Site icon Vistara News

Self Harming : ಶಾಸಕ ಅಜಯ್‌ ಸಿಂಗ್‌ ಮನೆಯಲ್ಲೇ ವಾಚ್‌ಮನ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ

Dr Ajay singh house watch man dead

ಕಲಬುರಗಿ: ಜೇವರ್ಗಿಯ ಕಾಂಗ್ರೆಸ್‌ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಡಾ. ಅಜಯ್‌ ಸಿಂಗ್ (MLA Ajay singh) ಅವರ ನಿವಾಸದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ.

ಕಲಬುರಗಿ ‌ನಗರದ ಶರಣ‌ ನಗರದಲ್ಲಿರುವ ಶಾಸಕ ಡಾ ಅಜಯ್‌ ಸಿಂಗ್ ನಿವಾಸದ ಅಂಗಳದಲ್ಲಿರುವ ಮರಕ್ಕೆ ದೇವೀಂದ್ರ (32) ಎಂಬಾತ ನೇಣು ಹಾಕಿಕೊಂಡಿದ್ದಾನೆ. ಈಗ ಅಜಯ್‌ ಸಿಂಗ್‌ ಅವರ ನಿವಾಸದಲ್ಲಿ ವಾಚ್‌ಮನ್‌ ಆಗಿ ಕೆಲಸ ಮಾಡುತ್ತಿದ್ದ. ಬುಧವಾರ ರಾತ್ರಿವರೆಗೂ ಕೆಲಸ ಮಾಡುತ್ತಿದ್ದ ಆತ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಅಜಯ್‌ ಸಿಂಗ್‌ ಅವರ ಮನೆ ಮುಂದೆ ಸೇರಿದ ಜನರು

ಹಳ್ಳಿಯಿಂದ ಬಂದು ವಾಚ್‌ಮನ್‌ ಆಗಿದ್ದ

ದೇವೀಂದ್ರ ಕಲಬುರಗಿ ಜಿಲ್ಲೆಯ ಹಳ್ಳಿಯೊಂದರ ವಾಸಿಯಾಗಿದ್ದು, ಅವನು ಅಜಯ್‌ ಸಿಂಗ್‌ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಊರಿನಲ್ಲಿ ಅವನ ಹೆತ್ತವರು ಮತ್ತು ಅಣ್ಣ- ಅತ್ತಿಗೆ ಇದ್ದಾರೆ ಎಂದು ಆತನ ಸಹೋದರಿ ಸಂಗೀತಾ ತಿಳಿಸಿದ್ದಾರೆ.

ದೇವೀಂದ್ರನಿಗೆ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಆತನ ಪತ್ನಿ ಹೆರಿಗೆಯ ವೇಳೆ ಮೃತಪಟ್ಟಿದ್ದರು. ಮಗು ಕೂಡಾ ಪ್ರಾಣ ಕಳೆದುಕೊಂಡಿತ್ತು. ಅದಕ್ಕಿಂತ ಮೊದಲೇ ನಗರದಲ್ಲಿದ್ದ ದೇವೀಂದ್ರ ಬಳಿಕ ಹೆಚ್ಚಾಗಿ ಕಲಬುರಗಿಯಲ್ಲೇ ಇದ್ದ. ಏನಾದರೂ ಕೆಲಸವಿದ್ದರೆ ಮಾತ್ರ ಊರಿಗೆ ಹೋಗುತ್ತಿದ್ದ. ಕಳೆದ ಒಂದೆರಡು ವರ್ಷದಿಂದ ಆತನಿಗೆ ಮದುವೆ ಮಾಡಲೆಂದು ಹುಡುಗಿ ನೋಡುತ್ತಿದ್ದರು.

ದೇವೀಂದ್ರನಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೂ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಗೊತ್ತಾಗುತ್ತಿಲ್ಲ ಎಂದು ಆತನ ಸಹೋದರಿ ಹೇಳಿದ್ದಾರೆ. ಪೊಲೀಸರು ಸಾವಿನ ಹಿಂದೆ ಬೇರೇನಾದರೂ ಕಾರಣಗಳಿವೆಯೇ ಎಂದು ಹುಡುಕುತ್ತಿದ್ದಾರೆ.

ಇದನ್ನೂ ಓದಿ : Murder Case : ಪತ್ನಿಯ ಕೊಂದು ಹೂತುಹಾಕಿದನೇ ಸಂಶಯಪಿಶಾಚಿ ಗಂಡ? ; 20 ದಿನಗಳ ಬಳಿಕ ಶವ ಮೇಲೆತ್ತಿ ಪರೀಕ್ಷೆ

ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ- ಮಗ ಸಾವು

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬಕ್ಕೆ (varamahalakshmi festival) ತಾವರೆ ಹೂ (Lotus flower) ಕೀಳಲೆಂದು ಕೆರೆಗೆ ಇಳಿದ ತಂದೆ ಮಗ ಇಬ್ಬರೂ ಮುಳುಗಿ (Drowned) ಸಾವಿಗೀಡಾದ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ (doddaballapur news) ತಾಲೂಕಿನ ಭೂಚನಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ.

ತಂದೆ ಪುಟ್ಟರಾಜು (42) ಹಾಗೂ ಮಗ ಕೇಶವ (14) ಮೃತಪಟ್ಟ ದುರ್ದೈವಿಗಳು. ಮೃತರು ದೊಡ್ಡಬಳ್ಳಾಪುರ ಶಾಂತಿನಗರದ ನಿವಾಸಿಗಳು. ಇಂದು ಹಬ್ಬಕ್ಕಾಗಿ ಮಾರಾಟ ಮಾಡಲು ನಿನ್ನೆ ಸಂಜೆ ಭೂಚನಹಳ್ಳಿ ಬಳಿಯ ಕೆರೆಗೆ ತಾವರೆ ಹೂ ಕೀಳಲು ತಂದೆ ಮಗ ಹೋಗಿದ್ದರು. ಕೆರೆಯ ದಡದಲ್ಲಿ ಮೊಬೈಲ್, ಚಪ್ಪಲಿ ಬಿಟ್ಟು ತಾವರೆ ಹೂ ಕೀಳಲು ಮುಂದಾದ ವೇಳೆ ಅವಘಡ ನಡೆದಿದೆ. ಆಳ ತಿಳಿಯದೆ ಮುಂದೆ ಹೋದುದರಿಂದ ಕೆಸರಿನಲ್ಲಿ ಸಿಲುಕಿಕೊಂಡು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.

ಮತ್ತೊಬ್ಬ ತಾವರೆ ಹೂ ಮಾರಾಟಗಾರ ಕೆರೆಯ ಬಳಿ ಹೋದಾಗ ಇಬ್ಬರು ಕೆರೆಯಲ್ಲಿ ಮುಳುಗಿರುವ ಬಗ್ಗೆ ಗೊತ್ತಾಗಿದೆ. ಇಂದು ಬೆಳಗ್ಗೆಯಿಂದ ಅಗ್ನಿಶಾಮಕದಳದ ಸಿಬ್ಬಂದಿಯಿಂದ ಕೆರೆಯಲ್ಲಿ ಮೃತದೇಹಗಳಿಗೆ ಶೋಧ ನಡೆಸಿ ದೇಹಗಳನ್ನು ಹೊರಗೆ ತೆಗೆದಿವೆ. ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದ ಕುಟುಂಬದಲ್ಲಿ ಇದೀಗ ಶೋಕ ಕವಿದಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version