Site icon Vistara News

Road Accident : ಅಯೋಧ್ಯೆಯಲ್ಲಿ ಭೀಕರ ಅಪಘಾತ; ಕಲಬುರಗಿ ಮೂಲದ ಮೂವರು ದುರ್ಮರಣ, 19 ಮಂದಿಗೆ ಗಾಯ

road Accident

ಕಲಬುರಗಿ : ಅಯೋಧ್ಯೆಯಲ್ಲಿ ಲಾರಿ ಹಾಗೂ ಟಿಟಿ ವಾಹನದ ನಡುವೆ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ಟಿಟಿಯಲ್ಲಿದ್ದ ಕಲಬುರಗಿ ಮೂಲದ ಮೂವರು ದುರ್ಮರಣ ಹೊಂದಿದ್ದಾರೆ. ಶಿವರಾಜ್, ಕಾಶಿನಾಥ್, ತಂಗೆಮ್ಮ ಮೃತ ದುರ್ದೈವಿಗಳು.

ಕಲಬುರಗಿಯ 22 ಮಂದಿ ಕುಟುಂಬ ಸಮೇತರಾಗಿ ಯಾತ್ರೆಗೆ ತೆರಳಿದ್ದರು. ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಅಯೋಧ್ಯೆಗೆ ಹೊರಟಿದ್ದರು. ಈ ವೇಳೆ ಅಯೋಧ್ಯೆ ಸಮೀಪ ಕಳೆದ ರಾತ್ರಿ (ಮೇ 24) ಲಾರಿ ಹಾಗೂ ಟಿಟಿ ವಾಹನದ ನಡುವೆ ಡಿಕ್ಕಿಯಾಗಿದೆ.

ಡಿಕ್ಕಿ ರಭಸಕ್ಕೆ ಟಿಟಿಯಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಗಾಯಾಳುಗಳಿಗೆ ಅಯೋಧ್ಯೆಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

ಇಬ್ಬರ ಪ್ರಾಣ ತೆಗೆದ ಅಪರಿಚಿತ ವಾಹನ; ಹಿಟ್‌ ಆ್ಯಂಡ್‌ ರನ್‌ಗೆ ಪಾದಚಾರಿ ಸಾವು

ಮೈಸೂರು/ತುಮಕೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೈಸೂರಿನ ಹುಣಸೂರು ತಾಲೂಕಿನ ಮೈಸೂರು- ಬಂಟ್ವಳ ರಾಷ್ಟೀಯ ಹೆದ್ದಾರಿ 275ರ ಬನ್ನಿಕುಪ್ಪೆ ಬಳಿ ಅಪಘಾತ (Road Accident) ನಡೆದಿದೆ.

ಬನ್ನಿಕುಪ್ಪೆ ಬಳಿ ಮಹಿಳೆ ಮೈಸೂರು ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನವು ಗುದ್ದಿದೆ. ಗುದ್ದಿದ ರಭಸಕ್ಕೆ ಕೆಳಗೆ ಬಿದ್ದ ಮಹಿಳೆ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಮೃತಳ ಗುರುತು ಪತ್ತೆಯಾಗಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆಯಲ್ಲಿ ಬಿದ್ದಿದ್ದ ಮಹಿಳೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹುಣಸೂರು ಶವಗಾರಕ್ಕೆ ರವಾನೆ ಮಾಡಲಾಗಿದೆ. ಇನ್ನೂ ಮಹಿಳೆ ಬಗ್ಗೆ ಮಾಹಿತಿ ಸಿಕ್ಕವರು 9480805057 ನಂಬರ್ ತಿಳಿಸುವಂತೆ ಇನ್ಸ್‌ಪೆಕ್ಟರ್ ಲೋಲಾಕ್ಷಿ ಮನವಿ ಮಾಡಿದ್ದಾರೆ.

