ಬೆಳಗಾವಿ: ನಗರದ ಟಿಳಕವಾಡಿಯಲ್ಲಿರುವ ಗೋಗಟೆ ಕಾಲೇಜಿನಲ್ಲಿ ಬುಧವಾರ (ನ.೩೦) ನಡೆದಿದ್ದ ಕನ್ನಡ ಬಾವುಟ ಗಲಾಟೆ (Kannada Flag) ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸರ್ಕಾರದ ವಿರುದ್ಧ ಗುಡುಗಿದ್ದು, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಿರ್ಣಯ ಕೈಗೊಳ್ಳುವ ಶಕ್ತಿ ಈ ಸರ್ಕಾರಕ್ಕೆ ಇಲ್ಲವೇ ಇಲ್ಲ. ಅವರಿಗೆ ದಮ್ ಇಲ್ಲವೆಂದಾದರೆ ಏನು ಮಾಡೋದು? ದಮ್ ಬಗ್ಗೆ ಮಾತನಾಡುವ ಸರ್ಕಾರಕ್ಕೆ ದಮ್ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ (ಡಿ.೪) ಮಾತನಾಡಿದ ಅವರು, ಬೆಳಗಾವಿ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಹೇಳುವಂತಹ ಶಕ್ತಿ ಈ ಸರ್ಕಾರಕ್ಕೆ ಇಲ್ಲ. ಇದೊಂದೇ ವಿಚಾರವಾಗಿ ಅಲ್ಲದೆ, ಬೇರೆ ಬೇರೆ ವಿಚಾರದಲ್ಲಿಯೂ ನಿರ್ಧಾರವನ್ನು ತೆಗೆದುಕೊಳ್ಳಲು ಈ ಸರ್ಕಾರಕ್ಕೆ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಈಗ ಕಾಲೇಜೊಂದರಲ್ಲಿ ನಡೆದ ಕನ್ನಡ ಬಾವುಟ ಗಲಾಟೆಯನ್ನು ಬೆಳೆಯದಂತೆ ನೋಡಿಕೊಂಡು ಇಲ್ಲಿಗೆ ಮುಗಿಸುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ತಾಕೀತು ಮಾಡಿದರು.
ಇನ್ನು ಕನ್ನಡ ಬಾವುಟ ವಿಷಯವಾಗಿ ಹಲ್ಲೆಗೊಳಗಾದ ವಿದ್ಯಾರ್ಥಿಯು ಪೊಲೀಸರ ಬಳಿ ದೂರು ಕೊಡಲು ಹೋದಾಗ ಡಿಸಿಪಿ ಅವಾಚ್ಯ ಶಬ್ದ ಬಳಸಿ ನಿಂದಿಸಿರುವುದು ಸರಿಯಲ್ಲ. ಪೊಲೀಸರು ಬಳಸಿದ ಭಾಷೆ ಬಗ್ಗೆ ನನ್ನ ಖಂಡನೆ ಇದೆ. ಪೊಲೀಸರು ಸಂಯಮವಾಗಿ ವರ್ತನೆ ಮಾಡಬೇಕು. ಕಠಿಣವಾಗಿ ವರ್ತಿಸಿ, ನಿಮ್ಮ ಮನೆಗೆ ಬೆಂಕಿ ಹಚ್ಚುತ್ತೇನೆ ಅಂದಿದ್ದಾರೆ. ಬೇರೆ ಶಬ್ದಗಳ ಮೂಲಕ ವಿದ್ಯಾರ್ಥಿಗಳನ್ನು ಮನವೊಲಿಸಬೇಕು ಎಂದು ಸತೀಶ್ ಜಾರಕಿಹೊಳಿ ಕಿವಿಮಾತು ಹೇಳಿದರು.
