ಮೈಸೂರು: ನಮ್ಮಲ್ಲಿ ಜಾತಿ ವ್ಯವಸ್ಥೆ ಇನ್ನೂ ಹಾಗೆಯೇ ಇದೆ. ಆರ್‌ಎಸ್‌ಎಸ್‌ನವರು ಬದಲಾವಣೆ ಬೇಡ ಎಂದು ಹೇಳುವವರು. ಅವರಿಗೆ ದೌರ್ಜನ್ಯ ಮಾಡಲು, ಶೋಷಣೆ ಮಾಡಲು ಅಸಮಾನತೆ ಇರಬೇಕು. ಮುಸ್ಲಿಂರನ್ನು ಬೆದರುಗೊಂಬೆಯಾಗಿಟ್ಟುಕೊಂಡು ದೇಶ ಒಡೆಯುವ ಕೆಲಸ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳ್ಳರು ಸುಳ್ಳು ಹೇಳಿಬಿಡುತ್ತಾರೆ. ನಾವು ದೇಶಭಕ್ತರು ಆರ್‌ಎಸ್‌ಎಸ್ ದೇಶಭಕ್ತರನ್ನು ಹುಟ್ಟುಹಾಕುವ ಸಂಸ್ಥೆ ಎಂದು ಹೇಳಿಕೊಳ್ಳುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ-ಬಲಿದಾನ ಮಾಡಿದವರಲ್ಲಿ ಒಬ್ಬ ಆರ್‌ಎಸ್‌ಎಸ್‌ನವರು ಇದ್ದಾರಾ? ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.
ವಾಲ್ಮೀಕಿ, ಕನಕದಾಸರ ಪ್ರತಿಮೆ ಮಾಡಿದ್ದು ನಾವು. ಆದರೆ, ಅದರ ಲಾಭ ಮಾಡಿಕೊಳ್ಳುವವರು ಬೇರೆ. ನಮ್ಮ ದೇಶದ ಜಾತಿ ವ್ಯವಸ್ಥೆ ನಿಂತ ನೀರಾಗಿದೆ. ಚಲನೆ ಇಲ್ಲದ ಕಡೆ ಬದಲಾವಣೆ ಸಾಧ್ಯವಿಲ್ಲ. ನಾನು ಬಾಲ್ಯದಲ್ಲಿ ಬಾವಿಯಿಂದ ನೀರು ತಂದು ದನಕರುಗಳಿಗೆ ನೀರು ಕುಡಿಸುವ ಕೆಲಸ ಮಾಡುತ್ತಿದ್ದೆ. ಬಾವಿಯಲ್ಲಿ ಕಸ ತುಂಬಿರುತಿತ್ತು. ಅದನ್ನು ತರಿಸಿ ನೀರು ತರುತ್ತಿದ್ದೆ. ಅಂಥ ಸ್ಥಿತಿ ಇತ್ತು ಎಂದು ಸಿದ್ದರಾಮಯ್ಯ ವಿವರಿಸಿದರು.
ಕುರುಬರು ಅಂತ ಹೇಳಿಕೊಳ್ಳಲು ಈ ಹಿಂದೆ ನಾಚಿಕೆ ಪಡುತ್ತಿದ್ದರು. ಕಾಲೇಜುಗಳಲ್ಲಿ ಕುರುಬರು ಅಂತ ಹೇಳಲು ಹಿಂಜರಿಕೆ ಇತ್ತು. ಹೀಗಾಗಿ ಗೌಡರು ಅಂತ ಹೇಳಿಕೊಳ್ಳುತ್ತಿದ್ದರು. ನನ್ನ ಸಹೋದರರೆಲ್ಲರ ಹೆಸರಿನಲ್ಲಿ ಗೌಡ ಅಂತ ಇದೆ. ನಮ್ಮ ಊರಿನವರು ಎಲ್ಲರೂ ಗೌಡರು ಅಂತ ಬರೆದುಕೊಳ್ಳುತ್ತಿದ್ದರು. ನನಗೆ ಮಾತ್ರ ನಮ್ಮ ಮೇಷ್ಟ್ರು ಸಿದ್ದರಾಮಯ್ಯ ಅಂತ ಬರೆದುಕೊಂಡರು. ಕಾಳಿದಾಸ ವಿದ್ಯಾರ್ಥಿ ಬಳಗ ಅಂತ ನಾನು ವಿಶ್ವನಾಥ್ ಸೇರಿ ಮಾಡಿದ್ದೆವು. ನಾನು ಅಧ್ಯಕ್ಷ, ಅವನು ಪ್ರಧಾನ ಕಾರ್ಯದರ್ಶಿ. ಇಡೀ ಮೈಸೂರು ಕಾಲೇಜುಗಳನ್ನು ಸುತ್ತಿದ್ದೆವು. ಕೆಲವರು ಜಾತಿ ಹೆಸರು ಹೇಳಿಕೊಳ್ಳಲು ನಾಚಿಕೊಳ್ಳುತ್ತಿದ್ದರು. ಹೇಗೋ ಎಲ್ಲರನ್ನೂ ಹುಡುಕಿ ಸೇರಿಸಿ ಸಂಘವನ್ನು ಉದ್ಘಾಟನೆ ಮಾಡಿದ್ದೆವು. ಆ ಮೂಲಕ ಎಲ್ಲ ಕಡೆ ಸಮುದಾಯದ ವಿದ್ಯಾರ್ಥಿಗಳ ಸಂಘಟನೆ ಮಾಡಿದ್ದೆವು. ಆಮೇಲೆ ಎಲ್ಲರಿಗೂ ಕುರುಬ ಅಂತ ಹೇಳಲು ಧೈರ್ಯ ಬಂತು ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.
ಇದನ್ನೂ ಓದಿ | CM Bommai | ಕೇಂದ್ರ ಜಲಶಕ್ತಿ ಸಚಿವರ ಜತೆ ಸಿಎಂ ಬೊಮ್ಮಾಯಿ ಚರ್ಚೆ: ರಾಜ್ಯದ ಯೋಜನೆಗಳಿಗೆ ಶೀಘ್ರ ಅನುಮತಿ ಕೋರಿಕೆ