ಮಂಡ್ಯ: ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಅವರಿಗೆ ಜಾಮೀನು ಸಿಕ್ಕಿದೆ. ಶ್ರೀರಂಗಪಟ್ಟಣಲ್ಲಿರುವ ಜಿಲ್ಲಾ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಭಾಕರ್ ಭಟ್ ಅವರ ವಿರುದ್ಧ IPC ಸೆಕ್ಷನ್ 354, 294, 509, 506, 153A, 295, 295A, 298 ಅಡಿ ಪ್ರಕರಣ ದಾಖಲಾಗಿತ್ತು.
ಡಿ.24ರಂದು ಶ್ರೀರಂಗಪಟ್ಟಣದಲ್ಲಿ ನಡೆದ ಸಂಕೀರ್ತನಾ ಯಾತ್ರೆ ವೇಳೆ ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಬುಧವಾರ ಪ್ರಕರಣ ಸಂಬಂಧ ವಿಚಾರಣೆ ನಡೆದು ಕಲ್ಲಡ್ಕ ಪ್ರಭಾಕರ್‌ಗೆ 2 ಲಕ್ಷ ರೂ ಮೌಲ್ಯದ ಬಾಂಡ್ ನೀಡುವಂತೆ ಸೂಚಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಪರ ವಕೀಲ ಚಂದ್ರೇಗೌಡ ವಾದ ಮಂಡನೆ ಮಾಡಿದ್ದರು.
ಇದನ್ನೂ ಓದಿ | CM Siddaramaiah: ಸಿಎಂ ಅವರಿಂದ ಪ್ರಧಾನಿ ನಿದ್ರಿಸುವ ಪೋಸ್ಟರ್ ಟ್ವೀಟ್, ವಿಜಯೇಂದ್ರ ಕಿಡಿ
ಕಲ್ಲಡ್ಕ ಪ್ರಭಾಕರ್ ಭಟ್ ಏನು ಹೇಳಿದ್ದರು?
ಶ್ರೀರಂಗಪಟ್ಟಣದ ಗಂಜಾಂನಲ್ಲಿ ಹನುಮ ಜಯಂತಿ ಅಂಗವಾಗಿ ನಡೆದ ಸಂಕೀರ್ತನಾ ಯಾತ್ರೆ ವೇಳೆ ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿದ್ದರು. ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ತ್ರಿವಳಿ ತಲಾಕ್ (Triple Talaq) ಹೇಳುವ ಅವಕಾಶ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸರ್ಕಾರದಿಂದಾಗಿ ತ್ರಿವಳಿ ತಲಾಕ್ ರದ್ದಾಗಿದೆ. ಬಹು ಪತ್ನಿತ್ವ ಪಿಡುಗು ಮತ್ತು ತ್ರಿವಳಿ ತಲಾಕ್ ಕಾಟದಿಂದಾಗಿ ಈ ಹಿಂದೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ (Permanent Husband) ಇರಲಿಲ್ಲ. ತ್ರಿವಳಿ ತಲಾಕ್ ರದ್ದುಪಡಿಸುವ ಮೂಲಕ ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರವಾಗಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದರು.
ಮುಸಲ್ಮಾನ ಹುಡುಗರು ಅಷ್ಟೇ ಅಲ್ಲ, ಮುಸ್ಲಿಂ ಮಹಿಳೆಯರೂ ಮತಾಂತರ ಮಾಡುತ್ತಿದ್ದಾರೆ. ನಿಮ್ಮ ಮುಸ್ಲಿಂ ಸಮಾಜದಲ್ಲಿ ಹುಡುಗಿಯರು ಇಲ್ಲವಾ? ಹಿಂದೂ ಹುಡುಗಿಯರನ್ನು ಯಾಕೆ ಟಾರ್ಗೆಟ್ ಮಾಡ್ತೀರಾ? ನಿಮಗೆ ತ್ರಿವಳಿ ತಲಾಖ್ ನೀಡುವ ಪದ್ಧತಿಯನ್ನು ತೆಗೆದು ಹಾಕಿದ್ದು ನರೇಂದ್ರ ಮೋದಿ ಅಲ್ಲವೇ ಎಂದು ಭಟ್ ಪ್ರಶ್ನಿಸಿದ್ದರು.
