಸಾವಿನ ಕದ ತಟ್ಟುತ್ತಿದ್ದಾನೆ ಎನ್ನುವುದು ಗೊತ್ತಾಯಿತು. ಕೂಡಲೇ ಅವರು ಅಕ್ಕಪಕ್ಕದವರಿಗೆಲ್ಲ ಹೇಳಿ ತಾಂಡದ ಬಳಿಗೆ ಹೋಗಿ ನೋಡಿದರೆ ಇಬ್ಬರೂ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲು ಒಯ್ಯಲಾಯಿತಾದರೂ ದಾರಿ ಮಧ್ಯೆ ಅವರಿಬ್ಬರೂ ಪ್ರಾಣ ಕಳೆದುಕೊಂಡರು.

ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Murder Case : ಅನೈತಿಕ ಸಂಬಂಧಕ್ಕೆ ಅಡ್ಡಿ; ಪತ್ನಿಯನ್ನು ರಾಗಿಮುದ್ದೆಯಲ್ಲಿ ಸೈನೈಡ್‌ ಬೆರೆಸಿ ಕೊಂದ!

ಅನೈತಿಕ ಸಂಬಂಧದ ಆರೋಪ ಹೊರಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ; ಯುವಕ ನೇಣಿಗೆ ಶರಣು

ಯಾದಗಿರಿ: ಮಹಿಳೆಯೊಬ್ಬಳ ಜತೆ ಅಕ್ರಮ ಸಂಬಂಧದ ಆರೋಪ ಹೊತ್ತು ಹಲ್ಲೆಗೆ ಒಳಗಾದ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಾದಗಿರಿ ತಾಲೂಕಿನ ಎಸ್. ಹೊಸಳ್ಳಿ ಗ್ರಾಮದ ನಿವಾಸಿಯಾಗಿರುವ 25 ವರ್ಷದ ಚಂದ್ರಶೇಖರ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನ ಮೇಲೆ ಈರಣ್ಣ ಮತ್ತು ಕುಟುಂಬದವರು ಕೆಲವು ದಿನದ ಹಿಂದೆ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು. ಹೀಗಾಗಿ ಮರ್ಯಾದೆಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಾಯುವ ಮುನ್ನ ಬರೆದಿಟ್ಟ ಡೆತ್‌ ನೋಟ್‌ನಲ್ಲಿ ಈರಣ್ಣ ಮತ್ತು ಎಂಟು ಮಂದಿಯ ಹೆಸರು ಬರೆದಿಟ್ಟು ಇವರೇ ನನ್ನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾನೆ.

ಚಂದ್ರಶೇಖರ ಈರಣ್ಣ ಎಂಬಾತನ ಪತ್ನಿಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಆರೋಪವಿತ್ತು. ಇದೇ ಕಾರಣಕ್ಕಾಗಿ ಈರಣ್ಣ ಮತ್ತು ಇತರರು ಆತನನ್ನು ಮರಕ್ಕೆ ಹಗ್ಗದಿಂದ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದರು. ಇದರ ಜತೆಗೆ ಯುವಕ ಜೊತೆ ಕುಟುಂಬಸ್ಥರ ಮೇಲೆಯೂ ಹಲ್ಲೆ ನಡೆದಿತ್ತು.

ಹೀಗಾಗಿ ತನ್ನಿಂದಾಗಿ ಹೀಗೆಲ್ಲ ಆಯಿತು, ಮನೆ ಮಂದಿಯೂ ಹಲ್ಲೆಗೆ ಒಳಗಾದರು ಎಂದು ಬೇಸರಗೊಂಡ ಚಂದ್ರಶೇಖರ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.

ಡೆತ್ ನೋ‌ಟ್‌ನಲ್ಲಿ ಎಂಟು ಜನರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಘಟನೆ ಬಳಿಕ ಈರಣ್ಣನ ಕುಟುಂಬಸ್ಥರು ಗ್ರಾಮದಿಂದ ಪರಾರಿಯಾಗಿದ್ದಾರೆ. ಈರಣ್ಣನ ಕುಟುಂಬಸ್ಥರೇ ಯುವಕನನ್ನು ಕೊಲೆ ಮಾಡಿದ್ದಾರೆ ಎಂದ ಯುವಕನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version