ಕಲಬುರಗಿ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ನಾವು ಕಲ್ಯಾಣ ಕರ್ನಾಟಕ ಮಾತ್ರವಲ್ಲದೆ, ಇಡಿ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ನಮ್ಮ ಸರ್ಕಾರದವರು ಈ ಕೆಲಸವನ್ನು ಮಾಡದೇ ಇದ್ದರೆ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವೇ ಇಲ್ಲ. ಇಂದು ನಾವು ಕೊಡುವ ಭರವಸೆಯನ್ನು ಈಡೇರಿಸುತ್ತೇವೆ. ನಾವು ಕಲ್ಯಾಣ ಕರ್ನಾಟಕಕ್ಕಾಗಿ ೧೦ ಅಂಶದ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ (Kalyana Kranti Samavesha) ಹೇಳಿದರು.
ಕಲಬುರಗಿ ಎನ್‌ವಿ ಮೈದಾನದಲ್ಲಿ ಶನಿವಾರ (ಡಿ. ೧೦) ಏರ್ಪಡಿಸಲಾಗಿದ್ದ ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕಕ್ಕಾಗಿ ಕಾಂಗ್ರೆಸ್ ರೂಪಿಸಿರುವ ೧೦ ಅಂಶದ ಕಾರ್ಯಕ್ರಮದ ಪಟ್ಟಿಯನ್ನು ವಿವರಿಸಿದರು.
೧. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಕೆಆರ್‌ಡಿಬಿಗೆ ಮೊದಲ ವರ್ಷ ಐದು ಸಾವಿರ ಕೋಟಿ ರೂಪಾಯಿ ಅನುದಾನವನ್ನು ನೀಡುತ್ತೇವೆ. ಪ್ರತಿ ವರ್ಷವೂ ಈ ಅನುದಾನವನ್ನು ಏರಿಕೆ ಮಾಡುತ್ತಲೇ ಹೋಗುತ್ತೇವೆ.
ಇದನ್ನೂ ಓದಿ | Kalyana Kranti Samavesha | ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕದ ಬಾಕಿ ಬ್ಯಾಕ್‌ಲಾಗ್ ಹುದ್ದೆ ಭರ್ತಿ: ಸಿದ್ದರಾಮಯ್ಯ
೨. ಈ ಭಾಗದ ಜನರಿಗೆ ಇಂಡಸ್ಟ್ರಿಯಲ್ ಪಾಲಿಸಿಯನ್ನು ರೂಪಿಸುತ್ತೇವೆ.
೩. ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಲಕ್ಷ ಹುದ್ದೆ ಸೃಷ್ಟಿ ಮಾಡಿ ಏಳು ಜಿಲ್ಲೆಯ ಜನರಿಗೆ ಅನುಕೂಲ ಮಾಡಿ ಕೊಡುತ್ತೇವೆ.
೪. ಈ ಭಾಗದ ನೀರಾವರಿ ಯೋಜನೆಗಳು ಪೂರ್ಣಗೊಳಿಸುವುದಕ್ಕೆ ವಿಶೇಷ ಪ್ಯಾಕೇಜ್ ನೀಡುತ್ತೇವೆ
೫. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ನಾವು ಕೊಟ್ಟ ವಾಗ್ದಾನವನ್ನು ಪೂರ್ಣಗೊಳಿಸಲು ಒಂದು ಸಮಿತಿ ರಚನೆ ಮಾಡಿ ನಿರ್ವಹಣೆ ಮಾಡುತ್ತೇವೆ
೬. ಐಐಟಿ, ಐಐಎಂ, ಏಮ್ಸ್ ಸೇರಿದಂತೆ ಇನ್ನಿತರ ಸಂಸ್ಥೆಗಳು ಕಲ್ಯಾಣ ಕರ್ನಾಟಕಕ್ಕೆ ಬರಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ
೭. ಪ್ರತಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಪದವಿ ಕಾಲೇಜನ್ನು ೫ ವರ್ಷದಲ್ಲಿ ಸ್ಥಾಪನೆ ಮಾಡುತ್ತೇವೆ. ಈ ಭಾಗದಲ್ಲಿ ವಿಶೇಷ ಶಿಕ್ಷಣ ವಲಯ ಪಾಲಿಸಿಯನ್ನು ಸ್ಥಾಪನೆ ಮಾಡಲಾಗುವುದು
೭. ಎಲ್ಲ ಕುಟುಂಬಗಳಿಗೂ ಐದು ವರ್ಷದಲ್ಲಿ ಮನೆ ನಿರ್ಮಿಸಿಕೊಡುವ ಕೆಲಸ ಮಾಡುತ್ತೇವೆ
೯. ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಕೊಟ್ಟು ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇವೆ.