ನಿಮಗೆ ತಾಕತ್ ಇದ್ದರೆ ಹಿಜಾಬ್ ನಿಷೇಧ ವಾಪಸ್ ಪಡೆಯಿರಿ. ಶಾಲೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಸಮವಸ್ತ್ರ ಜಾರಿ ಮಾಡಿದ್ದೇ ಏಕರೂಪತೆ ತರುವ ಉದ್ದೇಶದಿಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ, ಮಕ್ಕಳಲ್ಲಿ ಯಾಕೆ ತಾರತಮ್ಯ ಹುಟ್ಟು ಹಾಕುತ್ತೀರಿ? ಅಲ್ಪಸಂಖ್ಯಾತರ ಅಭಿವೃದ್ಧಿಗೆ 10,000 ಕೋಟಿ ರೂ. ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಯಾರಪ್ಪನ ಮನೆಯ ದುಡ್ಡು ಕೊಡುತ್ತೀರಿ? ತೆರಿಗೆ ಕಟ್ಟುವವರು ಹಿಂದುಗಳು. ನಮ್ಮ ಹಣ ಅಲ್ಪಸಂಖ್ಯಾತರಿಗೆ ಕೊಡುತ್ತೀರಾ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಪ್ರಶ್ನಿಸಿದ್ದರು.
ಶಾಲೆಯೊಳಗೆ ಜೈ ಶ್ರೀರಾಮ್ ಕೂಗುತ್ತೇವೆ. ಹಿಜಾಬ್ ನಿಷೇಧ ವಾಪಸ್ ತೆಗೆಯುತ್ತಾರಂತೆ. ಅವರು ಹಿಜಾಬ್ ಹಾಕಿಕೊಂಡು ಬರಲಿ. ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ. ಕೇಸರಿ ಟೋಪಿ ಹಾಕಿಕೊಂಡು ಬರುತ್ತೇವೆ ಎಂದು ಕಲ್ಲಡ್ಕ ಕಿಡಿಕಾರಿದ್ದರು.
ಇದನ್ನೂ ಓದಿ | Ram Mandir: ದೇವರನ್ನು ಆಟಿಕೆ ಎನ್ನುವ ಕಾಂಗ್ರೆಸ್‌ಗೆ ಈ ಹೇಳಿಕೆ ಅವನತಿಯ ಅಡಿಗಲ್ಲು: ಆರ್. ಅಶೋಕ್
ರಾಮ ಸರ್ವ ಶ್ರೇಷ್ಠ ರಾಜ. ರಾಮನ ಆದರ್ಶಗಳು ನಮಗೆ ಮೇಲ್ಪಂಕ್ತಿ ಆಗಬೇಕು. ಸಾವಿರಾರು ವರ್ಷಗಳಿಂದ ಭಾರತ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ಭಾರತದ ಅಸ್ತಿತ್ವಕ್ಕೆ ಯಾವಾಗಲೂ ಧಕ್ಕೆ ಬಂದಿಲ್ಲ. ಅಲೆಕ್ಸಾಂಡರ್ ದಿ ಗ್ರೇಟ್ ಅವರ ದೇಶಕ್ಕೆ ಮಾತ್ರ. ಅಲೆಕ್ಸಾಂಡರ್ ನಮ್ಮ ಒಬ್ಬ ರಾಜನನ್ನು ಸೋಲಿಸಲು ಸಾಧ್ಯವಾಗದೆ ಓಡಿ ಹೋಗಿ ಸತ್ತ. ಕ್ರೈಸ್ತ, ಇಸ್ಲಾಂ ಆಳ್ವಿಕೆಯ ಕಾಲದಲ್ಲಿ ಧರ್ಮ ವಿಸ್ತರಣೆಯೇ ಉದ್ದೇಶವಾಗಿತ್ತು. ನಮ್ಮ ಸ್ವಾರ್ಥಕ್ಕಾಗಿ ಸತ್ಯ- ಅಸತ್ಯ, ಮಾನ- ಅಪಮಾನ ಗೊತ್ತಾಗಲಿಲ್ಲ. ಕಾಂಗ್ರೆಸ್ ನಾಯಕರ ವೈಫಲ್ಯತೆಯಿಂದ ದೇಶ ವಿಭಜನೆ ಆಯಿತು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.