ಅಪಘಾತಕ್ಕೆ ತುಮಕೂರಲ್ಲಿ ಯುವಕ ಸಾವು

ಇತ್ತ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೊಡ್ಡ ಆಲದಮರದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಯುವಕನೊರ್ವ ಮೃತಪಟ್ಟಿದ್ದಾನೆ. ಪವನ್ ಎಸ್‌. ಆರ್ (23) ಮೃತ ದುರ್ದೈವಿ.

ಶಿರಾ ನಿವಾಸಿಯಾಗಿರುವ ಪವನ್ ತುಮಕೂರಿನ ಐನಾಕ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲಸ ಮುಗಿಸಿ ತುಮಕೂರಿನಿಂದ ಶಿರಾಗೆ ಬೈಕ್‌ನಲ್ಲಿ ತೆರಳುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ನಿಂದ ಹಾರಿ ಬಿದ್ದ ಪವನ್‌ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ‌

ಇದನ್ನೂ ಓದಿ: Traffic violation : ನಗೆಪಾಟಲಾದ ಟ್ರಾಫಿಕ್‌ ಪೊಲೀಸರು; ಹೆಲ್ಮೆಟ್ ಹಾಕಿಲ್ಲವೆಂದು ಟಿಪ್ಪರ್ ಲಾರಿ ಚಾಲಕನಿಗೆ 500 ರೂ. ದಂಡ

ಚಾಮರಾಜನಗರದಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ಪಾದಚಾರಿ ಸಾವು

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅರೇಪುರ ಗೇಟ್ ಬಳಿ ಹಿಟ್‌ ಆ್ಯಂಡ್‌ ರನ್‌ಗೆ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಹಿಂಬದಿಯಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯ ಮಧ್ಯೆ ಹಾರಿ ಬಿದ್ದ ವ್ಯಕ್ತಿ ಮೇಲೆ ಮತ್ತೊಂದು ವಾಹನ ಹರಿದಿದೆ ಎನ್ನಲಾಗಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳೀಯ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೈಯರ್‌ ಸಿಡಿದು ಸುಟ್ಟು ಕರಕಲಾದ ಲಾರಿ

ಕಾಫಿ ತುಂಬಿದ ಲಾರಿ ಟೈಯರ್ ಸಿಡಿದು ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್‌ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನ ನಂಜನಗೂಡು ತಾಲೂಕಿನ ಕಣೇನೂರು ಗ್ರಾಮದ ಬಳಿ ಘಟನೆ ನಡೆದಿದೆ. ಲಾರಿ ಚಾಮರಾಜನಗರದಿಂದ ಹುಲ್ಲಹಳ್ಳಿ ಮಾರ್ಗವಾಗಿ ಕುಶಾಲನಗರಕ್ಕೆ ತೆರಳುತ್ತಿತ್ತು.

ಈ ವೇಳೆ ಕಣೇನೂರು ಗ್ರಾಮಕ್ಕೆ ಬರುವಾಗ ಲಾರಿ ಮುಂಭಾಗದ ಚಕ್ರ ಸಿಡಿದು ಬೆಂಕಿ ಕಾಣಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿ ಕೆನ್ನಾಲಿಗೆಗೆ ಲಾರಿ ಭಸ್ಮವಾಗಿತ್ತು. ಲಾರಿಯಲ್ಲಿದ್ದ ಕಾಫಿ ಬೀಜ ಸುಟ್ಟು ಕರಕಲಾಗಿತ್ತು. ಲಾರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಾರಿಯಿಂದ ಜಿಗಿದು ಚಾಲಕ ಪ್ರಾಣ ಉಳಿಸಿಕೊಂಡಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಲಾರಿಯಿಂದ ಬಿದ್ದು ಅಸ್ವಸ್ಥಗೊಂಡಿದ್ದ ಲಾರಿ ಚಾಲಕನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏಕಾಏಕಿ ಕಾರಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಹೆಚ್ಚಾಗಿ ಕಾರಿನ ಇಂಜಿನ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಿಂದ ಇಳಿದು ಪ್ರಯಾಣಿಕರು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version