Site icon Vistara News

Murder Case : ಬಾಲಕಿಯ ಪ್ರೇಮಪಾಶದಲ್ಲಿ ಬಿದ್ದಿದ್ದ 19ರ ಹುಡುಗನ ಮರ್ಡರ್‌; ಬರ್ತ್‌ ಡೇ ಹೆಸರಲ್ಲಿ ಕರೆಸಿ ಕೊಲೆ!

Murder case Love storyMurder case Love story

ಕಲಬುರಗಿ: ಅವನು ಇನ್ನೂ 19 ವರ್ಷದ ಹುಡುಗ (19 Year old boy). ಬಿಎಸ್‌ಸಿ ನರ್ಸಿಂಗ್‌ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ. ಆತ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಜತೆ ಪ್ರೇಮದಲ್ಲಿ (Love case) ಬಿದ್ದು ಬೀದಿ ಹೆಣವಾಗಿದ್ದಾನೆ (Murder Case). ಇದು ಕಲಬುರಗಿಯ (Kalaburagi News) ಸರಸ್ವತಿಪುರದಲ್ಲಿ ನಡೆದ ಒಂದು ಕೊಲೆಯ ಕಥೆ.

ಬಿಎಸ್ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್ ಓದುತ್ತಿದ್ದ ಅಭಿಷೇಕ್ ಇತ್ತೀಚಿಗಷ್ಟೇ ಪರೀಕ್ಷೆ ಕೂಡ ಬರೆದಿದ್ದ. ಅವನು ಅದೇ ವಠಾರದ ಬಾಲಕಿಯೊಬ್ಬಳ ಜತೆಗೆ ಸಲುಗೆಯಿಂದ ಇದ್ದು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ. ಆಕೆಯೂ ಅಷ್ಟೆ ಅವನನ್ನು ತುಂಬ ಹಚ್ಚಿಕೊಂಡಿದ್ದಳು. ಅವರಿಬ್ಬರೂ ಆಗಾಗ ಕದ್ದುಮುಚ್ಚಿ ಭೇಟಿಯಾಗುವುದು, ರಾತ್ರಿ ಹಗಲೆನ್ನದೆ ವಾಟ್ಸ್‌ ಆಪ್‌ನಲ್ಲಿ ಮೆಸೇಜ್‌ ಮಾಡುವುದು ನಡೆಯುತ್ತಿತ್ತು.

ಇದನ್ನು ಗಮನಿಸಿದ ಬಾಲಕಿ ಮನೆಯವರು ಇದನ್ನು ಆಕ್ಷೇಪಿಸಿದ್ದರು. ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಆದರೆ, ಅವರಿಬ್ಬರೂ ತಮ್ಮ ಹಳೆ ಚಾಳಿ ಮುಂದುವರಿಸಿದ್ದರು.

ಇದನ್ನೂ ಓದಿ : Attempt to Murder: ಶಿವಮೊಗ್ಗದಲ್ಲಿ ಮತ್ತೆ ಚಾಕು ಇರಿತ; ಇಬ್ಬರು ದುಷ್ಕರ್ಮಿಗಳಿಂದ ದಾಳಿ

ಈ ನಡುವೆ, ಮಾರ್ಚ್‌ ಮೂರರಂದು ಹುಡುಗಿ ಮನೆಯವರು ಒಂದು ಪ್ಲ್ಯಾನ್‌ ಮಾಡಿದರು. ಅದೇನೆಂದರೆ, ಹುಡುಗಿಯ ಕೈಯಲ್ಲಿ ಅಭಿಷೇಕ್‌ಗೆ ಕರೆ ಮಾಡಿಸಿ ʻನಮ್ಮ ಮನೆಯಲ್ಲಿ ಬರ್ತ್‌ ಡೇ ಇದೆ. ನೀನು ಬರಲೇಬೇಕುʼ ಎಂದು ಹೇಳಿಸಿದರು. ಹುಡುಗಿ ಕರೆದಿದ್ದಾಳೆ ಎಂಬ ಖುಷಿಯಲ್ಲಿ ಅಭಿಷೇಕ್‌ ಥಕ ಥಕ ಕುಣಿಯುತ್ತಾ ಆ ಮನೆಗೆ ಹೋಗಿದ್ದ.

