ಕಲಬುರಗಿ: ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಅಫಜಲಪುರದಲ್ಲಿ ಒಬ್ಬ ಯುವಕನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಚ್ಚಿ ಕೊಲೆ (murder case) ಮಾಡಲಾಗಿದೆ.
ಅಫಜಲಪುರ ತಾಲೂಕಿನ ಸಿಧನೂರ ಗ್ರಾಮದಲ್ಲಿ ಯುವಕನ ಭೀಕರ ಕೊಲೆಯಾಗಿದ್ದು, ಹತ್ಯೆಗೀಡಾದ ಯುವಕನನ್ನು ಬಲಭೀಮ ಸಗರ (23) ಎಂದು ಗುರುತಿಸಲಾಗಿದೆ. ಹಳೆವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಯುವಕನ ರುಂಡ ಚೆಂಡಾಡಿದ್ದಾರೆ. ಈತನೂ ಪೊಲೀಸ್ ದಾಖಲೆಗಳಲ್ಲಿ ಬೇಕಾದವನಾಗಿದ್ದು, ಎರಡು ತಂಡಗಳ ವೈಷಮ್ಯವೂ ಈ ಹತ್ಯೆಯ ಹಿಂದೆ ಇದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ರೇವೂರ(ಬಿ) ಪೊಲೀಸರು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾದಿಕಾರಿ ಶ್ರೀನಿಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗಾರರ ಪತ್ತೆಗಾಗಿ ಬಲೆ ಬೀಸಲಾಗಿದೆ.
ಬಾಲಕನ ಕೊಲೆ, ಮೃತದೇಹ ಪತ್ತೆ
ಚಿಕ್ಕೋಡಿ: ಕೊಲೆಯಾದ ಸ್ಥಿತಿಯಲ್ಲಿ 15 ವರ್ಷದ ಬಾಲಕನೊಬ್ಬನ ಮೃತದೇಹ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ಹೊರವಲಯ ಬಾಳುಮಾಮಾ ನಗರದಲ್ಲಿ ಘಟನೆ ನಡೆದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ 15 ವರ್ಷ ಬಾಲಕನ ಮೃತದೇಹ ಕಂಡುಬಂದಿದೆ.
ನಿಪ್ಪಾಣಿಯ ಹಳೆ ಸಂಭಾಜಿ ನಗರದ ಸಾಕೀಬ್ ಪಠಾಣ್ ಕೊಲೆಯಾದ ಬಾಲಕ. ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬಾಲಕನ ಹತ್ಯೆಗೈದಿದ್ದಾರೆ. ನಿಪ್ಪಾಣಿಯ ಖಾಸಗಿ ಶಾಲೆಯಲ್ಲಿ ಸಾಕೀಬ್ ಪಠಾಣ್ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸ್ಥಳಕ್ಕೆ ನಿಪ್ಪಾಣಿ ಠಾಣೆ ಪೊಲೀಸರ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಪತ್ನಿ- ಮಗ ಸೇರಿ ಪತಿಯ ಕೊಲೆ
ಮಂಡ್ಯ: ಗಂಡ ಹೆಂಡತಿ ನಡುವೆ ಜಗಳ ಉಂಟಾಗಿ, ಹೆಂಡತಿಯೇ ಮಗನ ಜೊತೆ ಸೇರಿ ಗಂಡನ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಚಾಪುರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಉಮೇಶ್ (45) ಮೃತ ದುರ್ದೈವಿ. ಪತ್ನಿ ಸವಿತಾ, ಮಗ ಶಶಾಂಕ್ರಿಂದ ಕೃತ್ಯ ನಡೆದಿದೆ. ಮೂರು ತಿಂಗಳಿಂದ ಗಂಡನನ್ನು ತೊರೆದು ಬೆಂಗಳೂರಿನಲ್ಲಿ ಮಗನ ಜೊತೆ ವಾಸವಾಗಿದ್ದ ಸವಿತಾ ಮೊನ್ನೆ ರಾತ್ರಿ ಪಿತೃಪಕ್ಷ ಹಬ್ಬ ಮಾಡಲು ಊರಿಗೆ ಬಂದಿದ್ದಳು. ಈ ವೇಳೆ ಪತ್ನಿಯನ್ನು ಉಮೇಶ್ ಮನೆಯೊಳಗೆ ಸೇರಿಸಿರಲಿಲ್ಲ.
ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಸವಿತಾ ಬೆಂಗಳೂರಿನಿಂದ ಮಗನನ್ನು ಕರೆಸಿಕೊಂಡಿದ್ದಳು. ಇಬ್ಬರು ಸೇರಿಕೊಂಡು ರೀಪೀಸ್ ಪಟ್ಟಿಯಿಂದ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲೇ ಉಮೇಶ್ ಸಾವಿಗೀಡಾಗಿದ್ದಾರೆ. ಘಟನೆ ನಂತರ ಪತ್ನಿ ಸವಿತಾ, ಮಗ ಶಶಾಂಕ್ ಪರಾರಿಯಾಗಿದ್ದು, ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Shivakumar Poojary: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ ಸಿಐಡಿ ತನಿಖೆಗೆ