ಬೆಂಗಳೂರು: ಇಷ್ಟು ದಿನ ಸೈಲೆಂಟ್ ಆಗಿದ್ದ ಕೋವಿಡ್ (Covid 19) ಇದೀಗ ವೈಲೆಂಟ್ ಆಗುತ್ತಿದೆ. ಕೋವಿಡ್ ರೂಪಾಂತರಿ ವೈರಸ್ (COVID Subvariant JN.1) ಜನರಲ್ಲಿ ಭೀತಿ ಹೆಚ್ಚಿಸಿದೆ. ಸದ್ಯ ಮಕ್ಕಳು ಸ್ವಲ್ಪ ಕೆಮ್ಮಿದ್ದರೂ ಶಾಲೆಗೆ ಕಳಿಸಬೇಡಿ, ಬದಲಿಗೆ ಮನೆಯಲ್ಲೇ ಜೋಪಾನ ಮಾಡಿ ಎಂದು ಕ್ಯಾಮ್ಸ್ (ಖಾಸಗಿ ಶಾಲೆಗಳ ಒಕ್ಕೂಟ) ಮನವಿ ಮಾಡಿದೆ.
ಕೋವಿಡ್ ಸೋಂಕು ಮತ್ತೆ ಆವರಿಸುತ್ತಿದ್ದು, ಜನರಲ್ಲಿ ಭೀತಿ ಹೆಚ್ಚಿಸುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಸುಲಭವಾಗಿ ಸೋಂಕು ತಗುಲುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳು ಜಾಗೃತರಾಗಿ, ಹುಷಾರಾಗಿರಬೇಕೆಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮನವಿ ಮಾಡಿದ್ದಾರೆ.
ರಾಜ್ಯದಲ್ಲೂ ಕೊರೊನಾ ಹೊಸ ವೈರಸ್ ಪತ್ತೆಯಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಜ್ವರ, ನೆಗಡಿ ಸೇರಿ ಇತರೆ ಯಾವುದೇ ಅನಾರೋಗ್ಯ ಸಮಸ್ಯೆ ಇದ್ದರೂ ಶಾಲೆಗೆ ಕಳಿಸಬೇಡಿ. ಮೊದಲಿನ ಎಸ್ಓಪಿಗಳನ್ನು ಪಾಲಿಸಿ. ಇದೀಗ ಸರಣಿ ರಜೆಗಳು ಬರಲಿವೆ. ಕೆಲವೊಂದು ಶಾಲೆಗಳು ಕ್ರಿಸ್ಮಸ್ ರಜೆಗಳನ್ನು ನೀಡಿದ್ದಾರೆ. ರಜೆ ಇರುವ ಕಾರಣಕ್ಕೆ ಮಕ್ಕಳು, ಪೋಷಕರು ಬೇರೆ ರಾಜ್ಯಗಳಿಗೆ, ಬೇರೆ ದೇಶಗಳಿಗೆ ಹೋಗಿ ಬರುತ್ತಿದ್ದಾರೆ. ಶಾಲೆಗೆ ಬರುವ ಇಂತಹ ಮಕ್ಕಳನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದ್ದಾರೆ.
ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಕೋವಿಡ್ ಸಂಬಂಧ ಸಲಹಾ- ಸೂಚನೆಗಳನ್ನು ಎಲ್ಲ ಖಾಸಗಿ ಶಾಲೆಗಳಿಗೂ ರವಾನೆ ಮಾಡಲಾಗಿದೆ. ಶಾಲೆಗೆ ಬರುವ ಮಕ್ಕಳಿಗೆ ತಾಪಮಾನ ತಪಾಸಣೆ ಮಾಡುವುದು, ಬೆಳಗ್ಗೆ-ಸಂಜೆ ಎರಡು ಬಾರಿಯೂ ಪೂರ್ತಿ ಶಾಲೆಯನ್ನು ಸ್ಯಾನಿಟೈಸ್ ಮಾಡುವಂತೆ ಕ್ಯಾಮ್ಸ್ ಸದಸ್ಯತ್ವದ ಶಾಲೆಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: COVID Subvariant JN1: ರಾಜ್ಯದಲ್ಲಿ ಕೋವಿಡ್ನಿಂದ ಇಬ್ಬರ ಸಾವು
ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಕೋವಿಡ್ ಸಭೆ; ಮತ್ತೆ ಮಾಸ್ಕ್ ಕಡ್ಡಾಯ?
