Site icon Vistara News

ರಾಜ್ಯೋತ್ಸವ ಪ್ರಶಸ್ತಿ | 67 ಸಾಧಕರಿಗೆ ಗೌರವ: 60 ವರ್ಷ ವಯೋಮಿತಿ ನಿಯಮ ಬದಲಾವಣೆಗೆ ಸಿಎಂ ಬೊಮ್ಮಾಯಿ ಸೂಚನೆ

rajyothsava prashasti pradana 2022

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪಡೆಯುವವರಿಗೆ ೬೦ ವರ್ಷ ಆಗಿರಬೇಕು ಎಂಬ ಈಗಿನ ನಿಯಮವನ್ನು ಬದಲಾಯಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ನಾಡಿನ ೬೭ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಕೊಟ್ಟಿರುವುದಕ್ಕೆ ಇಡೀ ಕರ್ನಾಟಕ ಸಂಭ್ರಮಿಸುತ್ತಿದೆ. ಒಬ್ಬ ಸಣ್ಣ ವಯಸ್ಸಿನ ಸಾಧಕನಿಗೆ ಈ ಪ್ರಶಸ್ತಿ ಸಂದಿರುವುದು ಎಲ್ಲರಿಗೂ ಖುಷಿ ತಂದಿದೆ. ರಾಜ್ಯೋತ್ಸವ ಪ್ರಶಸ್ತಿ ನೀಡುವ ವಿಚಾರದಲ್ಲಿ 60 ವರ್ಷ ಮೀರಿದವರಿಗೆ ಮಾತ್ರ ಪ್ರಶಸ್ತಿ ಎಂದು ನಿಯಮ ಮಾಡಿರುವುದು ಸರ್ಕಾರದ ತಪ್ಪು ನಡೆ. ಸಣ್ಣ ವಯಸ್ಸಿನಲ್ಲಿಯೇ ಪ್ರಶಸ್ತಿ ಕೊಟ್ರೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಅವಕಾಶ ಸಿಗುತ್ತದೆ.ಮುಂದಿನ ವರ್ಷದ ಇದರ ಬದಲಾವಣೆ ಆಗಲೇಬೇಕು ಎಂದರು. ಮುಂದಿನ ವರ್ಷದಿಂದ ವಯಸ್ಸಿನ ಮಿತಿ ಇಲ್ಲದೆ ನಿಜವಾದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಘೋಷಿಸಿದರು.

ಸಾಧಕರ ಕಥೆಗಳನ್ನು ಒಳಗೊಂಡ ಪುಸ್ತಕ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಾಧನೆ, ಅವರ ಅನುಭವ ಮತ್ತು ಸಂದೇಶಗಳನ್ನ ದಾಖಲಿಸಿ ಒಂದು ಪುಸ್ತಕ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಅವರು ಸಲಹೆ ನೀಡಿದರು.

ಪ್ರಶಸ್ತಿ ಪಡೆದವರ ಸಾಧನೆ, ನಾಡು ಕಟ್ಟುವಲ್ಲಿ ಅವರ ಶ್ರಮವನ್ನು ತಿಳಿದುಕೊಂಡು ದಾಖಲಿಸಬೇಕು. ಅದನ್ನು ಸೇರಿಸಿ ಒಂದು ಕೃತಿ ರಚಿಸಬೇಕು. ಆ ಕೃತಿಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಹಂಚಬೇಕು ಎಂದು ಸಿಎಂ ಅವರು ಸಚಿವ ಸುನಿಲ್‌ ಕುಮಾರ್‌ ಅವರಿಗೆ ಸಲಹೆ ನೀಡಿದರು.…

ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೬೭ ಸಾಧಕರಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಪ್ರಶಸ್ತಿ ಫಲಕ ನೀಡಿ ಗೌರವರಿಸಿದರು. ಪ್ರಶಸ್ತಿಯು ಐದು ಲಕ್ಷ ರೂ. ನಗದನ್ನು ಒಳಗೊಂಡಿದೆ.

