ಬೆಂಗಳೂರು: ಎಲ್ಲ ಪ್ರಾದೇಶಿಕ ಭಾಷೆಗಳೂ ರಾಷ್ಟ್ರ ಭಾಷೆಗಳೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಆದ್ದರಿಂದ ಕನ್ನಡ ಭಾಷೆ ಮಾತೃಭಾಷೆಯೂ ಹೌದು, ರಾಷ್ಟ್ರ ಭಾಷೆಯೂ ಹೌದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಲು ಸರಕಾರ ಬದ್ಧವಾಗಿದೆ. ಇದಕ್ಕಾಗಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಕನ್ನಡ ಬಳಕೆ ಕಡ್ಡಾಯ ನಿಯಮ ಜಾರಿಗೆ ತರಲಿದ್ದೇವೆ ಎಂದು ಹೇಳಿದರು.
ʻʻಈಗಾಗಲೇ ಕನ್ನಡ ಕಡ್ಡಾಯ ವಿಧೇಯಕ ಮಂಡನೆ ಮಾಡಿದ್ದೇವೆ. ಇದರಿಂದ ಕನ್ನಡ ಭಾಷೆಯ ಬಳಕೆ ಕಾನೂನುಬದ್ಧವಾಗಲಿದೆʼʼ ಎಂದು ಹೇಳಿದ ಅವರು, ʻʻಕನ್ನಡಕ್ಕೆ ಕಾನೂನಿನ ರಕ್ಷಣೆ, ಕವಚ ನೀಡಿದರೆ ಅದು ನಮ್ಮ ಸರ್ಕಾರʼʼ ಎಂದರು. ವಿಧೇಯಕದ ಬಗ್ಗೆ ವ್ಯಾಖ್ಯಾನ ನಡೆಯಲಿ, ಚರ್ಚೆಯಾಗಲಿ. ಅದರ ಮೂಲಕ ಬರುವ ಎಲ್ಲಾ ಸಲಹೆ ಪಡೆದು ಅನುಷ್ಠಾನಕ್ಕೆ ಸಿದ್ಧರಿದ್ದೇವೆ ಎಂದರು.
ಆತ್ಮಾವಲೋಕನ ಮಾಡಿಕೊಳ್ಳೋಣ
ಕನ್ನಡ ನಾಡಿಗೆ ನನ್ನ ಕೊಡುಗೆ ಏನು ಎನ್ನುವ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನ್ನಡ ನಾಡಿನ ಬಗ್ಗೆ ಎಲ್ಲ ಕನ್ನಡಿಗರು ಆಲೋಚನೆ ಮಾಡಿದರೆ ವಿಶ್ವದಲ್ಲೇ ಮೊದಲ ರಾಜ್ಯ ನಮ್ಮದಾಗಲಿದೆ. ಇಲ್ಲಿ ಬುದ್ಧಿವಂತಿಕೆಗೆ ಕೊರತೆ ಇಲ್ಲ. ನಮ್ಮ ಹಿರಿಯರು ಅತ್ಯಂತ ಮೌಲ್ಯಯುತ ಬದುಕನ್ನು ಬಿಟ್ಟುಹೊಗಿದ್ದಾರೆ. ಸುಂದರವಾದ ಬದುಕನ್ನು ಕಟ್ಟಿಕೊಟ್ಟು ಹೋಗಿದ್ದಾರೆ ಎಂದರು ಬಸವರಾಜ ಬೊಮ್ಮಾಯಿ.
ʻʻಜಾಗತೀಕರಣ, ಉದಾರೀಕರಣ, ಆಧುನೀಕರಣದ ನಡುವೆ ಅಂತಃಕರಣ ಉಳಿಸಿಕೊಂಡಿರೋದು ನಮ್ಮ ಕನ್ನಡಿಗರ ಶ್ರೇಷ್ಠತೆ. ಅದನ್ನೆಲ್ಲ ಉಳಿಸಿಕೊಂಡು ನಾವು ಕನ್ನಡದ ಬಾವುಟವನ್ನು ಎಲ್ಲರ ಎದೆಯಲ್ಲಿ ಹಾರಿಸಬೇಕಾಗಿದೆʼʼ ಎಂದರು.
ʻʻಉತ್ತಮ ವಾತಾವರಣ, ಉದ್ಯೋಗ, ತಂತ್ರಜ್ಞಾನ, ವಿಜ್ಞಾನ ಜೊತೆಗೆ ಮೂಲಭೂತ ಸೌಕರ್ಯ ಇರುವ ಭವಿಷ್ಯದ ಕರ್ನಾಟಕವನ್ನು ನಾವು ರೂಪಿಸಬೇಕಾಗಿದೆʼʼ ಎಂದು ಹೇಳಿದರು.
