Site icon Vistara News

Toilet Cleaning: ಸರ್ಕಾರಿ ಆದೇಶ ಧಿಕ್ಕರಿಸಿ ಮಕ್ಕಳಿಂದ ಟಾಯ್ಲೆಟ್‌ ಕ್ಲೀನಿಂಗ್?‌ ಕಲಬುರಗಿಯಲ್ಲಿ ಮುಖ್ಯ ಶಿಕ್ಷಕಿ ಮೇಲೆ ದೂರು

Toilet Cleaning by students

ಕಲಬುರಗಿ: ರಾಜ್ಯದ ಶಾಲೆಗಳಲ್ಲಿ ಶೌಚಾಲಯಗಳನ್ನು ಮಕ್ಕಳಿಂದ ಸ್ವಚ್ಛಗೊಳಿಸುವಂತೆ (Toilet Cleaning) ಇಲ್ಲ ಎಂದು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದರೂ ಮತ್ತೊಂದು ಪ್ರಕರಣ ಈಗ ಬೆಳಕಿಗೆ ಬಂದಿದೆ. ಕಲಬುರಗಿಯಲ್ಲಿ ಖಾಸಗಿ ಶಾಲೆ (Kalaburagi Private School) ಮುಖ್ಯ ಶಿಕ್ಷಕಿಯೊಬ್ಬರು (headmistress) ಶಾಲಾ ಮಕ್ಕಳಿಂದ ಟಾಯ್ಲೆಟ್ ಕ್ಲಿನಿಂಗ್‌ ಹಾಗೂ ಕಸ ಗುಡಿಸಲು ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಶಾಲೆಯಲ್ಲಿ ಅಷ್ಟೆ ಅಲ್ಲದೆ, ಈ ಮುಖ್ಯ ಶಿಕ್ಷಕಿಯು ತನ್ನ ಮನೆಯಲ್ಲೂ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂದು ದೂರು ದಾಖಲಾಗಿದೆ. ಕಲಬುರಗಿಯ ಮೌಲಾನಾ ಆಜಾದ್ ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ.

ಮುಖ್ಯ ಶಿಕ್ಷಕಿ ಜೋಹರಾ

ಮೌಲಾನ್ ಆಜಾದ್ ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಮುಖ್ಯ ಶಿಕ್ಷಕಿ ಜೋಹರಾ ವಿರುದ್ಧ ಈ ಗಂಭಿರ ಆರೋಪ ಕೇಳಿಬಂದಿದೆ. ಕಲಬುರಗಿ ಹೊರವಲಯದ ಮಾಲಗತ್ತಿ ರೋಡ್‌ನ ಸೋನಿಯಾ ಗಾಂಧಿ ಕ್ವಾಟರ್ಸ್ ಬಳಿ ಈ ಶಾಲೆ ಇದೆ. 8ನೇ ತರಗತಿಯ ವಿದ್ಯಾರ್ಥಿ ಮಹಮದ್ ಪೈಜಾನ್‌ನಿಂದ ಈ ಕೆಲಸವನ್ನು ಅವರು ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

ಮಗ ಮನೆಗೆ ಬಂದಿಲ್ಲ!

ಮಹಮ್ಮದ್ ಫೈಜನ್ ಜತೆ ಹಲವು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕಿ ಈ ಕೆಲಸವನ್ನು ಹೇಳಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ದೂರಿದ್ದಾರೆ. ಕಳೆದ ಹಲವು ದಿನಗಳಿಂದ ಶಾಲೆ ಮತ್ತು ಮನೆಯ ಕೆಲಸವನ್ನು ಇವರು ಮಾಡಿಸುತ್ತಿರುವುದಾಗಿ ಆರೋಪ ಮಾಡಿದ್ದಾರೆ. ಶನಿವಾರ ಶಾಲೆ ಬಿಟ್ಟ ಮೇಲೆ ಮಗ ಮನೆಗೆ ಬಾರದೆ ಇದ್ದಾಗ ಗಾಬರಿಗೊಂಡ ಮಹಮ್ಮದ್ ಫೈಜನ್‌ ತಂದೆ ಮಹಮ್ಮದ್ ಜಮೀರ್ ಮಗನ ಬಗ್ಗೆ ವಿಚಾರಿಸಲು ಶಾಲೆಗೆ ತೆರಳಿದ್ದಾರೆ.

ದೂರು ದಾಖಲು ಮಾಡಿದ ತಂದೆ

ಶಾಲೆಗೆ ಹೋದಾಗ ಮುಖ್ಯ ಶಿಕ್ಷಕಿಯ ಮನೆಯಲ್ಲಿ ಕೆಲಸ ಮಾಡುತ್ತಿರುವ ವಿಚಾರ ತಿಳಿದು ಅವರ ಮನೆಗೆ ಹೋಗಿ ವಿಚಾರಿಸಿದ್ದಾರೆ. ಅಲ್ಲಿ ತನ್ನ ಮಗ ಮುಖ್ಯ ಶಿಕ್ಷಕಿಯ ಮನೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಮ್ಮದ್‌ ಜಮೀರ್‌, ರೋಜಾ ಪೊಲೀಸ್ ಠಾಣೆಯಲ್ಲಿ ಮುಖ್ಯ ಶಿಕ್ಷಕಿಯ ವಿರುದ್ಧ ದೂರು ನೀಡಿದ್ದಾರೆ.

