ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಆಗುತ್ತಾರೆ ಎಂಬುವುದು ನಿಮ್ಮ ಕೈಲಿದೆ. ೨೦23ಕ್ಕೆ ವಿಧಾನಸಭೆ ಚುನಾವಣೆ ಬರುತ್ತದೆ, ದಯಮಾಡಿ ಆಶೀರ್ವಾದ ಮಾಡಿ ಎಂದು ನೇರವಾಗಿ ಮತ್ತೊಮ್ಮೆ ಸಿಎಂ ಆಗುವ ಆಸೆಯನ್ನು ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೊರಹಾಕಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕ ಜಯಂತಿಯಲ್ಲಿ (Kanaka Jayanti) ಅವರು ಮಾತನಾಡಿದ್ದಾರೆ.
ಕನಕದಾಸರು 500 ವರ್ಷಗಳ ಹಿಂದೆ ಬದುಕಿದ್ದ ಮಹಾನ್ ವ್ಯಕ್ತಿ. ಹಾವೇರಿ ಜಿಲ್ಲೆ ಬಾಡ ಗ್ರಾಮದಲ್ಲಿ ಹುಟ್ಟಿದ ಅವರ ಮೂಲ ಹೆಸರು ತಿಮ್ಮಪ್ಪ ನಾಯಕ. ಪಾಳೇಗಾರರ ವಂಶದಲ್ಲಿ ಹುಟ್ಟಿದ ಅವರು ನಂತರ ಕನಕದಾಸರಾದರು. ಕನಕ ಗುರು ದಾರ್ಶನಿಕರಾಗಿದ್ದು, ಅವರ ಬದುಕನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟರು ಎಂದು ತಿಳಿಸಿದರು.
ಕುಲಕುಲ ಎಂದು ಹೊಡೆದಾಡ ಬೇಡಿ ಎಂದು ಕನಕ ಅಂದೇ ಹೇಳಿದ್ದರು. ಆಸ್ಪತ್ರೆಯಲ್ಲಿ ಮಲಗಿದ್ದಾಗ ನಮ್ಮ ಕುರುಬರ ರಕ್ತವನ್ನೇ ಕೇಳುತ್ತೀವಾ? ಯಾರ ರಕ್ತ ಸಿಕ್ಕರೂ ಬದುಕುತ್ತೇವೆ. ಆದರೆ ಜನರು ಜಾತಿಗಳನ್ನು ಬಿಟ್ಟೇ ಇಲ್ಲ. ಸಮಾಜದ ಏಳಿಗೆಗೆ ಕೀರ್ತನೆಗಳ ಜಾಗೃತಿ ಮೂಡಿಸಿದ್ದಕ್ಕಾಗಿ ಕನಕ ಜಯಂತಿ ಮಾಡುತ್ತೇವೆ. ಹಾಗೆಯೇ ಸಂಗೊಳ್ಳಿ ರಾಯಣ್ಣ ಕೂಡ ಮಹಾನ್ ದೇಶಭಕ್ತ. ದೇಶಕೋಸ್ಕರ ಪ್ರಾಣವನ್ನೇ ಕೊಟ್ಟಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Kagodu Timmappa | ಡಿಕೆಶಿ ಅವರನ್ನು ಹಿಮ್ಮೆಟಿಸಲು ಬಿಜೆಪಿಯಿಂದ ತನಿಖಾ ಸಂಸ್ಥೆಯ ದುರ್ಬಳಕೆ: ಕಾಗೋಡು ತಿಮ್ಮಪ್ಪ ಆಕ್ರೋಶ
ಬಸವಣ್ಣ ಮಾಡಿದ ಅನುಭವ ಮಂಟಪವನ್ನೇ ಈಗ ಪಾರ್ಲಿಮೆಂಟ್, ಅಸೆಂಬ್ಲಿ ಎಂದು ನಾವು ಕರೆಯುತ್ತೇವೆ. ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು ಎಂದ ಅವರು, ಬಿಜೆಪಿಯವರು ಗೋ ರಕ್ಷಣೆ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಯಾವತ್ತಾದರೂ ದನ ಕಾಯ್ದಿದ್ದಾರಾ? ಜಾನುವಾರುಗಳಿಗೆ ರೋಗ ಬಂದಿದೆ, ಅದರ ನಿಯಂತ್ರಣಕ್ಕೆ ಇವರು ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಹಾಲು ಉತ್ಪಾದನೆ ಕ್ಷೀಣಿಸಿದೆ. ಇಷ್ಟಾದರೂ ಇವರು ಇನ್ನೂ ಅಧಿಕಾರದಲ್ಲಿರಬೇಕಾ? ಇವರನ್ನು ಕಿತ್ತೆಸೆಯಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಬಡವರು ಹಸಿದು ಮಲಗಬಾರದು ಎಂದು ಕಾಂಗ್ರೆಸ್ ಸರ್ಕಾರದಲ್ಲಿ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಈಗ ಹೊಟ್ಟೆ ಉರಿ ಅವರಿಗೆ, ೭ ಕೆಜಿಯಿಂದ 5ಕೆಜಿಗೆ ಮಾಡಿದ್ದಾರೆ. ಅವರ ಅಪ್ಪನ ಮನೆಯಿಂದ ಕೊಡುತ್ತಾರಾ ನಿಮಗೆ, ಅದು ನಿಮ್ಮ ಹಣ ಎಂದ ಅವರು, ಶೂ ಭಾಗ್ಯ ಇಲ್ಲ, ವಿದ್ಯಾಸಿರಿ ಇಲ್ಲ, ಶಾದಿ ಭಾಗ್ಯ ಇಲ್ಲ. 5 ವರ್ಷದಲ್ಲಿ ಒಂದೇ ಒಂದು ಮನೆ ಕಟ್ಟಿಸಿಲ್ಲ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿಯವರನ್ನು ಮನೆಗೆ ಕಳುಹಿಸಿ ಎಂದು ಕರೆ ನೀಡಿದರು.
