ಕಲಬುರಗಿ: ಐವತ್ತು ಸಾವಿರಕ್ಕೂ ಹೆಚ್ಚಿನ ಬಂಜಾರ ಸಮುದಾಯದ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Modi In Karnataka), ಸುಮಾರು ಮೂವತ್ತು ವರ್ಷದ ಹಿಂದೆ ಕರ್ನಾಟಕಕ್ಕೆ ಆಗಮಿಸಿದ್ದನ್ನು ನೆನಪು ಮಾಡಿಕೊಂಡರು.
ವೀರಪ್ಪ ಮೊಯ್ಲಿ ಅವರ ಆಡಳಿತದ ನಂತರ 1994ರಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಚುನಾವಣೆಯ ನಂತರ ಎಚ್.ಡಿ. ದೇವೇಗೌಡರು ಕರ್ನಾಟಕದ 14ನೇ ಮುಖ್ಯಮಂತ್ರಿ ಆದರು. ಈ ಸಮಯದಲ್ಲಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು.
ಕಲಬುರಗಿ ಹಾಗೂ ಬಂಜಾರ ಸಮುದಾಯ ನನಗೆ ಹೊಸದಲ್ಲ ಎಂದು ಭಾಷಣದಲ್ಲಿ ನೆನೆದ ಮೋದಿ, ರಾಜಸ್ಥಾನದಿಂದ ಪಶ್ಚಿಮದವರೆಗೆ ಬಂಜಾರ ಸಮುದಾಯದ ಅಣ್ಣ ತಂಗಿಯರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಅನೇಕ ವರ್ಷಗಳಿಂದ ಅವರ ಜತೆ ಕಾರ್ಯನಿರ್ವಹಿಸಿದ್ದೇನೆ.
1994ರ ಚುನಾವಣೆಯ ಸಂದರ್ಭದಲ್ಲಿ ಇದೇ ಕ್ಷೇತ್ರದ ರ‍್ಯಾಲಿಗೆ ನಾನು ಬಂದಿದ್ದೆ. ಲಕ್ಷಾಂತರ ಸಂಖ್ಯೆಯಲ್ಲಿ ಬಂಜಾರ ಅಕ್ಕ ತಂಗಿಯರನ್ನು ನೋಡಿದ್ದೆ. ನಮ್ಮನ್ನು ಆಶೀರ್ವದಿಸಿದ್ದ ಆ ಕ್ಷಣವನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಮೋದಿ ನೆನೆದರು.
ಸಾಮಾನ್ಯವಾಗಿ ಕನ್ನಡದಲ್ಲಿ ಭಾಷಣ ಆರಂಭಿಸುವ ಮೋದಿ, ಈ ಬಾರಿ ವಿಶೇಷವಾಗಿ ಲಂಬಾಣಿ ಭಾಷೆಯಲ್ಲಿ ಆರಂಭಿಸಿದರು. ಕರ್ನಾಟಕದಲ್ಲಿರುವ ಎಲ್ಲ ಲಂಬಾಣಿ ಸಹೋದರ ಸಹೋದರಿಯರಿಗೆ ಕೈಮುಗಿದು ನಮಸ್ಕಾರ ಮಾಡುತ್ತೇನೆ ಎಂದು ಲಂಬಾಣಿ ಭಾಷೆಯಲ್ಲೇ ಮಾತನಾಡಿದ ಮೋದಿ, ಜೈ ಸೇವಾಲಾಲ್ ಮಹಾರಾಜ್ ಎನ್ನುವ ಮೂಲಕ ಬಂಜಾರ ಸಮುದಾಯದ ಪ್ರಶಂಸೆಗೆ ಪಾತ್ರರಾದರು.
ಕಲಬುರ್ಗಿಯ ಶ್ರೀ ಶರಣ ಬಸವೇಶ್ವರ ಮತ್ತು ಗಾಣಗಾಪುರದ ಗುರು ದತ್ತಾತ್ರೇಯರಿಗೆ ನನ್ನ ನಮಸ್ಕಾರಗಳು. ಪ್ರಖ್ಯಾತ ರಾಷ್ಟ್ರಕೂಟ ಸಾಮ್ರಾಜ್ಯದ ರಾಜಧಾನಿಗೆ ಮತ್ತು ಕನ್ನಡ ನಾಡಿನ ಸಮಸ್ತ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿದರು.
ಆಶೀರ್ವಾದ ಮಾಡಿದ ಮಹಿಳೆ
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಐದು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. ಮೊದಲಿಗೆ ಸೇಡಂ ತಾಲೂಕಿನ ಉಡಗಿ ತಾಂಡಾ ದೇವ್ಲಾ ಚೋಕ್ಲಾ ಜಾಧವ್ ಹಾಗೂ ರತ್ನಾಬಾಯಿ ಚೋಕ್ಲಾ ಜಾಧವ್ ಅವರಿಗೆ ಆಹ್ವಾನ ನೀಡಲಾಯಿತು. ಹಕ್ಕು ಪತ್ರ ಸ್ವೀಕರಿಸಿದ ಮಹಿಳೆ ರತ್ನಾಬಾಯಿ, ಸಾಕಷ್ಟು ಹೊತ್ತು ಪ್ರಧಾನಿಯವರಿಗೆ ಧನ್ಯವಾದ ಹೇಳಿದರು. ಮೋದಿಯವರೂ ಮಹಿಳೆಯ ಜತೆಗೆ ಮಾತನಾಡಿದರು. ಕೊನೆಗೆ, ಎಲ್ಲ ಬಂಜಾರ ಸಮುದಾಯದ ಪರವಾಗಿ ಆಶೀರ್ವಾದ ಮಾಡಿದರು. ಪ್ರಧಾನಿಯೂ ಅತ್ಯಂತ ಸಂತೋಷದಿಂದ ತಲೆಬಾಗಿ ನಮಿಸಿದರು.
ಭಾಷಣದಲ್ಲೂ ಈ ಘಟನೆಯನ್ನು ಉಲ್ಲೇಖಿಸಿದ ಮೋದಿ, ಆ ತಾಯಿ ನನಗೆ ಆಶೀರ್ವಾದ ಮಾಡಿದ್ದು ಬಹಳ ಸಂತೋಷವಾಯಿತು. ಇದೇ ನನ್ನ ಶಕ್ತಿ, ಸಾಮರ್ಥ್ಯ ಎಂದರು.
ಇದನ್ನೂ ಓದಿ | Modi In Karnataka : ನಿಮ್ಮ ಒಬ್ಬ ಮಗ ದಿಲ್ಲಿಯಲ್ಲಿದ್ದಾನೆ, ಇನ್ನು ಚಿಂತೆ ಬಿಡಿ : ಬಂಜಾರ ಸಮುದಾಯಕ್ಕೆ ಪ್ರಧಾನಿ ಮೋದಿ ಭರವಸೆ