Site icon Vistara News

Modi In Karnataka : ತಾಂಡಾಗಳಿಗೆ ಹಕ್ಕುಪತ್ರ ವಿತರಣೆ ವರ್ಲ್ಡ್‌ ಬುಕ್ ದಾಖಲೆ; ಸಚಿವ ಅಶೋಕ್‌ಗೆ ಸಿಎಂ ಬೊಮ್ಮಾಯಿ ಪ್ರಶಂಸೆ

modi-in-karnataka-Title deeds distribution programme in guinness world record

ಕಲಬುರಗಿ: ಏಕಕಾಲದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮವು‌ ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರಿದೆ ಎಂದು ಕಂದಾಯ ಸಚಿವ ಆರ್.‌ ಅಶೊಕ್‌ ಘೋಷಣೆ ಮಾಡಿದರು.

ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ, ಲಂಬಾಣಿ ತಾಂಡಾಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಚರಿತ್ರೆ ಹಾಗೂ ಪರಂಪರೆಯಲ್ಲಿ ಲಂಬಾಣಿ ತಾಂಡಾಗಳು ವಿಶಿಷ್ಟ ಸ್ಥಾನವನ್ನು ಹೊಂದಿವೆ. ಅಲೆಮಾರಿಯಾಗಿದ್ದ ಸಮುದಾಯಕ್ಕೆ ನೆಲೆ ಕೊಡಬೇಕು, ಅವರ ಜಾಗದಲ್ಲಿ ಅವರ ಕುಟುಂಬ ನೆಮ್ಮದಿಯಿಂದ ಬಾಳಬೇಕು ಎಂಬ ಕಾರಣಕ್ಕೆ ಹಕ್ಕುಪತ್ರವನ್ನು ನೀಡಿ ದಾಖಲೆಗಳಲ್ಲಿ ಹೆಸರು ಬರುವಂತೆ ಮಾಡಲಾಗಿದೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಲಂಬಾಣಿ ತಾಂಡಾ, ಕುರುಬರ ಹಟ್ಟಿಗಳು ಹಳ್ಳಿಗಳಾಗಿಲ್ಲ. ಯಾವುದೇ ಸರ್ಕಾರಗಳು ಅವುಗಳತ್ತ ನೋಡಿರಲಿಲ್ಲ. ನರೇಂದ್ರ ಮೋದಿಯವರು ಹಾಗೂ ಸಿಎಂ ಆದೇಶದ ಮೇರೆಗೆ ಹಕ್ಕುಪತ್ರ ನೀಡುತ್ತಿದ್ದೇವೆ ಎಂದರು.

ಚಿತ್ರ: ಏಕಕಾಲಕ್ಕೆ 51 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮವು ವರ್ಲ್ಡ್‌ ಬುಕ್‌ ಆಫ್‌ ರೇಕಾರ್ಡ್‌ಗೆ ಸೇರಿರುವ ಪ್ರಮಾಣಪತ್ರವನ್ನು ಆರ್‌. ಅಶೋಕ್‌ ಪ್ರದರ್ಶಿಸಿದರು.

ಇಲ್ಲಿ ಹಬ್ಬದ ವಾತಾವರಣ ಕಂಡಿದ್ದೇವೆ. ಇದು ಬಡವರ ಕಾರ್ಯಕ್ರಮ, ನಾನು ಬರುತ್ತೇನೆ ಎಂದು ಸಿಎಂ ಅವರಿಗೆ ಪ್ರಧಾನಿ ಮೋದಿ ಹೇಳಿದ್ದರು. 51 ಸಾವಿರ ಹಕ್ಕುಪತ್ರಗಳನ್ನು ನೀಡಲಾಗುತ್ತಿದ್ದು, ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ ದಾಖಲೆಯಲ್ಲೂ ಇದು ನಮೂದಾಗಿದೆ. ಇಂದು ಈ ಎಲ್ಲ ತಾಂಡಾಗಳು ಗ್ರಾಮಗಳಾಗಿವೆ ಎಂದು ಘೋಷಿಸಿದರು.

ವಿಧವಾ ವೇತನ, ಅಂಗವಿಕಲ ಪಿಂಚಣಿಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲೇ ನೀಡುತ್ತಿದ್ದೇವೆ. ಭೂ ಪರಿವರ್ತನೆ ಸರಳವಾಗಿಸಿದ್ದೇವೆ. ಈಗ ತಾಂಡಾಗಳ ಜಾಗವನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನೋಂದಣಿ ಮಾಡಿಕೊಡಲಾಗುತ್ತದೆ ಎಂದರು.

ಗೋರ್‌ ಬಂಜಾರಾ ಶಾಲಲು, ಮಹಿಳೆ ಕಸೂತಿ ಮಾಡುತ್ತಿರುವ ಪ್ರತಿಮೆ, ಬಸವೇಶ್ವರರು, ಅಲ್ಲಮರಿದ್ದ ಅನುಭವ ಮಂಟಪವನ್ನು ಪ್ರಧಾನಿ ಮೋದಿಯವರಿಗೆ ಕಾಣಿಕೆಯಾಗಿ ನೀಡಲಾಯಿತು.

ನಂತರ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌. ಅಶೊಕ್‌ ಅವರನ್ನು ಪ್ರಶಂಸಿಸಿದರು. ತಲೆ ಮೇಲೆ ಒಂದು ಸೂರು ಬೇಕೆಂಬುದು ಎಲ್ಲರ ಕನಸು. ಈಗಿನಿಂದ ನಿಮ್ಮ ಮನೆ, ಊರು ನಿಮ್ಮದೆ. ಅಶೋಕ್‌ ಅವರು ಗ್ರಾಮ ವಾಸ್ತವ್ಯದ ಮೂಲಕ ಕಂದಾಯ ಇಲಾಖೆಯ ಸೌಲಭ್ಯಗಳನ್ನು ಮನೆಮನೆಗೆ ತಲುಪಿಸುತ್ತಿದ್ದಾರೆ. ನಿಮಗೆ ಬೇಕಾದ ದಾಖಲೆಗಳು ನಿಮ್ಮ ಮನೆಯ ಬಾಗಿಲಿಗೆ ಬರುತ್ತಿದೆ. ಎಲ್ಲ ಪ್ರಮಾಣಪತ್ರಗಳೂ ಮನೆಗೇ ತಲುಪುತ್ತಿರುವುದು ಈ ಡಬಲ್‌ ಇಂಜಿನ್‌ ಸರ್ಕಾರದಿಂದ ಎಂದರು.

Exit mobile version