Site icon Vistara News

Jain Muni Murder : ಕಾಮಕುಮಾರ ನಂದಿ ಮಹಾರಾಜ್ ಕೊಲೆಗೆ ರಾಜ್ಯಾದ್ಯಂತ ಜೈನರ ಪ್ರತಿಭಟನೆ

jain community silent protest in chikkodi

ಚಿಕ್ಕೋಡಿ: ಇಲ್ಲಿನ ಹಿರೇಕೋಡಿಯ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜ್‌ ಕೊಲೆಗೆ (Jain Muni Murder) ನ್ಯಾಯ ಒದಗಿಸುವಂತೆ ಆಗ್ರಹಿಸಿ ಚಿಕ್ಕೋಡಿಯಲ್ಲಿ ಜೈನ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಸಾವಿರಾರು ಮಂದಿ ಜೈನ ಸಮುದಾಯದವರು ಮೌನವಾಗಿ ಸಂಚರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಮೂಲಕ ಸಾತ್ವಿಕ ಕೋಪವನ್ನು ತೋರಿಸಿದ್ದಾರೆ. ಇದಲ್ಲದೆ, ರಾಜ್ಯದ ಹಲವು ಕಡೆಯೂ ಮೌನವಾಗಿಯೇ ವಿರೋಧ ವ್ಯಕ್ತಪಡಿಸಿ ಮೆರವಣಿಗೆ ನಡೆಸಲಾಗಿದೆ.

ಕೊಲ್ಲಾಪುರದ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ, ವರೂರಿನ ಭೀಮಸೇನ ಭಟ್ಟಾರಕ ಪಟ್ಟಾಚಾರ್ಯ ಶ್ರೀ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಲಾಗಿದೆ. ನಗರದ ಆರ್‌ಡಿ ಕಾಲೇಜು ಮೈದಾನದಿಂದ ಮೌನವಾಗಿ ಸಂಚಾರ ಮಾಡಿದ ಜೈನ ಸಮುದಾಯದವರು ಹಾಗೂ ನಾಗರಿಕರು ಚಿಕ್ಕೋಡಿ ಎಸಿ ಮಹಾದೇವ ಗಿತ್ತೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಸ್ವಾಮೀಜಿಗಳ ರಕ್ಷಣೆಗೆ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಲಾಗಿದೆ.

ಪ್ರತಿಭಟನೆಗೆ ಚಿಕ್ಕೋಡಿಯಲ್ಲಿ ಸೇರಿರುವ ಜೈನ ಸಮುದಾಯದವರು

ಇದನ್ನೂ ಓದಿ: Weather Report : ರಾಜ್ಯದ ಈ 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಬೆಳಗಾವಿ ಸೇರಿದಂತೆ ನೆರೆಯ ಮಹಾರಾಷ್ಟ್ರದ ಭಕ್ತರು ಹಾಗೂ ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿಯಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು. ಬೆಳಗಾವಿ ಎಸ್‌ಪಿ ಸಂಜೀವ ಪಾಟೀಲ್ ನೇತೃತ್ವದಲ್ಲಿ ಬಿಗಿ ಭದ್ರತೆ ಹಾಕಲಾಗಿತ್ತು.

Jain community protest in Bagalakote

ಪ್ರಕರಣವನ್ನು ಸಿಬಿಐಗೆ ವಹಿಸಿ: ಮಹಾಂತೇಶ ಕವಟಗಿಮಠ

ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಚಿಕ್ಕೋಡಿಯಲ್ಲಿ ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಆಗ್ರಹಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಹಿಂಸಾ ಪರಮೋಧರ್ಮ ಸಂದೇಶವನ್ನು ಭಾರತಕ್ಕೆ ನೀಡಿದ್ದು ಜೈನಸಮುದಾಯ. ಜೈನಸಮುದಾಯದ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇಂದು ಬಿಜೆಪಿ ಸಹ ಮೌನಪ್ರತಿಭಟನೆಯಲ್ಲಿ ಪಾಲ್ಗೊಂಡಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಚಿಕ್ಕೋಡಿ ಬಿಜೆಪಿ ಘಟಕ ಒತ್ತಾಯಿಸುತ್ತದೆ. ಅಲ್ಲದೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ತೇರದಾಳದಲ್ಲೂ ಬೃಹತ್‌ ಪ್ರತಿಭಟನೆ

ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ಜೈನ್ ಸಮುದಾಯದಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಗಿದೆ. ನೇಮಿನಾಥ ಜಿನಾಲಯದಿಂದ ಕೈಗೆ ಕಪ್ಪು ಪಟ್ಟಿ ಧರಿಸಿ, ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ತಹಸೀಲ್ದಾರ್ ಕಚೇರಿ,‌ ಚಾವಡಿ ವೃತ್ತ, ಜವಳಿ ಬಜಾರ್, ಹಳಪೇಟ ಗಲ್ಲಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗಿದ್ದು, ಕೊಲೆಗಡುಗರಿಗೆ ಕಠಿಣ ಶಿಕ್ಷೆ ನೀಡುವಂತೆ ವಿಶೇಷ ತಹಸೀಲ್ದಾರ್ ಶ್ರೀಕಾಂತ್ ಮಾಯನ್ನ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

