Site icon Vistara News

Kannada and Culture: ಕುವೆಂಪು ಟ್ಯಾಬ್ಲೊ, ಬೆಟಗೇರಿ ಸ್ಮಾರಕ…: 24 ಟ್ರಸ್ಟ್‌ಗಳಿಂದ ಸಚಿವರಿಗೆ ಸಲಹೆಗಳ ಮಹಾಪೂರ

Kannada aand culture meeting

#image_title

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಟ್ರಸ್ಟ್‌ಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ಬಲ ತುಂಬಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕನ್ನಡ ಭವನದ ʼಅಂತರಂಗʼ ಸಭಾಂಗಣದಲ್ಲಿ ವಿವಿಧ ಟ್ರಸ್ಟ್ ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳೊಂದಿಗೆ ನಡೆಸಿದ ಸಮಾಲೋಚನಾ ಸಭೆಯನ್ನು ಸಚಿವರು ಭರವಸೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ 24 ಟ್ರಸ್ಟ್ ಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರತಿವರ್ಷ ಈ ಟ್ರಸ್ಟ್ ಗಳ ಕಾರ್ಯ ಚಟುವಟಿಕೆಗಾಗಿ ಅನುದಾನ ಒದಗಿಸಲಾಗುತ್ತಿದೆ. ಈ ಟ್ರಸ್ಟ್ ಗಳು ನಡೆಸುವ ಕಾರ್ಯ ಚಟುವಟಿಕೆಗಳು ಮತ್ತು ಅವುಗಳ ಕುಂದು ಕೊರತೆ ಹಾಗೂ ಅವುಗಳ ಪರಿಹಾರಗಳನ್ನು ಕುರಿತಂತೆ ಈ ಸಮಾಲೋಚನಾ ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಯಿತು.

ಪ್ರತಿಯೊಂದು ಟ್ರಸ್ಟ್ ಗಳ ಬಗ್ಗೆ ಮಾಹಿತಿ ಪಡೆದ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಪ್ರವಾಸ ಮಾಡುವ ವೇಳೆ ಆಯಾ ಜಿಲ್ಲೆಗಳಲ್ಲಿರುವ ಟ್ರಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಟ್ರಸ್ಟ್‌ಗಳ ಸದಸ್ಯರು ಸರ್ಕಾರಕ್ಕೆ ಅನೇಕ ಸಲಹೆಗಳನ್ನು ನೀಡಿದರು.

  1. ಬೆಟಗೇರಿ ಕೃಷ್ಣಶರ್ಮರ ಮನೆಯನ್ನು ಸ್ಮಾರಕವಾಗಿಸಬೇಕು.
  2. ಗುಬ್ಬಿ ವೀರಣ್ಣ ರಂಗಮಂದಿರಕ್ಕೆ ಅನುದಾನ ಹೆಚ್ಚಿಸಬೇಕು.
  3. ಹಾಲಬಾವಿ ಟ್ರಸ್ಟ್‌ನವರು ಹಾಲಭಾವಿ ಅವರ ಹೆಸರಿನಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯನ್ನು ಸಚಿವರ ಮುಂದಿಟ್ಟರು.
  4. ನಿಜಲಿಂಗಪ್ಪ ಟ್ರಸ್ಟ್‌ಗೆ ಹೆಚ್ಚಿನ ಅನುದಾನ ನೀಡಬೇಕು
  5. ಕುವೆಂಪು ಅವರ ಮನೆಯನ್ನು ರಾಷ್ಟ್ರದ ಅತ್ಯುತ್ತಮ ಕವಿಮನೆಯಯಾಗಿದ್ದು, ಇಡೀ ರಾಷ್ಟ್ರದ ಗಮನ ಸೆಳೆಯುವಂತೆ ಮಾಡಲು ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಸಂದರ್ಭಗಳಲ್ಲಿ ಮತ್ತು ದಸರಾ ಪ್ರದರ್ಶನಗಳಲ್ಲಿ ಕುವೆಂಪು ಅವರ ಮನೆಯ ಟ್ಯಾಬ್ಲೋ ಮಾಡಿ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು
  6. ಲಾಲ್ ಬಾಗ್ ನಲ್ಲಿ ಪ್ರತಿವರ್ಷ ಆಯೋಜಿಸುವ ಪುಷ್ಪ ಪ್ರದರ್ಶನದಲ್ಲಿ ಕುವೆಂಪು ಅವರ ಮನೆಯ ಮಾದರಿಯನ್ನು ಮಾಡಿದರೆ ಅದು ಅಸಂಖ್ಯ ಜನರ ಗಮನ ಸೆಳೆಯುತ್ತದೆ
  7. ಬೇಂದ್ರೆ ಅವರ ಜನ್ಮದಿನವನ್ನು ವಿಶ್ವಕವಿ ದಿನಾಚರಣೆ ಎಂದು ಆಚರಿಸಬೇಕು

ಎಲ್ಲ ಟ್ರಸ್ಟ್ ಗಳ ಮನವಿಗಳನ್ನು ಸಕಾರಾತ್ಮಕ ದೃಷ್ಟಿಯಿಂದಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವರು ತಿಳಿಸಿದರು. ಟ್ರಸ್ಟ್ ಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಅನುದಾನ ಹೆಚ್ಚಿಸಲು ತಾವು ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಅನುದಾನವನ್ನು ಕೊಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ತಂಗಡಗಿ ಭರವಸೆ ನೀಡಿದರು.

ಇದನ್ನೂ ಓದಿ: Koppala News: ದಸರಾ ಮಾತ್ರವಲ್ಲ, ಕನ್ನಡ ತಾಯಿ ಭುವನೇಶ್ವರಿ ಮೂಲ ಹಂಪಿ: ಶಾಸಕ ಗಾಲಿ ಜನಾರ್ದನ ರೆಡ್ಡಿ

Exit mobile version