ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್.ಕೆ. ಭಗವಾನ್ ಅವರು ನಿಧನರಾಗಿದ್ದಾರೆ.
93 ವರ್ಷಗಳ ತುಂಬು ಜೀವನ ನಡೆಸಿದ ಹಿರಿಯ ನಿರ್ದೇಶಕ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಿನ್ನೆ ತಡರಾತ್ರಿ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಡಾ. ರಾಜ್‌ಕುಮಾರ್ ಅವರ ಜತೆಗೆ ಸಾಲುಸಾಲಾಗಿ ಹಿಟ್ ಚಿತ್ರಗಳನ್ನು ಅವರು ಕೊಟ್ಟಿದ್ದಾರೆ.
ಭಗವಾನ್ ಎಂದೇ ಪ್ರಸಿದ್ಧರಾಗಿರುವ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ನಿರ್ದೇಶಕ, ನಿರ್ಮಾಪಕ ಹಾಗೂ ನಟ. ನಿರ್ದೇಶಕ ದೊರೈರಾಜ್ ಜತೆಗೂಡಿ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಇವರು ನಿರ್ಮಿಸಿ ನಿರ್ದೇಶಿಸಿದ್ದಾರೆ. ಇವರ ಜೋಡಿ ದೊರೈ- ಭಗವಾನ್ ಎಂದೇ ಹೆಸರಾಗಿತ್ತು.
1933ರಲ್ಲಿ ಮೈಸೂರಿನಲ್ಲಿ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ ಇವರು ಯುವಕರಾಗಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರೀಗಳಿಗೆ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದ ಇವರು 1966ರಲ್ಲಿ ತೆರೆಕಂಡ `ಸಂಧ್ಯಾರಾಗ’ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದರು. ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರರಾಗಿ ಚಿತ್ರನಿರ್ದೇಶಿಸಲು ಆರಂಭಿಸಿದರು. ಈ ನಿರ್ದೇಶಕ ಜೋಡಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದೆ.
1993ರಲ್ಲಿ ದೊರೈರಾಜ್ ನಿಧನದ ನಂತರ ಚಿತ್ರನಿರ್ದೇಶನಕ್ಕೆ ವಿದಾಯ ಹೇಳಿದರು. ಸುಮಾರು 49 ಚಿತ್ರಗಳನ್ನು ನಿರ್ದೇಶಿಸಿದ ಈ ಜೋಡಿಯ 32 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕನಟರಾಗಿ ನಟಿಸಿದ್ದು ವಿಶೇಷ. ಸಾಮಾಜಿಕ ಕಳಕಳಿ ಹೊಂದಿದ್ದ ಇವರು 24 ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳಿದ ನಂತರ `ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್’ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದು ರಾಜನ್-ನಾಗೇಂದ್ರ ಜೋಡಿ.
ಇವರ ಪ್ರಸಿದ್ಧ ಚಿತ್ರಗಳು:
ಜೇಡರ ಬಲೆ (1968)
ಕಸ್ತೂರಿ ನಿವಾಸ (1971)
ಎರಡು ಕನಸು (1974)
ಬಯಲು ದಾರಿ (1976)
ಆಪರೇಷನ್ ಡೈಮಂಡ್ ರಾಕೆಟ್ (1978)
ಗಿರಿಕನ್ಯೆ (1977)
ಚಂದನದ ಗೊಂಬೆ (1979)
ಮುನಿಯನ ಮಾದರಿ (1981)
ಹೊಸಬೆಳಕು (1982)
ಬೆಂಕಿಯ ಬಲೆ (1982)
ಯಾರಿವನು (1984)
ನೀನು ನಕ್ಕರೆ ಹಾಲು ಸಕ್ಕರೆ (1991)
ಜೀವನ ಚೈತ್ರ (1992)
ಒಡಹುಟ್ಟಿದವರು (1994)