ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ 21 ಟ್ರಸ್ಟ್‌ಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿದ್ದ ಆದೇಶವನ್ನು ಒಂದು ದಿನದೊಳಗೇ ರಾಜ್ಯ ಸರ್ಕಾರ ರದ್ದುಪಡಿಸಿದೆ.
21 ಟ್ರಸ್ಟ್‌ಗಳಿಗೆ ತಲಾ ಒಬ್ಬರು ಅಧ್ಯಕ್ಷರು, ಒಟ್ಟು 147 ಸದಸ್ಯರು, ತಲಾ ಒಬ್ಬರು ಸದಸ್ಯ ಕಾರ್ಯದರ್ಶಿಯನ್ನು ನೇಮಕ ಮಾಡಿ ಬುಧವಾರ ಆದೇಶ ಹೊರಡಿಸಲಾಗಿತ್ತು. ಪ್ರಮುಖವಾಗಿ ಇದರಲ್ಲಿ, ಪೂರ್ಣಚಂದ್ರ ತೇಜಸ್ವಿ ಟ್ರಸ್ಟ್‌ಗೆ, ದಿವಂಗತ ರಾಜೇಶ್ವರಿ ಅವರನ್ನು ನೇಮಕ ಮಾಡಿದ್ದು ಸರ್ಕಾರಕ್ಕೆ ಇರಿಸುಮುರಿಸು ಉಂಟುಮಾಡಿತ್ತು.
ಇದನ್ನೂ ಓದಿ | ಕನ್ನಡ ಸಂಸ್ಕೃತಿ ಇಲಾಖೆ ಟ್ರಸ್ಟ್‌ಗಳಿಗೆ ನೇಮಕ: ತಿರಸ್ಕರಿಸಿದ ಚಕ್ರವರ್ತಿ ಸೂಲಿಬೆಲೆ
ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿದ್ದನ್ನು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿರಸ್ಕರಿಸಿದ್ದರು. ಅದೇ ರೀತಿ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನರೇಂದ್ರ ರೈ ದೇರ್ಲ ನಿರಾಕರಿಸಿದ್ದರು. ಸದಸ್ಯರಾಗಿ ನೇಮಕವಾಗಿದ್ದ ಅನೇಕರ ಹೆಸರುಗಳನ್ನು ತಪ್ಪಾಗಿ ಬರೆಯಲಾಗಿತ್ತು ಎಂಬುದೂ ಸರ್ಕಾರದ ಅನೇಕ ವಾಟ್ಸ್‌ಆಪ್ ಗುಂಪುಗಳಲ್ಲಿ ಬುಧವಾರವೇ ಚರ್ಚೆಯಾಗಿತ್ತು.
ಇದೆಲ್ಲದರಿಂದ ಸರ್ಕಾರ ಇದೀಗ ಸಂಪೂರ್ಣ ಆದೇಶವನ್ನು ಹಿಂಪಡೆದಿದೆ. ಈ ತಪ್ಪುಗಳನ್ನು ಸರಿಪಡಿಸಿ ಶೀಘ್ರದಲ್ಲೆ ಹೊಸ ಆದೇಶ ಹೊರಡಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಪ್ರತಿಷ್ಠಾನ ನೇಮಕಾತಿಯಲ್ಲಿ ಸರ್ಕಾರ ಎಡವಟ್ಟು, ದಿ.ರಾಜೇಶ್ವರಿ ತೇಜಸ್ವಿ ನೇಮಕ, ಅಧ್ಯಕ್ಷತೆಗೆ ದೇರ್ಲ ನಕಾರ