ಕಲಬುರಗಿ: ಬಿಜೆಪಿ ಮುಖಂಡ, ರೌಡಿಶೀಟರ್ ಮಣಿಕಂಠ ರಾಠೋಡ್) (Manikanth Rathod ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ನಡುವಿನ ಗುದ್ದಾಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ತನ್ನ ಮೇಲೆ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ರಾಠೋಡ್ ಹೈಡ್ರಾಮಾ ಸೃಷ್ಟಿಸಿದ್ದರು. ಕೊನೆಗೆ ಅದು ಹಲ್ಲೆಯಲ್ಲ, ಅಪಘಾತ ಎಂದು ಸಾಬೀತಾಗಿದ್ದರಿಂದ ಪೊಲೀಸರು ಶುಕ್ರವಾರ (ಡಿ. 9) ವಶಕ್ಕೆ ಪಡೆದುಕೊಂಡಿದ್ದರು. ಇದರ ಮರುದಿನವೇ ರಾಠೋಡ್ ಪತ್ರಿಕಾಗೋಷ್ಠಿ ನಡೆಸಿ, ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪ ಮಾಡದಂತೆ, ಇನ್ನು ಧ್ವನಿ ಎತ್ತದಂತೆ ಸೆಟ್ಲ್‌ಮೆಂಟ್ ಮಾಡಿಕೊಳ್ಳುವ ಬಗ್ಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರು (Baburao Chinchansur) ಕರೆ ಮಾಡಿದ್ದಾರೆ ಎನ್ನಲಾದ ಆಡಿಯೊವನ್ನು ಬಹಿರಂಗಗೊಳಿಸಿದ್ದಾರೆ.
ಈ ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ಪ್ರಿಯಾಂಕ್ ಖರ್ಗೆ ಬೆಂಬಲಿಗರು, ಮಣಿಕಂಠ ರಾಠೋಡ್‌ಗೆ ಮುತ್ತಿಹಾಕಲು ಯತ್ನಿಸಿದ್ದಾರೆ. ಪತ್ರಿಕಾ ಭವನದ ಎದುರು ಮಣಿಕಂಠ ಅವರಿಗೆ ಮುತ್ತಿಗೆ ಹಾಕಲು ಯತ್ನ ಮಾಡಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸರು ಮಧ್ಯಪ್ರವೇಶ ಮಾಡಿ, ಪ್ರತಿಭಟನಕಾರರನ್ನು ಪಕ್ಕಕ್ಕೆ ಸರಿಸಿ ಮಣಿಕಂಠ ರಾಠೋಡ್ ಕಾರನ್ನು ಮುಂದಕ್ಕೆ ಹೋಗಲು ಅನುವು ಮಾಡಿಕೊಟ್ಟರು.
ಸೆಟ್ಲ್‌ಮೆಂಟ್‌ಗಾಗಿ ಚಿಂಚನಸೂರು ಕರೆ?
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರ ಮೂಲಕ ಸೆಟ್ಲ್‌ಮೆಂಟ್ ಮಾಡಿಕೊಳ್ಳಲು ಪ್ರಿಯಾಂಕ್ ಖರ್ಗೆ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ನನ್ನ ತಂದೆಗೆ ಕರೆ ಮಾಡಿ ಆಮಿಷ ಒಡ್ಡಲಾಗಿದೆ. ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರಿಂದ ಕರೆ ಮಾಡಿಸಿ ಹಣದ ಆಮಿಷ ಒಡ್ಡಿದ್ದಾರೆ. ಜತೆಗೆ ದೊಡ್ಡ ಹುದ್ದೆಗೆ ಆಮಿಷವೊಡ್ಡಿದ್ದಾರೆ ಎಂದು ಸುದ್ದಿಗೋಷ್ಠಿ ನಡೆಸಿ ಮಣಿಕಂಠ ರಾಠೋಡ್ ಆರೋಪ ಮಾಡಿದ್ದಾರೆ.
ಮಣಿಕಂಠ ರಾಠೋಡ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಬಾಬುರಾವ್ ಚಿಂಚನಸೂರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಬಿಡುಗಡೆ ಮಾಡಿದರು. ಸಚಿವ ಪ್ರಿಯಾಂಕ್ ಖರ್ಗೆ, ಚಿಂಚನಸೂರ್ ವಿರುದ್ಧ ಮಣಿಕಂಠ ರಾಠೋಡ್ ಆರೋಪ ಮಾಡಿದ್ದಾರೆ.