ಬೆಂಗಳೂರು: ಕೇರಳ ಸೇರಿದಂತೆ ದೇಶಾದ್ಯಂತ ಕೋವಿಡ್ (covid 19, corona virus) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಸಿಎಂ ಸಿದ್ದರಾಮಯ್ಯ (cm siddaramaiah) ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಈ ಕುರಿತು ಚರ್ಚಿಸಲು ಮಹತ್ವದ ಸಭೆ ಕರೆಯಲಾಗಿದೆ.
ತಾಂತ್ರಿಕ ಸಲಹಾ ಸಮಿತಿ ಹಾಗೂ ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಲಿದ್ದು, ಕೊರೋನಾ ರೂಪಾಂತರಿ JN 1 (COVID Subvariant JN.1) ತಳಿ ತಡೆಗಟ್ಟುವ ಸಂಬಂಧ ಮಹತ್ವದ ಚರ್ಚೆ ನಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದನ್ನು ಈಗಿನಿಂದಲೇ ಕಡ್ಡಾಯ ಮಾಡುವಿಕೆಯ ಬಗ್ಗೆ ತಜ್ಞರು ಒಲವು ತೋರಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರ ಹೊರತಾಗಿ ಮುಂದೆ ರಾಜ್ಯ ಸರ್ಕಾರ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳಬೇಕು ಎಂಬ ಚರ್ಚೆಯನ್ನು ಸಿಎಂ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ನಡೆಸಿದ್ದಾರೆ. ಇಂದಿನ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, TAC ಸಮಿತಿ ಸದಸ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಪಕ್ಕದ ಕೇರಳ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಲ್ಲಿ ಟೆಸ್ಟ್ ಹೆಚ್ಚಳಕ್ಕೆ ಸೂಚನೆ ನೀಡಲಾಗಿದೆ. ಇಂದು ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಕೆಲ ಮಹತ್ವದ ವಿಚಾರ ಚರ್ಚೆ ಆಗಲಿದೆ.
1) ನೆರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಮ್ಮ ರಾಜ್ಯದ ಗಡಿ ಜಿಲ್ಲೆಗಳ ಬಗ್ಗೆ ಚರ್ಚೆ.
2) ಸೋಂಕು ಹೆಚ್ಚಾದಲ್ಲಿ ಆಸ್ಪತ್ರೆಗಳ ಬೇಡಿಕೆ ಹೆಚ್ಚಾಗಲಿದೆ. ಇದಕ್ಕೆ ಬೇಕಾದ ಎಲ್ಲಾ ಔಷಧ ಉಪಕರಣಗಳ ಖರೀದಿ ಸಂಬಂಧ ಚರ್ಚೆ.
3) ಈ ಹಂತದಲ್ಲಿ ತುರ್ತಾಗಿ ಏನೆಲ್ಲ ಔಷಧ ಉಪಕರಣಗಳ ಖರೀದಿ ಮಾಡಬೇಕು, ಅದಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಬಗ್ಗೆ ಚರ್ಚೆ.
4) ICU ಬೆಡ್, ಆಕ್ಸಿಜನ್ ಬೆಡ್ ವ್ಯವಸ್ಥೆ, ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಹೇಗಿದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವೆಲ್ಲ ಸೌಲಭ್ಯಗಳು ಸದ್ಯಕ್ಕೆ ಸಿಗಲಿದೆ?
5) ತುರ್ತಾಗಿ ಈಗ ಸರ್ಕಾರಿ ಆಸ್ಪತ್ರೆಗಳಿಗೆ ಏನೆಲ್ಲಾ ಸೌಲಭ್ಯಗಳು ಬೇಕು ಎಂದು ಮಾಹಿತಿ ಪಡೆಯಲಿರುವ ಸಿಎಂ.
6) ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ RTPCRಗೆ ದರ ನಿಗದಿ ಬಗ್ಗೆಯೂ ಚರ್ಚೆ (ಈ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತವೆ ಎಂಬ ದೂರುಗಳು ಬರದಂತೆ ಇಂದಿನ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ)
7) ಕೋವಿಡ್ ಪಾಸಿಟಿವ್ ಬಂದವರಿಗೆ ಏನೆಲ್ಲ ಚಿಕಿತ್ಸಾ ಕ್ರಮಗಳನ್ನ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ.
8) ಕೇಂದ್ರ ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