ಆಗ ಆ ಮನೆಯವರು ಮತ್ತದೇ ಪ್ರೇಮದ ಪ್ರಸ್ತಾಪ ಎತ್ತಿದ್ದಾರೆ. ಅಲ್ಲಿ ಬರ್ತೇ ಡೇ ನಡೆಯುತ್ತಿರಲಿಲ್ಲ. ಬದಲಾಗಿ ತನ್ನ ತಿಥಿಗೆ ಸಿದ್ಧತೆ ನಡೆಯುತ್ತಿದೆ ಎಂದು ಆತನಿಗೆ ತಿಳಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಯಾಕೆಂದರೆ ಆ ಮನೆಯವರು ಅಭಿಷೇಕ್‌ನನ್ನು ಹಿಡಿದು ಮನಸೋ ಇಚ್ಛೆ ರಾಡ್‌ನಿಂದ ಹೊಡೆದಿದ್ದರು. ಮನೆಯಲ್ಲಿ ಕೂಡಿಹಾಕಿ ರಾಡ್‌ನಿಂದ ಎರಡು ಗಂಟೆಗಳ ಕಾಲ ಆತನಿಗೆ ಥಳಿಸಿದ್ದಾರೆ. ಈ ನಡುವೆ ಬಾಲಕಿ ಅವನನ್ನು ಬಿಟ್ಟು ಬಿಡಿ. ಇನ್ನು ಅವನ ಜತೆ ಮಾತನಾಡುವುದಿಲ್ಲ ಎಂದು ಅಂಗಲಾಚಿದರೂ ಕಿರಾತಕರು ಬಿಟ್ಟಿರಲಿಲ್ಲ.

ರಾಡ್‌ಗಳ ಹೊಡೆತದಿಂದ ತತ್ತರಿಸಿ ಹೋಗಿ, ಗಂಭೀರ ಸ್ಥಿತಿಯಲ್ಲಿದ್ದ ಅಭಿಷೇಕನನ್ನು ಆ ಮನೆಯವರು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದರು. ರಾತ್ರಿ ಯಾರೋ ಗಮನಿಸಿ ಆತನನ್ನು ಜಿಮ್ಸ್‌ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಆತ ಮಾರ್ಚ್‌ 5ರಂದು ಮುಂಜಾನೆ ಪ್ರಾಣ ಕಳೆದುಕೊಂಡಿದ್ದಾನೆ.

ನಾಲ್ವರು ಕಿರಾತಕರ ಬಂಧನ

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಬಾಲಕಿ ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅವರ ಪೈಕಿ ನಾಲ್ವರನ್ನು ಈಗ ಬಂಧಿಸಲಾಗಿದೆ. ಅನಿಲ್ ರಾಠೋಡ್ (42), ಸಂತೋಷ್ ರಾಠೋಡ್ (34), ಸಾಗರ್ ಜಾಧವ್ (27), ಹೇಮಂತ್ ರಾಠೋಡ್ (34) ಬಂಧಿತರು.

ಇದೀಗ ಅಭಿಷೇಕ್‌ನ ಮನೆಯವರು ತಮ್ಮ ಅಮಾಯಕ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ. ಅದರ ಜತೆಗೆ ತಮ್ಮ ಮಾತು ಕೇಳದೆ ಪ್ರೀತಿಯ ಹಿಂದೆ ಬಿದ್ದು ಬದುಕನ್ನೇ ಹಾಳು ಮಾಡಿಕೊಂಡ ಮನೆ ಮಗನ ಬಗ್ಗೆ ವಿಷಾದವನ್ನೂ ಹೊಂದಿದ್ದಾರೆ.

Exit mobile version