Site icon Vistara News

Kalyana Kranti Samavesha | ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕದ ಬಾಕಿ ಬ್ಯಾಕ್‌ಲಾಗ್‌ ಹುದ್ದೆ ಭರ್ತಿ: ಸಿದ್ದರಾಮಯ್ಯ

kalaburgi congress conference ಕಾಂಗ್ರೆಸ್‌ ಕಲ್ಯಾಣ ಕ್ರಾಂತಿ ಸಮಾವೇಶ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ

ಕಲಬುರಗಿ: ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲ ಕಲ್ಯಾಣ ಕರ್ನಾಟಕ (Kalyana Kranti Samavesha) ಭಾಗದಲ್ಲಿರುವ ಎಲ್ಲ ಬಾಕಿ ಇರುವ ಉದ್ಯೋಗಗಳನ್ನು ತುಂಬಲಾಗುವುದು. ಪ್ರತಿ ವರ್ಷ ೫ ಸಾವಿರ ಕೋಟಿ ರೂಪಾಯಿಯನ್ನು ಈ ಭಾಗದ ಅಭಿವೃದ್ಧಿಗೆ ನೀಡುತ್ತೇವೆ. ಕರ್ನಾಟಕದಲ್ಲಿ ೨೦೨೩ರ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಅಧಿಕಾರ ಹಿಡಿಯುವುದು ಶತಸಿದ್ಧ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದು ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಜನಪರವಾದ ಸರ್ಕಾರವನ್ನು ಸ್ಥಾಪನೆ ಮಾಡಿದರೆ ಅದೇ ಖರ್ಗೆ ಅವರಿಗೆ ನೀಡುವ ನಿಜವಾದ ಕೊಡುಗೆ ಹಾಗೂ ಅಭಿಮಾನ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಕಲಬುರಗಿ ಎನ್‌ವಿ ಮೈದಾನದಲ್ಲಿ ಶನಿವಾರ (ಡಿ. ೧೦) ಏರ್ಪಡಿಸಲಾಗಿದ್ದ ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಕಾರ್ಯಕರ್ತರು ಉತ್ಸಾಹ ಹಾಗೂ ಜನರ ನಾಡಿಮಿಡಿತವನ್ನು ನೋಡಿದಾಗ ಕಾಂಗ್ರೆಸ್‌ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ೨೧ ಸ್ಥಾನಗಳನ್ನು ಮಾತ್ರ ಕಾಂಗ್ರೆಸ್‌ ಗೆದ್ದಿತ್ತು. ಆದರೆ, ಈ ಬಾರಿ ಈ ಭಾಗದಲ್ಲಿ ಬರುವ ೪೧ ಸ್ಥಾನಗಳಲ್ಲಿ ಕನಿಷ್ಠ ಪಕ್ಷ ೩೫ ಸ್ಥಾನಗಳನ್ನು ಗೆಲ್ಲಬೇಕಿದ್ದು, ಇದಕ್ಕೆ ಎಲ್ಲ ಕಾರ್ಯಕರ್ತರು ಕಾರಣೀಕರ್ತರಾಗಬೇಕು ಎಂದು ಸಿದ್ದರಾಮಯ್ಯ ಕೋರಿದರು.