ಮಕ್ಕಳನ್ನು ಟಾಯ್ಲೆಟ್‌ ಕ್ಲೀನಿಂಗ್‌ಗೆ ಬಳಸುವಂತಿಲ್ಲ; ಮಹತ್ವದ ಆದೇಶ

ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆ ನಿರ್ವಹಿಸಲು ವಿದ್ಯಾರ್ಥಿಗಳನ್ನು ಬಳಸುವಂತೆ ಇಲ್ಲ ಎಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಇಂತಹ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಛತೆಯಂತಹ ಕಾರ್ಯಗಳಿಂದ ದೂರವಿರಿಸುವುದು ಅಧಿಕಾರಿಗಳ, ಮುಖ್ಯ ಶಿಕ್ಷಕರ, ಶಿಕ್ಷಕರ, ಸಿಬ್ಬಂದಿಗಳ ಕರ್ತವ್ಯವಾಗಿದೆ. ಒಂದು ವೇಳೆ ಇದನ್ನು ಮೀರಿ ಮಾಡಿಸಿದರೆ ಅಂಥವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವುದಲ್ಲದೆ, ಎಫ್‌ಐಆರ್‌ ಅನ್ನು ಸಹ ದಾಖಲು ಮಾಡಲಾಗುತ್ತದೆ ಎಂದೂ ಹೇಳಲಾಗಿದೆ. ಜತೆಗೆ ಕೆಲವು ಮಾರ್ಗಸೂಚಿಯನ್ನೂ ಸಹ ನೀಡಿದೆ.

ಸರ್ಕಾರದ ಮಾರ್ಗಸೂಚಿಯಲ್ಲೇನಿದೆ?

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿಗೆ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದ ಸ್ವಚ್ಛತೆ ಮಾಡಿಸುತ್ತಿರುವ ಕುರಿತಾದ ಘಟನೆಗಳು ಸರ್ಕಾರದ ಮತ್ತು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ, ಸಹ ಪಠ್ಯ ಚಟುವಟಿಕೆಗಳಲ್ಲಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಛತೆಯಂತಹ ಕಾರ್ಯಗಳಿಂದ ದೂರವಿರಿಸುವುದು ಅಧಿಕಾರಿಗಳ, ಮುಖ್ಯ ಶಿಕ್ಷಕರ, ಶಿಕ್ಷಕರ, ಸಿಬ್ಬಂದಿಗಳ ಕರ್ತವ್ಯವಾಗಿರುತ್ತದೆ. ಆದರೆ ಅವರುಗಳು ಈ ಹೊಣೆಗಾರಿಕೆಯನ್ನು ಮರೆತು ವಿದ್ಯಾರ್ಥಿಗಳನ್ನು ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆಯಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಆಕ್ಷೇಪಣೀಯ ಮತ್ತು ಖಂಡನೀಯ. ಇಂತಹ ಘಟನೆಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯಗಳ ಸ್ವಚ್ಛತೆಯನ್ನು ನಿರ್ವಹಿಸುವ ಕುರಿತು ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಂಬಂಧಿಸಿದ ಎಲ್ಲರಿಗೂ ತಿಳಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ಮೈಸೂರು ಲೋಕಸಭೆಗೆ ಯದುವೀರ್‌ ಒಡೆಯರ್‌ ಎಂಟ್ರಿ? ಟಿಕೆಟ್‌ ಕೊಡಲು ಬಿಜೆಪಿ, ಕಾಂಗ್ರೆಸ್‌ ಪೈಪೋಟಿ!

ಮೇಲ್ಕಂಡ ಎಲ್ಲ ಅಂಶಗಳನ್ನು ಹಾಗೂ ಈ ಕುರಿತು ಸರ್ಕಾರದಿಂದ ಮತ್ತು ಇಲಾಖೆಯಿಂದ ಕಾಲ ಕಾಲಕ್ಕೆ ಹೊರಡಿಸಲಾಗುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಲು ಹಾಗೂ ವಿದ್ಯಾರ್ಥಿಗಳನ್ನು ಶಾಲಾ ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುವಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಎಚ್ಚರಿಕೆ ಕ್ರಮಗಳನ್ನು ವಹಿಸುವಂತೆ ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮತ್ತು ಸಂಬಂಧಿಸಿದ ಎಲ್ಲ ಇಲಾಖಾಧಿಕಾರಿಗಳಿಗೆ ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

Exit mobile version