ಇದನ್ನೂ ಓದಿ | Panchamasali Community | ಮುರುಗೇಶ್ ನಿರಾಣಿ ಸಾಹೇಬ್ರು ಸ್ವಲ್ಪ ದಿನದಲ್ಲೇ ಸಿಎಂ ಆಗ್ತಾರೆ: ರಾಮಣ್ಣ ಲಮಾಣಿ
ಬೆಳಗಾವಿಗೆ ಕೆಟ್ಟ ಹೆಸರು ಬಾರದಿರಲಿ
ಬೆಳಗಾವಿ ನಗರ ಬೆಳೆಯುತ್ತಿದ್ದು, ಪದೇ ಪದೆ ಮರಾಠಿ-ಕನ್ನಡ ಎಂದು ಗಲಾಟೆ ಆಗಬಾರದು. ಬೆಳಗಾವಿ ಬೆಳೆಯಲು ಅವಕಾಶ ಕೊಡಬೇಕು. 20 ವರ್ಷಗಳ ಹಿಂದೆ ಹಿಂದು-ಮುಸ್ಲಿಂ ಗಲಭೆ ಆಗಿತ್ತು. ಈಗ ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಬೆಳಗಾವಿಗೆ ಕೆಟ್ಟ ಹೆಸರು ಬರಬಾರದು ಎಂದು ಸತೀಶ್ ಅಭಿಪ್ರಾಯಪಟ್ಟರು.
ಗಡಿ ವಿವಾದ ಸುಮ್ಮನೇ
ಮಹಾರಾಷ್ಟ್ರದ ಜತ್ತ, ಅಕ್ಕಲಕೋಟೆ ತಾಲೂಕಿನ ಜನ ಕರ್ನಾಟಕ ಸೇರಲು ಒಲವು ತೋರುತ್ತಿದ್ದಾರೆ. ಆದರೆ, ಅವರೂ ಇಲ್ಲಿ ಬರಲಾಗದು, ನಾವೂ ಅಲ್ಲಿಗೆ ಹೋಗಲಾಗದು. ಬಹಳಷ್ಟು ಜನ ಕರ್ನಾಟಕಕ್ಕೆ ಸೇರಿಸಿಬಿಡಿ ಎಂದು ಹೇಳುತ್ತಾರೆ. ಸುಮ್ಮನೆ ಚರ್ಚೆಗಷ್ಟೇ ಈ ಹೇಳಿಕೆ ಆಗಿರಲಿದೆಯೇ ವಿನಃ ಹಾಗೆ ಮಾಡಲು ಯಾರಿಗೂ ಅಧಿಕಾರ ಇಲ್ಲ. ಒಮ್ಮೆ ವಿಭಜನೆ ಆಗಿದೆ. ಅದೇ ಅಂತಿಮ ಎಂಬುದು ನನ್ನ ಅನಿಸಿಕೆಯಾಗಿದೆ ಎಂದು ಹೇಳಿದರು.
ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಭೇಟಿ ಮಾಡುತ್ತಿರುವುದು ರಾಜಕೀಯ ಗಿಮಿಕ್ ಅಷ್ಟೇ. ನಿಪ್ಪಾಣಿ ಬಾರ್ಡರ್‌ನಿಂದ ಬಂದು ವಾಪಸ್ ಹೋಗುತ್ತಾರೆ. ಪೊಲೀಸರು ಅವರನ್ನು ಒಳಗೆ ಬಿಡಲ್ಲ, ನಾವು ಇಲ್ಲಿ ತನಕ ಬಂದಿದೀವಿ ಎಂದು ಅವರು ಹೇಳುತ್ತಾರಷ್ಟೇ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ | ಸಿದ್ದರಾಮಯ್ಯ, ಡಿಕೆಶಿ ಸ್ಪರ್ಧೆ ಮಾಡುವುದು ಬೇಡ ಎಂದ ಸಂತೋಷ್ ಲಾಡ್; ಸೇಫ್ ಜಾಗ ಇರಲಿ ಎಂದ ಸತೀಶ್ ಜಾರಕಿಹೊಳಿ