ಕಲಬುರಗಿ: ಜಿಲ್ಲೆಯ ಚಿತ್ತಾಪುರ ವಿಧಾನಸಭಾ (Chittapur Assembly Constituency) ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ರೌಡಿ ಶೀಟರ್ (Rowdy Sheeter) ಮಣಿಕಂಠ ರಾಠೋಡ್‌ನನ್ನು (Manikantha Rathod) ಬಂಧಿಸಲಾಗಿದೆ. ಮಣಿಕಂಠ ರಾಥೋಡ್ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಸೋಲನುಭವಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಸಂದೇಶ (False propaganda in Social Media) ಹಬ್ಬಿಸಿದ ಆರೋಪದಲ್ಲಿ ಮಾಡಬೂಳ್ ಠಾಣೆ ಪೊಲೀಸರು ಮಣಿಕಂಠ ರಾಠೋಡ್‌ನನ್ನು ಬುಧವಾರ ಮುಂಜಾನೆ ಬಂಧಿಸಿ ಕರೆದೊಯ್ದಿದ್ದಾರೆ. ಬುಧವಾರ ಮುಂಜಾನೆ ಕಲಬುರಗಿ ನಗರದ ಅಪಾರ್ಟ್‌ಮೆಂಟ್‌ಗೆ ದಾಳಿ ಮಾಡಿದ ಪೊಲೀಸರು ಆತನನ್ನು ಕರೆದೊಯ್ದಿದ್ದಾರೆ.
ಏನಿದು ಸೋಷಿಯಲ್ ಮೀಡಿಯಾ ಅಪಪ್ರಚಾರ?
ಚಿತ್ತಾಪುರ ತಾಲೂಕಿನ ಕಲಗುರ್ತಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಎರಡು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಪಿಗಳು ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಇದ್ದಾರೆ ಎಂದು ಆರೋಪಿಸಿದ್ದ. ಈ ಸಾವಿಗೆ ಕೆಲವರು ಕುಮ್ಮಕ್ಕು ನೀಡಿದ್ದಾರೆ. ಹೀಗೆ ಸಾವಿಗೆ ಕಾರಣರಾದ ಆರೋಪಿಗಳು ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಎಂದು ಮಣಿಕಂಠ ರಾಠೋಡ್ ಆರೋಪಿಸಿದ್ದ.
ಮಣಿಕಂಠ ರಾಠೋಡ್ ಅವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಚಿತ್ತಾಪುರ ತಾಲೂಕಿನ ಮಾಡಬೂಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಸಂದೇಶ ಪ್ರಚಾರ ಆರೋಪದಲ್ಲಿ ಐಪಿಸಿ ಸೆಕ್ಷನ್ 153 a 505(1)b ಅಡಿ ಕೇಸ್ ದಾಖಲಾಗಿತ್ತು.
ʻʻಆರೋಪಗಳನ್ನು ಪೊಲೀಸರು ಬಂಧಿಸುತ್ತಿಲ್ಲ. ಪೊಲೀಸರು ಸಚಿವ ಪ್ರಿಯಾಂಕ್ ಖರ್ಗೆ ಕೈಗೊಂಬೆಯಾಗಿದ್ದಾರೆʼʼ ಎಂದು ಆರೋಪಿಸಿದ್ದ ಮಣಿಕಂಠ ರಾಠೋಡ್ ಗುರುವಾರ ಚಿತ್ತಾಪುರ ಪಟ್ಟಣದಲ್ಲಿ ಪ್ರತಿಭಟನೆಯನ್ನೂ ಆಯೋಜಿಸಿದ್ದ.
ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ ಅಂತ ಆರೋಪಿಸಿ ಮಣಿಕಂಠ ರಾಠೋಡ್ ಬಂಧನ ಮಾಡಲಾಗಿದೆ. ಪ್ರತಿಭಟನೆಗೆ ಸಜ್ಜಾಗುವ ಮುನ್ನ ಬೆಳಗ್ಗೆ ಮಣಿಕಂಠ ಅವರ ನಿವಾಸ ಇರುವ ಅಪಾರ್ಟ್‌ಮೆಂಟ್‌ಗೆ ಪೊಲೀಸರು ದಾಳಿ ನಡೆಸಿ ಬಂಧಿದ್ದಾರೆ.
ವಿಡಿಯೊ ಸಂದೇಶ ನೀಡಿ ಬಂಧನಕ್ಕೆ ಒಳಗಾದ ರಾಠೋಡ್
ಈ ನಡುವೆ, ಪೊಲೀಸರು ತನ್ನ ಬಂಧನಕ್ಕೆ ಅಪಾರ್ಟ್‌ಮೆಂಟ್‌ಗೆ ಬಂದಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆಯೇ ಮಣಿಕಂಠ ರಾಠೋಡ್ ವಿಡಿಯೊ ಒಂದನ್ನು ಮಾಡಿದ್ದು ಅದರಲ್ಲಿ, ಪೊಲೀಸರು ನನ್ನ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ನಾನು ಬಂಧನಕ್ಕೆ ಒಳಗಾಗುವುದು ನಿಶ್ಚಿತ. ಬಂದ ಬಳಿಕ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Mallikarjun Kharge: ಖರ್ಗೆ ಮತ್ತವರ ಹೆಂಡತಿ ಮಕ್ಕಳ ಹತ್ಯೆಗೆ ಮಣಿಕಂಠ ರಾಠೋಡ್ ಸಂಚು; ಆಡಿಯೊ ಬಿಟ್ಟ ಕಾಂಗ್ರೆಸ್
ಪ್ರಿಯಾಂಕ್ ಖರ್ಗೆ- ರಾಠೋಡ್ ಫೈಟ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಮಣಿಸಬೇಕು ಎಂಬ ಉದ್ದೇಶದಿಂದ ಬಿಜೆಪಿ ಮಣಿಕಂಠ ರಾಠೋಡ್‌ಗೆ ಟಿಕೆಟ್ ನೀಡಿತ್ತು. ಮಣಿಕಂಠ ರಾಠೋಡ್ ಪ್ರಿಯಾಂಕ್ ಖರ್ಗೆ ಅವರ ಬದ್ಧ ವಿರೋಧಿಯಾಗಿರುವುದನ್ನು ಅದು ನಗದೀಕರಿಸಲು ಮುಂದಾಗಿತ್ತು. ಆದರೆ, ಸಣ್ಣ ವಯಸ್ಸಿನಲ್ಲೇ ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ ಎನಿಸಿಕೊಂಡಿದ್ದ ಮಣಿಕಂಠ ರಾಠೋಡ್‌ನನ್ನು ನಿಲ್ಲಿಸಿದ್ದು ಬಿಜೆಪಿಗೆ ತಿರುಗುಬಾಣವಾಯಿತು. ರೌಡಿಗಳಿಗೆ ಟಿಕೆಟ್ ಕೊಟ್ಟಿದೆ ಬಿಜೆಪಿ ಎನ್ನುವ ಸುದ್ದಿಯೂ ಅದಕ್ಕೆ ಕಳಂಕವಾಯಿತು. ಜತೆಗೆ ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠಗೆ ಸೋಲೂ ಆಯಿತು. ಚುನಾವಣೆಯ ಬಳಿಕವೂ ಪ್ರಿಯಾಂಕ್ ಖರ್ಗೆ ಮತ್ತು ಮಣಿಕಂಠ ರಾಠೋಡ್ ಜಿದ್ದಾಜಿದ್ದಿ ಮುಂದುವರಿದಿದೆ.