Site icon Vistara News

Tiger Pawl : ಹುಲಿ ಉಗುರು ಬಳಸುವ ಚಿತ್ರ ನಟರ ಅರೆಸ್ಟ್‌ ಆಗುತ್ತಾ? ; ಸಚಿವ ಈಶ್ವರ ಖಂಡ್ರೆ ಹೇಳಿದ್ದೇನು?

Eshwar Khandre

ಕಲಬುರಗಿ: ಕಾನೂನಿನ ಮುಂದೆ ಯಾರು ದೊಡ್ಡವರಲ್ಲ, ಬೇಧ ಭಾವ ಹಾಗೂ ಒತ್ತಡಕ್ಕೆ ಒಳಗಾಗುವುದಿಲ್ಲ: ಇದು ಹುಲಿಯ ಉಗುರು (Tiger pawl) ಮತ್ತು ಹುಲಿ ಚರ್ಮ (Tiger Skin) ಬಳಸುತ್ತಿರುವ ಗಣ್ಯರು ಮತ್ತು ಸೆಲೆಬ್ರಿಟಿಗಳ ವಿಚಾರದಲ್ಲಿ ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಅವರು ಹೇಳಿದ ಮಾತು.

ಬಿಗ್‌ ಬಾಸ್‌ (BBK Season 10) ಸ್ಪರ್ಧಿ ವರ್ತೂರು ಸಂತೋಷ್‌ (Varthur Santhosh) ಅವರನ್ನು ಬಂಧಿಸಿದ ಬಳಿಕ ಹಲವಾರು ಗಣ್ಯರು, ರಾಜಕಾರಣಿಗಳು, ಸಿನಿಮಾ ನಟರು ಹುಲಿ ಉಗುರು ಇರುವ ಚೈನ್‌, ಹುಲಿಯ ಚರ್ಮ ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿಗಳನ್ನು ಸಾರ್ವಜನಿಕರೇ ಹೊರಹಾಕುತ್ತಿದ್ದಾರೆ. ಅವರ ವಿರುದ್ಧ ಕ್ರಮ ಯಾಕಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಜತೆಗೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ಕೂಡಾ ನೀಡುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬ ಬಗ್ಗೆ ಅರಣ್ಯ ಸಚಿವರು ಪ್ರತಿಕ್ರಿಯಿಸಿದ್ದಾರೆ.

ಮುಖ್ಯವಾಗಿ ಚಿತ್ರ ನಟ ಹಾಗೂ ರಾಜ್ಯ ಸಭಾ ಸದಸ್ಯರಾದ ಜಗ್ಗೇಶ್‌, ಚಿತ್ರನಟರಾದ ದರ್ಶನ್‌, ನಿಖಿಲ್‌ ಕುಮಾರಸ್ವಾಮಿ, ರಾಕ್‌ಲೈನ್‌ ವೆಂಕಟೇಶ್‌, ಕುಣಿಗಲ್‌ನ ಬಿದನಕೆರೆಯ ಧನಂಜಯ ಗುರೂಜಿ, ಕೊಪ್ಪದ ಗೌರಿಗದ್ದೆಯ ವಿನಯ ಗುರೂಜಿ ಅವರ ಬಗ್ಗೆ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರಲ್ಲಿ ಜಾರಿಗೆ ಬಂದಿದೆ. ಅದಾದ ನಂತರ 80ರ ದಶಕದಲ್ಲಿ, 2002ರಲ್ಲಿ, 2022ರಲ್ಲಿ ತಿದ್ದುಪಡಿಯಾಗಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿಯಲ್ಲಿ ವನ್ಯಪ್ರಾಣಿಗಳ ಅಂದರೆ ಹುಲಿ ಚರ್ಮ, ಆನೆಯ ದಂತ, ಹುಲಿ ಉಗುರು, ಚಿಂಕೆ ಚರ್ಮ, ಕೊಂಬು ಇತ್ಯಾದಿಗಳನ್ನು ಯಾವುದನ್ನೂ ಉಪಯೋಗ ಮಾಡಲು, ಸಂಗ್ರಹ ಮಾಡಲು, ಸಾಗಾಟ ಮಾಡಲು, ಸ್ವಂತಕ್ಕೆ ಇಟ್ಟುಕೊಳ್ಳಲು ಅವಕಾಶವಿಲ್ಲ. ಯಾರಾದರೂ ಆ ರೀತಿ ಮಾಡಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಹೇಳಿದರು.

ಹುಲಿಯ ಚರ್ಮ, ಉಗುರು, ಹಲ್ಲುಗಳನ್ನು ಶೋಕಿಗಾಗಿ ಬಳಸುವುದು ಶಿಕ್ಷಾರ್ಹ ಅಪರಾದ. ಈ ನೆಲದ‌ ಕಾನೂನು ಎಲ್ಲರಿಗೂ ಸಮನಾಗಿದೆ. ಯಾರೂ ಕಾನೂನಿಗೆ ಮೀರಿದವರು ಇಲ್ಲ. ಎಷ್ಟೇ ಪ್ರಭಾವವಿದ್ದರೂ ಸರ್ಕಾರ ಕಾನೂನು ಕ್ರಮ ಜರುಗಿಸುತ್ತದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತಿದ್ದಾರೆ. ಅವರಿಗೆ ನೋಟಿಸ್‌ ನೀಡಲಾಗುತ್ತದೆ. ಅವರಿಂದ ವಿವರಣೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಯಾವ್ಯಾವ ಭಾಗದಲ್ಲಿ ಯಾರು ದೂರುಗಳನ್ನು ನೀಡುತ್ತಾರೋ ಅವರ ದೂರುಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಹುಲಿ ಉಗುರು ಕೊರಳಲ್ಲಿ ಹಾಕಿಕೊಂಡಿರುವ ಬಗ್ಗೆ ದೂರು ಬರುತ್ತಿವೆ. ಯಾವುದೇ ದೂರು ಬಂದರೂ ತನಿಖೆ ನಡೆಸಿ ಇಲಾಖೆ ಕ್ರಮ ಕೈಗೊಳ್ಳುತ್ತದೆ. ನಟ ದರ್ಶನ್, ಜಗ್ಗೇಶ್ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಯಾರೇ ದೂರು ನೀಡಿದರೂ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು ಖಂಡ್ರೆ

ಇವುಗಳ ಬಳಕೆಗೆ ಇರುವ ನಿರ್ಬಂಧ ಮತ್ತು ಬಳಸಿದರೆ ಆಗುವ ಕಾನೂನು ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

Exit mobile version