೧೦. ಈ ಭಾಗದಲ್ಲಿ ಬರುವ ಪ್ರದೇಶಗಳಿಗೆ ಆಗಬೇಕಿರುವ ಕೃಷ್ಣಾ ಸೇರಿದಂತೆ ಬಾಕಿ ಇರುವ ಅನೇಕ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನವನ್ನು ನೀಡಲಿದ್ದೇವೆ
ನಾವು ಕೊಟ್ಟ ಈ ವಚನವನ್ನು ಪೂರ್ಣ ಮಾಡಲು ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು. ಹಾಗಾಗಿ ನೀವು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಖರ್ಗೆ ಕರೆ ನೀಡಿದರು.
ನಾವೇನು ಪಶ್ಚಿಮ ಕರ್ನಾಟಕದವರೇ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದವರು ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ನಾವು ಎಲ್ಲಿಯವರು? ಪಶ್ಚಿಮ ಕರ್ನಾಟಕದವರೇ ಅಥವಾ ದಕ್ಷಿಣ ಕರ್ನಾಟಕದವರೇ? ನಾವೂ ಉತ್ತರ ಕರ್ನಾಟಕದವರೇ ಆಗಿದ್ದೇವೆ. ಒಟ್ಟಾರೆ ಇಡಿ ಕರ್ನಾಟಕದವರು ಎಂದು ಹೇಳಿದ ಖರ್ಗೆ, ನಮ್ಮ ಹಿಂದುಳಿದ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹಣ ನೀಡದೆ ಹೋದರೆ ಹೇಗೆ? ಭಾಷಣ ಮಾಡುವುದರಿಂದ ಹೊಟ್ಟೆ ತುಂಬುವುದಿಲ್ಲ ಬೊಮ್ಮಾಯಿಯವರೇ, ಹೈದ್ರಾಬಾದ್ ಕರ್ನಾಟಕದಲ್ಲಿ 50 ಸಾವಿರ ಉದ್ಯೋಗಗಳು ಖಾಲಿ ಇವೆ. ಖಾಲಿ ಇರುವ ಉದ್ಯೋಗಗಳನ್ನು ಏಕೆ ಭರ್ತಿ ಮಾಡಲು ಆಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ | ಹಿಂದು ಉತ್ತರಾಧಿಕಾರ ಕಾಯ್ದೆ ತಿದ್ದುಪಡಿ ಮಾಡಿ ಪರಿಶಿಷ್ಟ ಪಂಗಡದ ಮಹಿಳೆಯರನ್ನೂ ಸೇರಿಸಿ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ
ಇಡೀ ಕರ್ನಾಟಕದಲ್ಲಿ ಲಕ್ಷಾಂತರ ನೌಕರಿಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕ ಭಾಗವೊಂದರಲ್ಲಿಯೇ ೫೦ ಸಾವಿರಕ್ಕೂ ಹೆಚ್ಚು ನೌಕರಿಗಳು ಖಾಲಿ ಇವೆ. ಇಂದು ಯುವಕರು ಕೆಲಸ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಯುವಕರು ಏಕೆ ಸುಮ್ಮನಿದ್ದೀರಿ? ನಾವಾಗಿದ್ದರೆ ಬಾವುಟ ಹಿಡಿದು ಬರುತ್ತಿದ್ದೆವು ಎಂದು ಖರ್ಗೆ ಹೇಳಿದರು.
ಬಯಸದೇ ಬಂದ ಭಾಗ್ಯ
ಕರ್ನಾಟಕ ಭಾಗದಲ್ಲಿ ಯಾವುದೇ ಭಾಗದಲ್ಲಿ ಕಾಂಗ್ರೆಸ್‌ಗೆ ಸೋಲಾದರೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸದಾ ಬಹುಪಾಲು ಸ್ಥಾನವನ್ನು ಇಲ್ಲಿನ ಜನತೆ ಕೊಡುತ್ತಾ ಬಂದಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೂ ಆಗಿದೆ. ಇನ್ನು ನನಗೆ ಎಐಸಿಸಿ ಅಧ್ಯಕ್ಷ ಗಾದಿಯು ತಾನಾಗಿಯೇ ಬಂದಿದೆಯೇ ಹೊರತು ನಾನು ಕೇಳಿ ಪಡೆದುಕೊಂಡಿಲ್ಲ. ನಾನು ಇದನ್ನು ಬಯಸಿಯೂ ಇರಲಿಲ್ಲ, ಕೇಳೂ ಇರಲಿಲ್ಲ. ನಾನು ಯಾವುದನ್ನೂ ಕೇಳದೇ ಇದ್ದರೂ ನನಗೆ ಅನೇಕ ಹುದ್ದೆಗಳು ಸಿಕ್ಕಿದೆ. ನಿಮ್ಮ ಆಶೀರ್ವಾದ, ಬೆಂಬಲ ಹಾಗೂ ಸಹಕಾರದಿಂದ ನನಗೆ ಸಿಕ್ಕ ಎಲ್ಲ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇನೆ ಎಂದು ಖರ್ಗೆ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹಂತ ಹಂತವಾಗಿ ಬೆಳೆದು ಬಂದವರು. ಅವರು ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರಿಗೆ ಬಲ ತುಂಬುವ ಕೆಲಸವನ್ನು ನಾವೆಲ್ಲೂ ಮಾಡಬೇಕು ಎಂದು ಹೇಳಿದರು.
ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ, ಬಿಜೆಪಿ ಆಪರೇಷನ್ ಕಮಲ ಮೂಲಕ ಮೂರೂವರೆ ವರ್ಷದಿಂದ ಅಧಿಕಾರ ನಡೆಸುತ್ತಿದೆ. ಈ ಸರ್ಕಾರದ ವಿರುದ್ಧ ಜನ ಬೇಸತ್ತು ಹೋಗಿದ್ದಾರೆ. ಇವರ ಅವಧಿಯಲ್ಲಿ ಜಾತಿ, ಜಾತಿಗಳ ನಡುವೆ ಜಗಳ, ವೈಷಮ್ಯ ಹೆಚ್ಚಾಗುತ್ತಿದೆ. ಕಲ್ಯಾಣ ಕರ್ನಾಟಕದ ಜನರಿಗಾಗಿ 371 ಜೆ ಜಾರಿಗೆ ತಂದಿದ್ದೇವೆ. ಬಿಜೆಪಿ ಸರ್ಕಾರ ಬಂದಾಗ ನಮ್ಮ ಭಾಗಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ. ಅನುದಾನ ಘೋಷಣೆಯಾದರೂ ಖರ್ಚಾಗುತ್ತಿಲ್ಲ. ಇಂತಹ ಸರ್ಕಾರವನ್ನು ಕಿತ್ತು ಹಾಕಬೇಕಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 41 ಕ್ಷೇತ್ರದಲ್ಲಿ ಬಿಜೆಪಿಯವರನ್ನು ಸೋಲಿಸಬೇಕು ಎಂದು ಖಂಡ್ರೆ ಹೇಳಿದರು.
ಇದನ್ನೂ ಓದಿ | Karnataka Election | ವರುಣ ಕ್ಷೇತ್ರವೇ ಗಟ್ಟಿ ಮಾಡಿಕೊಂಡರಾ ಸಿದ್ದರಾಮಯ್ಯ?; ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ
ತೆರೆದ ವಾಹನದಲ್ಲಿ ಬೃಹತ್ ರ‍್ಯಾಲಿ
ಸಮಾವೇಶಕ್ಕೂ ಮೊದಲು ಕಲಬುರಗಿಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆಗೆ ಅವರಿಗೆ ತವರು ಜಿಲ್ಲೆಯಲ್ಲಿ ಭಾರಿ ಸ್ವಾಗತ ದೊರೆಯಿತು. ಖರ್ಗೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ದಾರಿಯುದ್ದಕ್ಕೂ ಹೂ ಮಳೆ ಸುರಿಸಿದ್ದಾರೆ. ನಗರದ ಗಂಜ್ ಪ್ರದೇಶದಿಂದ ಎನ್‌ವಿ ಮೈದಾನದವರೆಗೂ ಭರ್ಜರಿ ಸ್ವಾಗತವನ್ನು ಕೋರಲಾಗಿದೆ. ತೆರೆದ ವಾಹನದಲ್ಲಿ ಬೃಹತ್ ರ‍್ಯಾಲಿ ನಡೆಸಲಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ
ಕಾಂಗ್ರೆಸ್ ರಾಜ್ಯ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಹಿಂದುಳಿದ ವರ್ಗಗಳ ನಾಯಕ, ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ತವರು ಜಿಲ್ಲೆ ಕಲಬುರಗಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಈ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಲಾಗಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಭಾಗವಾಗಿ ಹಮ್ಮಿಕೊಂಡ ಕಾರ್ಯಕ್ರಮ ಎಂದೂ ಬಣ್ಣಿಸಲಾಗಿದೆ. ಯಾದಗಿರಿ, ಬೀದರ್, ಬಳ್ಳಾರಿ, ರಾಯಚೂರು ಸೇರಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಜನ ಹಾಗೂ ಖರ್ಗೆ ಅಭಿಮಾನಿಗಳು ಕಲಬುರಗಿಗೆ ಆಗಮಿಸಿದ್ದಾರೆ. ಸುಮಾರು ೧ ಲಕ್ಷಕ್ಕೂ ಅಧಿಕ ಮಂದಿ ಜಮಾವಣೆಗೊಂಡಿದ್ದಾರೆ.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ದ್ರುವ ನಾರಾಯಣ್, ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಇದನ್ನೂ ಓದಿ | Karnataka Elections | ಬಿಜೆಪಿಯಿಂದ ಮತ್ತೊಂದು ಮೆಗಾ ಸಮಾವೇಶ: ಡಿ. 18ರಂದು ನಾನಾ ಪ್ರಕೋಷ್ಠಗಳ ಶಕ್ತಿ ಸಂಗಮ