ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಮುದಾಯಗಳನ್ನು ಡಬಲ್ ಇಂಜಿನ್ ಸರ್ಕಾರ ಗುರುತಿಸಿ ಅವರ ಹಕ್ಕುಗಳನ್ನು ನೀಡುತ್ತಿದೆ. ನೀವಿನ್ನು ನಿಶ್ಚಿಂತರಾಗಿರಿ, ನಿಮ್ಮ ಒಬ್ಬ ಮಗ ದೆಹಲಿಯಲ್ಲಿದ್ದಾನೆ ಎಂದು ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಬಂಜಾರ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ (Modi In Karnataka) ಭರವಸೆ ನೀಡಿದರು.
50 ಸಾವಿರಕ್ಕೂ ಹೆಚ್ಚು ಲಂಬಾಣಿ ಕುಟುಂಬಗಳಿಗೆಹಕ್ಕು ಪತ್ರ ನೀಡುವ ಸಲುವಾಗಿ ಕಲಬುರಗಿಯ ಮಳಖೇಡ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದರು.
ಈಗ ನಾವೆಲ್ಲರೂ ೨೦೨೩ರ ಜನವರಿಯಲ್ಲಿದ್ದೇವೆ. ಜನವರಿಯಲ್ಲೇ ಭಾರತದ ಸಂವಿಧಾನ ಜಾರಿಯಾಗಿತ್ತು. ದೇಶದ ಜನರಿಗೆ ತಮ್ಮ ಅಧಿಕಾರ ಸಿಕ್ಕಿತ್ತು. ಇದೇ ಪವಿತ್ರ ಮಾಸದಲ್ಲಿ ಕರ್ನಾಟಕ ಸರ್ಕಾರವು ಸಾಮಾಜಿಕ ನ್ಯಾಯಕ್ಕಾಗಿ ಬಹುದೊಡ್ಡ ಹೆಜ್ಜೆ ಇಟ್ಟಿದೆ. ಕರ್ನಾಟಕದ ಲಕ್ಷಾಂತರ ಬಂಜಾರ ಜನರಿಗೆ ಬಹುದೊಡ್ಡ ದಿನ. ಐವತ್ತು ಸಾವಿರ ಪರಿವಾರಗಳಿಗೆ ಮೊದಲ ಬಾರಿಗೆ ಅವರ ಮನೆಯ ಹಕ್ಕು ಸಿಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ತಾಂಡಾ ಬಸ್ತಿಯಲ್ಲಿ ನೆಲೆಸುವ ಬಂಜಾರ ಅಣ್ಣ ತಂಗಿಯರಿಗೆ ಅಭಿನಂದನೆಗಳು. ಕರ್ನಾಟಕ ಸರ್ಕಾರವು ಮೂರು ಸಾವಿರಕ್ಕೂ ಹೆಚ್ಚು ತಾಂಡಾ ಬಸ್ತಿಗಳಿಗೆ ಗ್ರಾಮದ ಸ್ಥಾನ ನೀಡಿದೆ. ಈ ಕಾರ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ತಂಡವನ್ನು ಅಭಿನಂದಿಸುತ್ತೇನೆ ಎಂದರು.
ಈ ಕ್ಷೇತ್ರ ಹಾಗೂ ಬಂಜಾರ ಸಮುದಾಯ ನನಗೆ ಹೊಸದಲ್ಲ. ರಾಜಸ್ಥಾನದಿಂದ ಪಶ್ಚಿಮದವರೆಗೆ ಬಂಜಾರ ಸಮುದಾಯದ ಅಣ್ಣ ತಂಗಿಯರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಅನೇಕ ವರ್ಷಗಳಿಂದ ಅವರ ಜತೆ ಕಾರ್ಯನಿರ್ವಹಿಸಿದ್ದೇನೆ. 1994ರ ಚುನಾವಣೆಯ ಸಂದರ್ಭದಲ್ಲಿ ಇದೇ ಕ್ಷೇತ್ರದ ರ‍್ಯಾಲಿಗೆ ನಾನು ಬಂದಿದ್ದೆ. ಲಕ್ಷಾಂತರ ಸಂಖ್ಯೆಯಲ್ಲಿ ಬಂಜಾರ ಅಕ್ಕ ತಂಗಿಯರನ್ನು ನೋಡಿದ್ದೆ. ಆ ಕ್ಷಣವನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಮೋದಿ ನೆನೆದರು.
