ಕಲಬುರಗಿ: ಈ ದುಷ್ಟರ ಕೈಯಲ್ಲಿ ಪುಟ್ಟ ಕಂದಮ್ಮಗಳೂ ಸೇಫಲ್ವಾ ಅನ್ನುವ ಭಾವನೆ ಮೂಡೋ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ. ವಯಸ್ಸು 60 ಆದರೂ, ಮೊಮ್ಮಕ್ಕಳಿಗಿಂತಲೂ ಪುಟ್ಟದಾದ ಮಕ್ಕಳನ್ನು ನೋಡಿದಾಗ ಕಾಮ ಹೆಡೆ ಎತ್ತುವ ರಾಕ್ಷಸರ ಸಂತತಿ (POCSO Case) ಜೀವಂತವಾಗಿರುವುದಕ್ಕೆ ಇದು ನಿದರ್ಶನ. ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 60 ವರ್ಷದ ಮುದುಕನೊಬ್ಬ ಕೇವಲ ಆರು ವರ್ಷದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ನಡೆಸಿದ್ದಾನೆ.
ಒಳ್ಳೆಯದು ಯಾವುದು, ಕೆಟ್ಟದು ಯಾವುದು? ಯಾರು ಒಳ್ಳೆಯವರು ಯಾರು? ಕೆಟ್ಟವರು ಯಾರು ಎನ್ನುವುದನ್ನು ಗುರುತಿಸಲಾಗದ ಅಮಾಯಕ ಮಗುವಿನ ಮೇಲೆ ಈ ದುಷ್ಟ ಮುದುಕ ದೌರ್ಜನ್ಯ ನಡೆಸಿದ್ದಾನೆ.
ಮಗುವಿಗೆ ಪರಿಚಯವಿರುವ ಅಜ್ಜನಂಥ ಈ ವೃದ್ಧ, ಮಗುವಿಗೆ ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಪುಸಲಾಯಿಸಿ ಈ ಕೃತ್ಯ ಎಸಗಿದ್ದಾನೆ. ಆಟವಾಡುತ್ತಿದ್ದ ಮಗುವನ್ನು ಚಾಕೊಲೇಟ್ ಆಸೆ ತೋರಿಸಿ ಮನೆಗೆ ಕರೆದುಕೊಂಡು ಹೋಗಿ ತನ್ನ ಕ್ರೌರ್ಯವನ್ನು ಮೆರೆದಿದ್ದಾನೆ.
ಘಟನೆ ನಡೆದು ಎಷ್ಟೋ ಹೊತ್ತಿನ ಬಳಿಕ ಮಗು ನೋವಿನಿಂದ ಅಳುವುದನ್ನು ನೋಡಿದ ಮನೆಯವರು ವಿಚಾರಿಸಿದ ಈ ಮುದುಕನ ಕಿತಾಪತಿ ಗೊತ್ತಾಗಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮುದುಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಂಥ ಕ್ರೂರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Pocso Case : 3 ವರ್ಷದ ಮಗುವಿನ ಮೇಲೆ ದೌರ್ಜನ್ಯ ನಡೆಸಿ ಕೊಂದ ಹಂತಕನಿಗೆ 5 ವರ್ಷದ ಬಳಿಕ ಜೀವಾವಧಿ ಶಿಕ್ಷೆ!
ಅಕ್ಕ-ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 21ರ ಯುವಕ
ಕಲಬುರಗಿ ಜಿಲ್ಲೆ (Kalaburagi News) ಚಿಂಚೋಳಿ ತಾಲೂಕಿನ ಕೊಂಚಾವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇವಲ ಎರಡು ದಿನದ ಹಿಂದೆ 21 ಯುವಕನೊಬ್ಬ ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಮ್ಮ, ಆರು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಕೊಂಚಾವರಂ ಮೂಲದ ಸಚಿನ್ ಚವಾಣ್ (21) ಎಂಬಾತನೇ ಈ ರೀತಿ ಅಮಾನುಷವಾಗಿ ನಡೆದುಕೊಂಡವನು. ಈಗ ತನ್ನ ಪರಿಚಿತರ ಮನೆಗೆ ಹೋಗಿದ್ದಾಗ ಅಲ್ಲಿ ಹಿರಿಯರು ಇರಲಿಲ್ಲ ಎನ್ನಲಾಗಿದೆ. ಮನೆಯಲ್ಲಿ ಮಕ್ಕಳು ಮಾತ್ರ ಇದ್ದರು. ಅವರ ಪಾಲಿಗೆ ಒಬ್ಬ ಮಾವನೋ, ಚಿಕ್ಕಪ್ಪನೋ, ಬಂಧುವೋ ಆಗುವ ವಯಸ್ಸಿನ ಈ ದುಷ್ಟ ಆ ಮಕ್ಕಳ ಮೇಲೆ ಎರಗಿದ್ದಾನೆ ಎನ್ನಲಾಗಿದೆ.
ಮಕ್ಕಳನ್ನು ಪುಸಲಾಯಿಸಿ ತನ್ನ ದುಷ್ಕತ್ಯಕ್ಕೆ ಬಳಸಿಕೊಂಡಿದ್ದಾನೆ ಚವಾಣ್. ಬಾಲಕಿಯ ಮೇಲೆ ಮೊದಲು ದೌರ್ಜನ್ಯ ನಡೆಸಿದ ಆತ ಇನ್ನೂ ಆರು ವರ್ಷದ ಪುಟ್ಟ ಬಾಲಕನಿಗೂ ಹಿಂಸೆ ನೀಡಿದ್ದಾನೆ.
ಮಕ್ಕಳ ಹೆತ್ತವರು ಮನೆಗೆ ಬಂದಾಗ ಈ ಮಕ್ಕಳು ನೋವು ಎಂದು ಹೇಳಿಕೊಂಡಾಗ ವಿಚಾರಿಸಲಾಗಿದೆ. ಆಗ ಸಚಿನ್ ಚವಾಣ್ ಮನೆಗೆ ಬಂದಿದ್ದು, ಆತ ಈ ರೀತಿಯಾಗಿ ನಡೆದುಕೊಂಡಿದ್ದು ಬೆಳಕಿಗೆ ಬಂದಿದೆ.