Jain community protest in Bagalakote

ವಿಜಯಪುರದಲ್ಲೂ ಆಕ್ರೋಶ

ವಿಜಯಪುರ: ಜೈನಮುನಿ ಹತ್ಯೆ ಖಂಡಿಸಿ ಜೈನ ಸಮುದಾಯದ ನೂರಾರು ಮುಖಂಡರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಹತ್ಯೆಯ ಹಿಂದಿನ ಸತ್ಯಾಸತ್ಯತೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ದಾವಣಗೆರೆಯಲ್ಲಿ ಜೈನ ಸಮುದಾಯದಿಂದ ಪ್ರತಿಭಟನೆ

ದಾವಣಗೆರೆ: ದಾವಣಗೆರೆಯಲ್ಲಿ ಜೈನ ಸಮುದಾಯದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗಿದೆ. ನೂರಾರು ಜೈನ ಸಮುದಾಯದವರು ಭಾಗಿಯಾಗಿದ್ದು, ಕೊಲೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜೈನ ಸಮುದಾಯ ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದೆ‌. ರಾಜ್ಯ ಸರ್ಕಾರ ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ. ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕೂಡಲೇ ಜೈನ ಮುನಿಗಳಿಗೆ ರಕ್ಷಣೆ ನೀಡುವಂತೆ ಒತ್ತಾಯ ಮಾಡಲಾಗಿದೆ. ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಧಾರವಾಡದಲ್ಲೂ ಮೌನ ಸಿಟ್ಟು ಪ್ರದರ್ಶನ

ಧಾರವಾಡ: ಜಿಲ್ಲಾಧಿಕಾರಿ ಕಚೇರಿ ಎದುರು ಜೈನ ಸಮುದಾಯದ ನೂರಾರು ಮುಖಂಡರು ಮೌನ ಪ್ರತಿಭಟನೆಯನ್ನು ನಡೆಸಿದ್ದಾರೆ. ಕಲಾಭವನದಿಂದ ಮೌನ ಪ್ರತಿಭಟನಾ ರ‍್ಯಾಲಿ ನಡೆಸಲಾಗಿದ್ದು, ಹತ್ಯೆಯ ಹಿಂದಿನ ಸತ್ಯಾಸತ್ಯತೆ ತನಿಖೆ ಆಗಬೇಕು. ಹತ್ಯೆಯ ಹಿಂದಿರುವ ಎಲ್ಲರನ್ನೂ ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.

ಗದಗದಲ್ಲಿಯೂ ಆಕ್ರೋಶ

ಗದಗ: ಲಕ್ಷ್ಮೇಶ್ವರ ತಾಲೂಕಿನಲ್ಲಿ ದಿಗಂಬರ ಜೈನ ಸಮಾಜದವರಿಂದ ಪ್ರತಿಭಟನೆ ನಡೆಸಲಾಗಿದ್ದು, ಜೈನಮುನಿಗಳನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಲಾಗಿದೆ. ಪಟ್ಟಣದ ಶಂಕ ಬಸದಿಯಿಂದ ವಿದ್ಯಾರಣ್ಯ ಸರ್ಕಲ್ ಮಾರ್ಗವಾಗಿ ತಹಸೀಲ್ದಾರರ ಕಚೇರಿವರೆಗೂ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ.

ಇದನ್ನೂ ಓದಿ: Jain Muni Murder: ಪೊಲೀಸರು ಒತ್ತಡದಲ್ಲಿದ್ದಾರೆ; ಜೈನ ಮುನಿ ಹತ್ಯೆ ತನಿಖೆ ಸಿಬಿಐಗೆ ಕೊಡಿ: ಬಿಜೆಪಿ ಆಗ್ರಹ

ಹಾಸನದಲ್ಲೂ ಪ್ರತಿಭಟನೆ

ಹಾಸನ: ಇಲ್ಲಿನ ಜೈನ ಬಸದಿ ಬಳಿಯಿಂದ ಜೈನ ಸಮುದಾಯದವರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ‌ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಜೈನ ಮುನಿಗಳ ಕೊಲೆ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಪ್ರಕರಣದ ಹಿಂದೆ ಯಾರೇ ಇದ್ದರೂ ಬಂಧಿಸಬೇಕು. ಜೈನಮುನಿಗಳಿಗೆ ಇನ್ನು ಮುಂದೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಹಾಸನ ಜಿಲ್ಲಾಧಿಕಾರಿ ಡಾ.ಬಿ.ಆರ್ ಪೂರ್ಣಿಮಗೆ ಮನವಿ ಸಲ್ಲಿಸಲಾಗಿದೆ

Exit mobile version