ಚಿಂಚನಸೂರ್ ನಮ್ಮ ತಂದೆ ನರೇಂದ್ರ ರಾಠೋಡ್ ಅವರಿಗೆ ಕರೆ ಮಾಡಿ ಮಾಡಿ ಹಣದ ಆಮಿಷ ಒಡ್ಡಲಾಗಿದೆ. 15 ರಿಂದ 20 ಕೋಟಿ ರೂ. ಖರ್ಚು ಆಗಿದೆ ಎಂದು ಪ್ರಿಯಾಂಕ್ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಹೇಳುತ್ತೇನೆ. ಅವರಿಗೆ ಹೇಳಿ ದೊಡ್ಡ ಚೇರ್‌ಮನ್ ಹುದ್ದೆ ಕೊಡಿಸುತ್ತೇನೆ. ಖರ್ಚು ಮಾಡಿದ ಅಸಲು ಬಡ್ಡಿ ಗಂಟು ಎಲ್ಲವನ್ನೂ ವಾಪಸ್ ಕೊಡಿಸುತ್ತೇನೆ ಎಂದು ಆ ಆಡಿಯೊದಲ್ಲಿ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಇಲ್ಲಿದೆ ಬಾಬುರಾವ್ ಚಿಂಚನಸೂರು ಆಡಿಯೊ!
ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ರಾಠೋಡ್
ರಸ್ತೆ ಅಪಘಾತವನ್ನು ಕೊಲೆ ಯತ್ನ ಎಂದು ಬಿಂಬಿಸಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದ್ದರಿಂದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರನ್ನು ಕಲಬುರಗಿ ಚೌಕ್ ಠಾಣೆ ಪೊಲೀಸರು ಗಂಜ್ ಪ್ರದೇಶದಲ್ಲಿರುವ ಭಾರತ್ ಪ್ರೈಡ್ ಅಪಾರ್ಟ್ಮೆಂಟ್ನಲ್ಲಿ ಡಿ.7ರಂದು ವಶಕ್ಕೆ ಪಡೆದಿದ್ದರು.
ಈ ವಿಷಯದಲ್ಲಿ ಪೊಲೀಸರು ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಮಣಿಕಂಠ ರಾಠೋಡ್ ಅಂದು ಪತ್ರಿಕಾಗೋಷ್ಠಿ ಕರೆದಿದ್ದರು. ಹೀಗಾಗಿ ಅದಕ್ಕೂ ಮುಂಚೆಯೇ ರಾಠೋಡ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಮಣಿಕಂಠ ರಾಠೋಡ್ ಅವರನ್ನು ವಶಪಡಿಸಿಕೊಂಡಿದ್ದೇವೆ. ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕೆಲವೊಮ್ಮೆ ನಮಗೆ ಇಂಟಲಿಜೆನ್ಸ್ನಿಂದ ಮೆಸೇಜ್ ಇರುತ್ತದೆ. ಅದನ್ನೇ ನಾವು ಎಫ್ಐಆರ್ನಲ್ಲಿ ದಾಖಲಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಹೇಳಿದ್ದರು.
ಮಣಿಕಂಠ ರಾಠೋಡ್ ಮೇಲೆ ದಾಳಿಯೇ ನಡೆದಿಲ್ಲ!
ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ದಾಳಿಯೇ ನಡೆದಿಲ್ಲ. ಅದು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾಗಿದೆ. ಆದರೆ, ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದರು.
ಮಣಿಕಂಠ ರಾಠೋಡ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಮಾಡಿದಾಗ ಇದು ಸುಳ್ಳು ಎಂದು ಗೊತ್ತಾಗಿದೆ. ಅದೊಂದು ಅಪಘಾತ ಪ್ರಕರಣವಾಗಿದ್ದು, ಹಲ್ಲೆ ಮಾಡಿರುವುದು ಅಲ್ಲ ಎಂದು ತನಿಖೆಯಿಂದ ಗೊತ್ತಾಗಿದೆ. ಯಾದಗಿರಿ ಜಿಲ್ಲೆಯ ಗುರಮಠಕಲ್ ಹತ್ತಿರದ ಚೆಪೆಟ್ಲಾದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿದೆ. ನ್ಯಾಯಾಧೀಶರ ಮುಂದೆ ಸಾಕ್ಷಿದಾರರ ಹೇಳಿಕೆಯನ್ನು ಪಡೆಯಲಾಗಿದೆ. ಅಪಘಾತವಾದ ಕಾರನ್ನು ಹೈದರಾಬಾದ್ನ ಶೋ ರೂಮ್ವೊಂದರಲ್ಲಿ ಬಿಟ್ಟಿರುವುದು ಪತ್ತೆಯಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ಪ್ರತಿಕ್ರಿಯೆ ನೀಡಿದ್ದರು.