ಸಾಧಕರನ್ನು ಗುರುತಿಸಿ ಗೌರವ ಎಂದ ಸಚಿವರು
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ತಾಯಿ ಭುವನೇಶ್ವರಿಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಅವರು, ಕಲಾವಿದರ ಪಿಂಚಣಿಯನ್ನು ೧೫೦೦ರಿಂದ ೨೦೦೦ ರೂ.ಗಳಿಗೆ ಏರಿಸಲಾಗಿದೆ. ೧೨೦೦೦ ಜನರಿಗೆ ನೀಡುತ್ತಿದ್ದ ಪಿಂಚಣಿಯನ್ನು ೧೫೦೦೦ ಮಂದಿಗೆ ಹೆಚ್ಚಿಸಲಾಗಿದೆ ಎಂದರು.

ಈ ಸಾರಿ ಅರ್ಜಿಗಳನ್ನು ಹೆಚ್ಚು ಸ್ವೀಕಾರ ಮಾಡದೆ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಸೇವಾ ಸಿಂಧು ಆ್ಯಪ್‌ನಲ್ಲಿ 9000 ಅರ್ಜಿಗಳು ಬಂದಿದ್ದವು. ಅರ್ಜಿ ಹಾಕಿದವರಿಗಿಂತ, ಸಮಿತಿ ಗುರುತಿಸಿದವರಿಗೆ ಪ್ರಶಸ್ತಿ ನೀಡಲಾಗಿದೆ. ಎಲ್ಲ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯ ಟಿ.ಎ. ಸರವಣ, ಶಾಸಕ ಉದಯ್ ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತ ಸಾಧಕರು ಇವರು

2022 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಇವರು
ಸಂಕೀರ್ಣ ಕ್ಷೇತ್ರ:
ಸುಬ್ಬರಾಮ ಶೆಟ್ಡಿ – ಬೆಂಗಳೂರು, ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ – ಬೆಂಗಳೂರು, ಶ್ರೀಮತಿ ಸೋಲಿಗರ ಮಾದಮ್ಮ – ಚಾಮರಾಜನಗರ
ಸೈನಿಕ ಕ್ಷೇತ್ರ: ಸು‌ಬೇದಾರ್ ಬಿ.ಕೆ ಕುಮಾರಸ್ವಾಮಿ – ಬೆಂಗಳೂರು
ಪತ್ರಿಕೋದ್ಯಮ: ಎಚ್ ಆರ್ ಶ್ರೀಶಾ – ಬೆಂಗಳೂರು, ಜಿ.ಎಂ.ಶಿರಹಟ್ಟಿ ‌- ಗದಗ
ವಿಜ್ಞಾನ ತಂತ್ರಜ್ಞಾನ: ಕೆ.ಶಿವನ್ – ಬೆಂಗಳೂರು, ಡಾ.ಡಿ.ಆರ್.ಬಳೂರಗಿ – ರಾಯಚೂರು
ಕೃಷಿ‌ ಕ್ಷೇತ್ರ: ಗಣೇಶ್ ತಿಮ್ಮಯ್ಯ – ಕೊಡಗು, ಚಂದ್ರಶೇಖರ್ ನಾರಯಣಪುರ – ಚಿಕ್ಕಮಗಳೂರು
ಪೌರ ಕಾರ್ಮಿಕ: ಮಲ್ಲಮ್ಮ‌ ಹೂವಿನಹಡಗಲಿ – ವಿಜಯನಗರ
ಪರಿಸರ: ಸಾಲುಮರದ ನಿಂಗಣ್ಣ – ರಾಮನಗರ
ಆಡಳಿತ: ಎಲ್ ಎಚ್ ಮಂಜುನಾಥ್ -ಶಿವಮೊಗ್ಗ, ಮದನ್ ಗೋಪಾಲ – ಬೆಂಗಳೂರು
ಹೊರನಾಡು: ದೇವಿದಾಸ್ ಶೆಟ್ಟಿ – ಮುಂಬೈ, ಅರವಿಂದ್ ಪಾಟೀಲ್ – ಹೊರನಾಡು, ಕೃಷ್ಣಮೂರ್ತಿ‌ ಮಾಂಜಾ- ತೆಲಂಗಾಣ
ಹೊರದೇಶ: ರಾಜ್ ಕುಮಾರ್ – ಗಲ್ಫ್ ರಾಷ್ಟ್ರ
ವೈದ್ಯಕೀಯ ಕ್ಷೇತ್ರ: ಎಚ್ಎಸ್‌ ಮೋಹನ್ – ಶಿವಮೊಗ್ಗ
ಬಸವಂತಪ್ಪ – ದಾವಣಗೆರೆ
ಚಲನಚಿತ್ರ: ದತ್ತಣ್ಣ – ಚಿತ್ರದುರ್ಗ, ಅವಿನಾಶ್‌- ಬೆಂಗಳೂರು
ಕಿರುತೆರೆ: ಸಿಹಿಕಹಿ ಚಂದ್ರು
ಸಾಹಿತ್ಯ: ಶಂಕರ್ ಚಚಡಿ – ಬೆಳಗಾವಿ, ಪ್ರೊಫೆಸರ್ ಕೃಷ್ಣೇಗೌಡ – ಮೈಸೂರು, ಅಶೋಕ್ ಬಾಬು ನೀಲಗಾರ್ – ಬೆಳಗಾವಿ, ಅ.ರಾ.ಮಿತ್ರ – ಹಾಸನ, ರಾಮಕೃಷ್ಣ ಮರಾಠೆ – ಕಲಬುರಗಿ
ಯಕ್ಷಗಾನ: ಎಂ.ಎ ನಾಯಕ್ – ಉಡುಪಿ, ಸುಬ್ರಹ್ಮಣ್ಯ ಧಾರೇಶ್ವರ – ಉತ್ತರ ಕನ್ನಡ, ಸರಪಾಡಿ ಅಶೋಕ್ ಶೆಟ್ಡಿ – ದಕ್ಷಿಣ ಕನ್ನಡ
ಕ್ರೀಡೆ: ದತ್ತಾತ್ರೇಯ ಗೋವಿಂದ ಕುಲಕರ್ಣಿ – ಧಾರವಾಡ, ರಾಘವೇಂದ್ರ ಅಣ್ಣೇಕರ್ – ಬೆಳಗಾವಿ