ಕನಕ ಗುರು ಪೀಠವನ್ನು 1992ರಲ್ಲಿ ಸ್ಥಾಪನೆ ಮಾಡಿಸಿದೆ. ಈಗ 4 ಸ್ವಾಮೀಜಿಗಳಾಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ 500 ಜಯಂತಿಗಳನ್ನು ಸರ್ಕಾರದಿಂದ ಆಚರಿಸಲಾಯಿತು. 262 ಕೋಟಿ ರೂಪಾಯಿ ಕೊಟ್ಟು ಸಂಗೊಳ್ಳಿ ರಾಯಣ್ಣನ ಮ್ಯೂಸಿಯಂ ಮಾಡಿದೆ ಎಂದ ಅವರು, ಮಂತ್ರಿ ಸ್ಥಾನ ತೆಗೆದುಕೊಳ್ಳುವುದಕ್ಕೆ ರಾಯಣ್ಣ ಬ್ರಿಗೇಡ್ ಮಾಡಿದರು ಎಂದು ಕೆ.ಎಸ್.ಈಶ್ವರಪ್ಪ ಅವರನ್ನು ಟೀಕಿಸುತ್ತಾ, ಕನಕ ಗುರುಪೀಠಕ್ಕಾಗಿ ಶಿವಮೊಗ್ಗಕ್ಕೆ ಹೋಗಿದ್ದೆ. ಅಲ್ಲಿ ಈಶ್ವರಪ್ಪನನ್ನು ಕರೆದಿದ್ದೆ. 3 ಲಕ್ಷ ಹಣ ಕೊಡಿಸಲು ಹೇಳಿದ್ದೆ. ಆದರೆ ಈಶ್ವರಪ್ಪ ಪತ್ತೇನೇ ಇಲ್ಲ. ಕನಕ ಗುರು ಪೀಠ ಸಭೆಗೂ ಬರಲಿಲ್ಲ ಗಿರಾಕಿ ಎಂದು ಕಿಡಿಕಾರಿದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಬುದ್ಧ, ಬಸವ ತತ್ವಗಳನ್ನು 500 ವರ್ಷಗಳ ಹಿಂದೆಯೇ ಕನಕದಾಸರು ಸಮಾಜಕ್ಕೆ ತಿಳಿಸಿದ್ದರು. ಕೊಟ್ಟ ಮಾತಿನಂತೆ ನಡೆದುಕೊಂಡ ಏಕೈಕ ವ್ಯಕ್ತಿ ಸಿದ್ದರಾಮಯ್ಯ. ಅವರಂತಹ ಜನಾನುರಾಗಿ ನಾಯಕರನ್ನು ಮತ್ತೆ ನಾನು ಯಾರನ್ನೂ ನೋಡಿಲ್ಲ. ಕೋವಿಡ್ ಸಮಯದಲ್ಲಿ ಅನ್ನಭಾಗ್ಯ ಇರದೇ ಇದ್ದಿದ್ದರೆ ಹೆಚ್ಚು ಸಾವು ನೋವು ಆಗುತ್ತಿತ್ತು. ಹೀಗಾಗಿ ಸಿದ್ದರಾಮಯ್ಯ ಕೇವಲ ಕುರುಬರ ನಾಯಕ ಅಲ್ಲ, ರಾಜ್ಯದ ನಾಯಕ ಎಂದು ಹೇಳಿದರು.
ಇದನ್ನೂ ಓದಿ | Congress Jatha | ಕಾಂಗ್ರೆಸ್‌ನಿಂದ ಬದಲಾವಣೆಗಾಗಿ ಯುವ ಆಕ್ರೋಶದ ಹೆಜ್ಜೆ ಜಾಥಾ