Site icon Vistara News

Murder Case : ಶರಣರ ನಾಡನ್ನು ಮರಣದ ನಾಡಾಗಿಸಿದ ಪ್ರಿಯಾಂಕ್‌ ಖರ್ಗೆ; ಸಂಸದರ ಆಪ್ತನ ಕೊಲೆಗೆ ಬಿಜೆಪಿ ಆಕ್ರೋಶ

Murder Case Priyank Kharge

ಬೆಂಗಳೂರು: ಕಲಬುರಗಿ ಸಂಸದ (Kalaburagi MP) ಡಾ.ಉಮೇಶ್ ಜಾಧವ್ (MP Umesh Jadhav) ಅವರ ಆಪ್ತ ಗಿರೀಶ್‌ ಚಕ್ರ ಅವರನ್ನು ತಂಡವೊಂದು ಕಾರಿನಲ್ಲಿ ಕರೆದೊಯ್ದು ಕಣ್ಣಿಗೆ ಖಾರದ ಪುಡಿ ಎರಚಿ ಕೊಚ್ಚಿ ಬರ್ಬರವಾಗಿ ಹತ್ಯೆ (Murder Case) ಮಾಡಿದ ಘಟನೆ ರಾಜ್ಯಾದ್ಯಂತ ತಲ್ಲಣದ ಅಲೆಗಳನ್ನು ಸೃಷ್ಟಿ ಮಾಡಿದೆ. ಈ ಘಟನೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಇದೆಲ್ಲದಕ್ಕೂ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಅವರ ಕುಮ್ಮಕ್ಕೇ ಕಾರಣ ಎಂದು ಆರೋಪಿಸಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಕೊಲೆ ಮಾಡಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಕಲಬುರಗಿ ಬಿಎಸ್ಎನ್ಎಲ್‌ ಸಲಹಾ ಸಮಿತಿಗೆ ನಿರ್ದೇಶಕರಾಗಿ ಸಂಸದ ಜಾಧವ್ ಅವರು ಗಿರೀಶ್‌ನನ್ನು ಆಯ್ಕೆ ಮಾಡಿದ್ದರು. ಸಲಹಾ ಸಮಿತಿ‌ ನಿರ್ದೇಶಕನಾಗಿ ನೇಮಕವಾದ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವುದಾಗಿ ಜಮೀನಿಗೆ ಕರಿಸಿ ಸ್ನೇಹಿತರಿಂದಲೇ ಬರ್ಬರ ಕೊಲೆ ನಡೆದಿದೆ.

ಕೊಲೆಗಳಿಗೆ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ಹೊಣೆ ಎಂದ ಬಿಜೆಪಿ

ಪ್ರಿಯಾಂಕ್‌ ಖರ್ಗೆ ಅವರ ಉಸ್ತುವಾರಿ ಅವಧಿಯಲ್ಲಿ ಕಲ್ಬುರ್ಗಿಯಲ್ಲಿ ಕೇವಲ ಕೊಲೆ-ಸುಲಿಗೆಗಳದ್ದೇ ದರ್ಬಾರು. ಪ್ರಿಯಾಂಕ್ ಉಸ್ತುವಾರಿ ಸಚಿವರಾದ ಈ 10 ತಿಂಗಳಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಸಾಲು ಸಾಲಾಗಿ ಹತ್ಯೆಗೀಡಾಗುತ್ತಿದ್ದಾರೆ. ಇದಕ್ಕೆ ಕಲ್ಬುರ್ಗಿಯನ್ನು ತಮ್ಮ ಪುಂಡ ಪೋಕರಿ ಪಟಾಲಂಗೆ ಒಪ್ಪಿಸಿರುವ ಸಚಿವ ಪ್ರಿಯಾಂಕ್ ಖರ್ಗೆಯವರೇ ನೇರ ಹೊಣೆ ಎಂದು ಬಿಜೆಪಿ ಆಪಾದಿಸಿದೆ. ಮಹಾಂತಪ್ಪ ಆಲೂರೆಯವರ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಬಿಜೆಪಿ ಮುಖಂಡ ಗಿರೀಶ್ ಚಕ್ರರವರನ್ನು ಸಹ ಹತ್ಯೆಗೈಯಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರೇ, ಕಲ್ಬುರ್ಗಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣ ಹಳ್ಳ ಹಿಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಮೊದಲು ಸಂಪುಟದಿಂದ ವಜಾ ಮಾಡಿ ಎಂದು ಬಿಜೆಪಿ ಆಗ್ರಹಿಸಿದೆ.

ಶರಣರ ನಾಡಿನಲ್ಲಿ ಮರಣದ ಅಬ್ಬರ ಎಂದ ಬಿಜೆಪಿ

ಶರಣರ ನಾಡಾಗಿದ್ದ ಕಲ್ಬುರ್ಗಿಯನ್ನು ಮರಣದ ನಾಡನ್ನಾಗಿಸುತ್ತಿದೆ ಕಾಂಗ್ರೆಸ್‌ ಸರ್ಕಾರ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದರಲ್ಲಿಯೂ ಟ್ರೋಲ್‌ ಮಾಸ್ಟರ್‌ ಪ್ರಿಯಾಂಕ್‌ ಖರ್ಗೆ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಚಿವರ ಪುಂಡ ಪೋಕರಿ ಪಟಾಲಂ ಹೇಳಿದ್ದೇ ಕಾನೂನು, ಮಾಡಿದ್ದೇ ನ್ಯಾಯ ಎನ್ನುವಷ್ಟರ ಮಟ್ಟಿಗೆ ಆಡಳಿತ ಕುಸಿದಿದೆ.

ಆಳಂದ ತಾಲೂಕಿನಲ್ಲಿ ಹಾಡುಹಗಲೆ ಬಿಜೆಪಿ ಮುಖಂಡ ಮಹಾಂತಪ್ಪ ಆಲೂರೆಯವರನ್ನು ಕೊಚ್ಚಿ ಕೊಲೆ ಮಾಡಿದರೂ ಇದುವರೆಗೂ ಆರೋಪಿಗಳ ಬಂಧನವಾಗಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕಲ್ಬುರ್ಗಿಯಲ್ಲಿ ಆಗುತ್ತಿರುವ ಕೊಲೆ,ಸುಲಿಗೆಗಳಿಗೆ ಲೆಕ್ಕವೇ ಇಲ್ಲ. ಮೊದಲು ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿ, ಇಲ್ಲವಾದಲ್ಲಿ ನಿವೃತ್ತಿ ಘೋಷಿಸಿ ಮನೆಗೆ ನಡೆಯಿರಿ ಎಂದು ಬಿಜೆಪಿ ಹೇಳಿದೆ.

Exit mobile version