10 ಸಂಸ್ಥೆಗಳಿಗೆ ಪ್ರಶಸ್ತಿ
1) ರಾಮಕೃಷ್ಣ ಆಶ್ರಮ, ಮೈಸೂರು
2) ಲಿಂಗಾಯತ ಪ್ರಗತಿಶೀಲ ಸಂಘ, ಗದಗ
3) ಹಾವೇರಿಯ ಅಗಡಿ ತೋಟ
4) ತಲಸ್ಸೆಮಿಯಾ ಹಾಗೂ ಹಿಮೆಫೆಲಿಮಾ ಸೊಸೈಟಿ
5) ಅಮೃತ ಶಿಶು ನಿವಾಸ, ಬೆಂಗಳೂರು
6) ಸುಮನಾ ಫೌಂಡೇಶನ್
7) ಯುವವಾಹಿನಿ ಸಂಸ್ಥೆ, ದಕ್ಷಿಣ ಕನ್ನಡ
8) ನೆಲೆ‌ ಫೌಂಡೇಶನ್, ಬೆಂಗಳೂರು
9) ನಮ್ಮನೆ ಸುಮ್ಮನೆ , ಬೆಂಗಳೂರು
10) ಉಮಾ ಮಹೇಶ್ವರಿ ಹಿಂದುಳಿದ ವರ್ಗಗಳ ಟ್ರಸ್ಟ್, ಮಂಡ್ಯ

ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ| ಕನ್ನಡ ಭಾಷಾ ಬಳಕೆ ಕಡ್ಡಾಯಕ್ಕೆ ಡಿಸೆಂಬರ್‌ನಲ್ಲಿ ಶಾಸನ: ಮುಖ್ಯಮಂತ್ರಿ ಬೊಮ್ಮಾಯಿ

Exit mobile version