ವಿಧಾನಸೌಧದ ಪ್ರತಿಗೋಡೆಯಲ್ಲೂ ಲಂಚದ ಕೂಗು
ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯು ಅನೈತಿಕವಾಗಿ ರಚನೆಯಾಗಿರುವ ಸರ್ಕಾರವಾಗಿದೆ. ದುಡ್ಡು ಕೊಟ್ಟು ಶಾಸಕರನ್ನು ಖರೀದಿ ಮಾಡಿ ರಚನೆಯಾಗಿದೆ. ಅಧಿಕಾರ ಹಿಡಿದಾಗಿನಿಂದಲೂ ಅನೈತಿಕತೆ ಮುಂದುವರಿದಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಯಾವ ಗುತ್ತಿಗೆದಾರರ ಸಂಘವೂ ಸರ್ಕಾರಗಳನ್ನು ೪೦ ಪರ್ಸೆಂಟ್‌ ಸರ್ಕಾರ ಎಂದು ಕರೆದಿರಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಲಂಚದ ಕೂಪದ ಸರ್ಕಾರವಾಗಿದೆ. ವಿಧಾನಸೌಧದ ಪ್ರತಿ ಗೋಡೆಗಳು ಲಂಚ ಲಂಚ ಲಂಚ ಎಂದು ಹೇಳಿ ಪಿಸುಗುಡುತ್ತಿವೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇದನ್ನೂ ಓದಿ | Rudset academy | ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: ರುಡ್‌ಸೆಟ್‌ ಕಟ್ಟಡ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ರಾಜ್ಯ ಉಳಿಸಿ ಎಂದು ಕೋರಿದ ಸಿದ್ದರಾಮಯ್ಯ
ಇಂದು ಯಾವುದೇ ಯೋಜನೆಗಳು ಕ್ಲಿಯರ್‌ ಆಗಬೇಕೆಂದರೆ ಕನಿಷ್ಠ ೪೦ ಪರ್ಸೆಂಟ್‌ ಕಮಿಷನ್‌ ಕೊಡಬೇಕು, ವರ್ಗಾವಣೆ, ಪೋಸ್ಟಿಂಗ್‌, ಪ್ರಮೋಷನ್‌ ಹೀಗೆ ಎಲ್ಲ ಕಡೆಯೂ ಕಮಿಷನ್‌ ಕೊಡುವ ಪರಿಸ್ಥಿತಿ ಇದೆ. ಇತ್ತೀಚೆಗೆ ಮೃತಪಟ್ಟ ಪೊಲೀಸ್‌ ಅಧಿಕಾರಿಯೊಬ್ಬರು ೭೦-೮೦ ಲಕ್ಷ ಕೊಟ್ಟು ಪೋಸ್ಟಿಂಗ್‌ ಮಾಡಿಸಿಕೊಂಡಿದ್ದರು. ಆದರೆ, ಆ ಒತ್ತಡದಿಂದ ಮೃತಪಟ್ಟಿದ್ದರು ಎಂದು ನಾನು ಹೇಳುವುದಲ್ಲ. ಇದೇ ಬಿಜೆಪಿ ಸರ್ಕಾರದ ಸಚಿವರಾಗಿರುವ ಎಂಟಿಬಿ ನಾಗರಾಜ್‌ ಅವರು ಹೇಳಿಕೆ ನೀಡಿದ್ದಾರೆ. ಭ್ರಷ್ಟ ಸರ್ಕಾರ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅವರು, ನಿಮಗೆಲ್ಲರಿಗೂ ನಾನು ಪ್ರಾರ್ಥನೆ ಮಾಡುವುದೇನೆಂದರೆ ಈ ಸರ್ಕಾರವನ್ನು ಕಿತ್ತೊಗೆದರೆ ಈ ರಾಜ್ಯ ಉಳಿಯುತ್ತದೆ, ಸಂವಿಧಾನ ಉಳಿಯುತ್ತದೆ, ಪ್ರಜಾಪ್ರಭುತ್ವ ಉಳಿಯುತ್ತದೆ, ಭ್ರಷ್ಟಾಚಾರ ತೊಲಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಖರ್ಗೆ ಸೇರಿ ಹಲವರ ಹೋರಾಟದಿಂದ ೩೭೧ಜೆ ಅನುಷ್ಠಾನ
ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟದಿಂದ ಈ ಭಾಗದಲ್ಲಿ ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ಕೊಡಬೇಕು. ಅದಕ್ಕಾಗಿ ಸಂವಿಧಾನ ತಿದ್ದುಪಡಿಯಾಗಬೇಕು. ೩೭೧ ಜೆ ಜಾರಿಯಾಗಬೇಕೆಂದು ಖರ್ಗೆ, ಮಾಜಿ ಸಿಎಂ ಧರ್ಮಸಿಂಗ್‌, ವೈಜನಾಥ್‌ ಪಾಟೀಲ್ ಸೇರಿದಂತೆ ಅನೇಕ ಮಹನೀಯರು ಈ ಭಾಗದಲ್ಲಿ ಹೋರಾಟ ಮಾಡಿದ್ದರು. ಖರ್ಗೆಯವರ ನಿರಂತರ ಹೋರಾಟ, ಒತ್ತಡದ ಫಲವಾಗಿ ೩೭೧ಜೆ ಜಾರಿಯಾಗಿದೆ. ಇದು ಕೇಂದ್ರ ಕಾಂಗ್ರೆಸ್‌ ಸರ್ಕಾರದ ಕೊಡುಗೆಯಾಗಿದೆ. ಆದರೆ, ಬಿಜೆಪಿಯವರು ಕಲ್ಯಾಣ ಕರ್ನಾಟಕ ಎಂದು ಹೆಸರನ್ನು ಮಾತ್ರ ಬದಲಾವಣೆ ಮಾಡಿದ್ದೇ ಹೆಗ್ಗಳಿಕೆಯಾಗಿದೆ ಎಂದು ಸಿದ್ದರಾಮಯ್ಯ ದೂರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ೩೭೧ಜೆ ಜಾರಿಯಾಗುವ ಸಂದರ್ಭದಲ್ಲಿ ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದೆ. ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್‌.ಕೆ. ಪಾಟೀಲ್‌ ನೇತೃತ್ವದಲ್ಲಿ ಸಮಿತಿಯನ್ನು ಮಾಡಿ ಇದನ್ನು ಹೇಗೆ ಅನುಷ್ಠಾನ ಮಾಡಬೇಕೆಂದು ವರದಿ ನೀಡುವಂತೆ ಸೂಚನೆ ನೀಡಿದ್ದೆ. ಅವರು ನೀಡಿದ ವರದಿಯನ್ನು ಯಥಾವತ್ತಾಗಿ ನಮ್ಮ ಸರ್ಕಾರ ಜಾರಿ ಮಾಡಿತು. ಹೀಗೆ ಮಾಡಿದ್ದು ಕಾಂಗ್ರೆಸ್‌ ಸರ್ಕಾರ ಎಂಬುದನ್ನು ನೀವೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಆಗ ಎಸ್‌.ಎಂ. ಕೃಷ್ಣ ಅವರು ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದರು. ಲಾಲ್‌ ಕೃಷ್ಣ ಆಡ್ವಾಣಿ ಅವರು ಉಪ ಪ್ರಧಾನಿಯಾಗಿದ್ದರು. ಆಗ ೩೭೧ಜೆ ಅನುಷ್ಠಾನಕ್ಕೆ ತರುವ ಸಂಬಂಧ ಸಂವಿಧಾನದಲ್ಲಿ ತಿದ್ದುಪಡಿ ತರುವಂತೆ ಎಸ್‌.ಎಂ. ಕೃಷ್ಣ ಅವರು ಪತ್ರ ಬರೆದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Karnataka Election | ವರುಣ ಕ್ಷೇತ್ರವೇ ಗಟ್ಟಿ ಮಾಡಿಕೊಂಡರಾ ಸಿದ್ದರಾಮಯ್ಯ?; ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ

ಖರ್ಗೆ ಮನೆಬಾಗಿಲಿಗೆ ಎಐಸಿಸಿ ಹುದ್ದೆ
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನೂ ಎಂದೂ ಬಯಸಿದವರಲ್ಲ. ಅವರ ಮನೆ ಬಾಗಿಲಿಗೆ ಈ ಹುದ್ದೆಯೇ ಅರಸಿಬಂದಿದೆ. ಅವರೊಬ್ಬ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಅವರು ಈಗ ಕಾಂಗ್ರೆಸ್‌ ನೇತೃತ್ವವನ್ನು ವಹಿಸಿಕೊಂಡಿದ್ದು, ಕಾಂಗ್ರೆಸ್‌ ನವ ಚೈತನ್ಯವನ್ನು ಪಡೆದು ದೇಶದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಹೇಳಿದರು.

ಖರ್ಗೆ ಅವರಿಗೆ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ನಾಯಕರಾದ ರಾಹುಲ್‌ ಗಾಂಧಿ ಅವರ ಸಂಪೂರ್ಣವಾದ ಆಶೀರ್ವಾದ ಇದೆ. ಕಾಂಗ್ರೆಸ್‌ನಲ್ಲಿ ಬ್ಲಾಕ್‌ ಸಮಿತಿ ಅಧ್ಯಕ್ಷರಾದಾಗಿನಿಂದ ಎಐಸಿಸಿ ಅಧ್ಯಕ್ಷಗಾದಿವರೆಗೆ ಬೇರು ಮಟ್ಟದಿಂದ ಏರಿರುವ ಖರ್ಗೆ ಅವರು ಕಾಂಗ್ರೆಸ್‌ನ ಎಲ್ಲ ಮಜಲುಗಳನ್ನು ದೀರ್ಘ ಕಾಲದಿಂದ ನೋಡಿಕೊಂಡು ಬಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಬೆಂಗಳೂರು ನಗರಕ್ಕೆ ಮೊದಲಿಗೆ ಆಗಮಿಸಿದ್ದರು. ಆಗಲೂ ಸಹ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಖರ್ಗೆ ಅವರಿಗೆ ಅಭೂತಪೂರ್ವ ಸ್ವಾಗತವನ್ನು ನಾವೆಲ್ಲರೂ ಸೇರಿ ಕೋರಿದ್ದೆವು. ಇಂದು ಅವರ ತವರು ಜಿಲ್ಲೆಯಾದ ಕಲಬುರಗಿಗೆ ಭೇಟಿ ನೀಡಿದ್ದು, ಅವರು ಅಧ್ಯಕ್ಷರಾದ ಮೇಲೆ ೨ನೇ ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ಅವರಿಗೆ ಕರ್ನಾಟಕದ ಜನತೆ ಸೇರಿದಂತೆ ಕಲಬುರಗಿ ಸುತ್ತಮುತ್ತಲ ಜನತೆ ಭವ್ಯ ಸ್ವಾಗತವನ್ನು ಕೋರಿದ್ದಾರೆ. ಈ ಎಲ್ಲವನ್ನೂ ನೋಡಿದಾಗ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ದ್ರುವ ನಾರಾಯಣ್‌, ಕಾಂಗ್ರೆಸ್‌ ಮುಖಂಡ ಎಚ್‌.ಕೆ. ಪಾಟೀಲ್‌ ಸೇರಿದಂತೆ ಇನ್ನಿತರ ಕಾಂಗ್ರೆಸ್‌ ಮುಖಂಡರು ಹಾಜರಿದ್ದರು.

ಇದನ್ನೂ ಓದಿ | Karnataka Elections | ಬಿಜೆಪಿಯಿಂದ ಮತ್ತೊಂದು ಮೆಗಾ ಸಮಾವೇಶ: ಡಿ. 18ರಂದು ನಾನಾ ಪ್ರಕೋಷ್ಠಗಳ ಶಕ್ತಿ ಸಂಗಮ

Exit mobile version