ಡಬಲ್ ಇಂಜಿನ್ ಸರ್ಕಾರವು ಸುಶಾಸನ ಹಾಗೂ ಸದ್ಭಾವದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ಈ ಮಾರ್ಗವನ್ನು ಭಗವಾನ್ ಬಸವೇಶ್ವರರು ಶತಮಾನದ ಹಿಂದೆ ನೀಡಿದ್ದರು. ಸಾಮಾಜಿಕ ನ್ಯಾಯ ಹಾಗೂ ಲೋಕತಂತ್ರದ ಮಾದರಿಯನ್ನು ಅವರು ಮುಂದಿಟ್ಟಿದ್ದರು. ಎಲ್ಲ ಭೇದ ಭಾವದಿಂದ ಮೇಲೆದ್ದು, ಎಲ್ಲರ ಸಶಕ್ತೀಕರಣದ ಮಾರ್ಗವನ್ನು ನಮಗೆ ತೋರಿಸಿದ್ದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಹಾಗೂ ಸಬ್ ಕಾ ಪ್ರಯಾಸ್ ಎಂಬ ಸಂದೇಶ ನೀಡಿದ್ದರು.
ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳು ಸಾಕಷ್ಟು ಕಷ್ಟ ಪಟ್ಟಿವೆ. ಈಗ ಗೌರವದಿಂದ ಬದುಕುವ ಸಮಯ ಬಂದಿದೆ. ಬಂಜಾರ ಸಮುದಾಯದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತದೆ.
1993ರಲ್ಲಿ ಅಂದರೆ ಮೂರು ದಶಕದ ಮುಂಚೆಯೇ ಇದಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ನಂತರ ಹೆಚ್ಚು ಅಧಿಕಾರ ನಡೆಸಿದ ಪಕ್ಷವು ಕೇವಲ ವೋಟ್ ಬ್ಯಾಂಕ್ ಮಡಲು ಗಮನ ನೀಡಿತು. ನಿರ್ಲಕ್ಷಿತ ಸಮುದಾಯಗಳ ಜೀವನ ಸುಧಾರಣೆಯತ್ತ ಯೋಚಿಸಲಿಲ್ಲ. ತಾಂಡಾ ವಾಸಿಗಳು ತಮ್ಮ ಹಕ್ಕುಗಳಿಗೆ ಸುದೀರ್ಘ ಪ್ರಯಾಸ ನಡೆಸಿದ್ದಾರೆ. ನಿರ್ಲಕ್ಷ್ಯದ ವಾತಾವರಣವನ್ನು ಬಿಜೆಪಿ ಸರ್ಕಾರ ಬದಲಾಯಿಸಿದೆ. ಹೆಚ್ಚು ಸರ್ಕಾರ ನಡೆಸಿದವರು ಕೇವಲ ಘೋಷಣೆ ಹಾಕಿ ಮತ ಪಡೆದರು. ಆದರೆ ಯಾವುದೇ ಉಪಯೋಗ ಮಾಡಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನೀವು ನಿಶ್ಚಿಂತರಾಗಿರಿ. ನಿಮ್ಮ ಒಬ್ಬ ಮಗ ದೆಹಲಿಯಲ್ಲಿ ಕುಳಿತಿದ್ದಾನೆ. ತಾಂಡಾ ಬಸ್ತಿಗಳಿಗೆ ಮಾನ್ಯತೆ ಸಿಗುತ್ತಿರುವಾಗ, ಗ್ರಾಮಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ವೇಗವಾಗಿ ಆಗುತ್ತದೆ. ಪರಿವಾರವು ನಿಶ್ಚಿಂತೆಯಿಂದ ಜೀವಿಸಬಹುದು. ಬ್ಯಾಂಕುಗಳಿಂದ ಸಾಲವನ್ನೂ ಪಡೆಯಬಹುದು. ಕೇಂದ್ರ ಸರ್ಕಾರವು ದೇಶಾದ್ಯಂತ ಸ್ವಾಮಿತ್ವ ಯೋಜನೆಯಲ್ಲಿ ಗ್ರಾಮೀಣ ಮನೆಗಳಿಗೆ ಆಸ್ತಿ ಪ್ರಮಾಣಪತ್ರ ನೀಡುತ್ತಿದೆ. ಕರ್ನಾಟಕದಲ್ಲಿ ಬಂಜಾರ ಸಮುದಾಯಕ್ಕೂ ಈ ಸೌಕರ್ಯ ಸಿಗುತ್ತದೆ. ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಬಹುದು. ಡಬಲ್ ಇಂಜಿನ್ ಸರ್ಕಾರದ ಎಲ್ಲ ಯೋಜನೆಗಳ ಲಾಭ ಪಡೆಯಬಹುದು. ಅವಶ್ಯಕತೆ, ಆಕಾಕ್ಷೆ, ಅವಕಾಶ ಮತ್ತು ಗೌರವ ಈ ವಿಚಾರಗಳತ್ತ ನಾವು ಗಮನ ನೀಡುತ್ತಿದ್ದೇವೆ ಎಂದರು.
ಇದನ್ನೂ ಓದಿ | Modi In Karnataka : ಯಾದಗಿರಿಯ ಪರಂಪರೆ ನಮಗೆಲ್ಲ ಹೆಮ್ಮೆ, ಇದು ತೊಗರಿಯ ಬಟ್ಟಲು: ಪ್ರಧಾನಿ ಮೋದಿ ಶ್ಲಾಘನೆ