ಎಲ್ಲರ ನೆರವಿಗೆ ನಿಂತಿದೆ ಸರಕಾರ
ʻʻನಮ್ಮಲ್ಲಿ ಹತ್ತು ಕೃಷಿ ವಲಯ ಇದೆ. ವರ್ಷದ 365 ದಿನ ಒಂದಲ್ಲಾ ಒಂದು ಪ್ರದೇಶದಲ್ಲಿ ಸದಾ ಕೃಷಿ ಚಟುವಟಿಕೆ ನಡೆಯುತ್ತಿರುತ್ತದೆ. ಈ ವಾತಾವರಣ ಬೇರೆ ರಾಜ್ಯ, ಪ್ರದೇಶದಲ್ಲಿ ಇಲ್ಲ. ಈ ಬಾರಿ ಕೆಲವು ಕಡೆ ನಿರಂತರ ಮಳೆಯಾಗಿದೆ. ಕೆಲವೆಡೆ ಸಮಸ್ಯೆಯಾಗಿದೆ. ಕೆಲವು ಕಡೆ ಉತ್ತಮ ಮಳೆಯಿಂದ ನೀರಿನ ಸಮಸ್ಯೆ ಇಂಗಿದೆ. ಕೆಲವು ಕಡೆ ಕಷ್ಟವಾಗಿದೆ. ಎಲ್ಲಿ ಕಷ್ಟವಿದೆಯೋ ಅಲ್ಲಿ ಸರಕಾರ ಸ್ಪಂದಿಸಿದೆʼʼ ಎಂದು ಸಿಎಂಬ ಬೊಮ್ಮಾಯಿ ಹೇಳಿದರು.
ಎಂಟು ಸಾವಿರ ವಿವೇಕ ಕೊಠಡಿಗಳು
ʻʻರಾಜ್ಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎಂಬ ಉದ್ದೇಶದೊಂದಿಗೆ 8 ಸಾವಿರ ಶಾಲೆ ಕೊಠಡಿ ನಿರ್ಮಾಣ ಮಾಡಲಾಗಿದೆ. ಈವರೆಗೂ ಇಷ್ಟೊಂದು ಶಾಲಾ ಕೊಠಡಿ ನಿರ್ಮಾಣಕ್ಕೆ ಅನುಮತಿ ಕೊಟ್ಟಿರಲಿಲ್ಲ. ಈ ಕೊಠಡಿಗಳಿಗೆ ಅದಕ್ಕೆ ವಿವೇಕ ಅಂತ ಹೆಸರಿಟ್ಟಿದ್ದೇವೆ. ವಿವೇಕ ಅಂದ್ರೆ ಜ್ಞಾನ. ವಿವೇಕಾನಂದರು ಅಂದರೆ ನಮಗೆ ಹೆಮ್ಮೆʼʼ ಎಂದರು.
ʻʻಹಿಂದೆ ಬ್ರಿಟಿಷರು ನಮ್ಮನ್ನು ಆಳಿದರು ಅನ್ನುತ್ತೇವೆ. ಆದರೆ 21ನೇ ಶತಮಾನವನ್ನು ಜ್ಞಾನ ಆಳುತ್ತಿದೆ. ಅತಿ ಹೆಚ್ಚು ಜ್ಞಾನ ಇರೋದು ಕರ್ನಾಟಕದಲ್ಲಿ. ನೀತಿ ಆಯೋಗ ಜ್ಞಾನದ ವಿಚಾರದಲ್ಲಿ ಮೊದಲ ಸ್ಥಾನವನ್ನು ಕರ್ನಾಟಕಕ್ಕೆ ನೀಡಿದೆ. ಈ ನಾಡಿನಲ್ಲಿ ದುಡಿಮೆಗೂ ಹೆಚ್ಚು ಗೌರವ ಇದೆ. ಒಂದು ಕಾಲದಲ್ಲಿ ದುಡ್ಡೇ ದೊಡ್ಡಪ್ಪ ಅಂತಿತ್ತು. ಆದ್ರೆ ಈಗ ದುಡಿಮೆಯೇ ದೊಡ್ಡಪ್ಪ ಅಂತಾಗಿದೆʼʼ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.
ಔದ್ಯೋಗಿಕ ಕ್ರಾಂತಿ, ಶಿಕ್ಷಣ ಕ್ರಾಂತಿ
ʻʻರೈತರು ಸೇರಿದಂತೆ ಶ್ರಮ ಜೀವಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗಿದೆ. ರೈತ ಮಕ್ಕಳಿಗೆ ಮಾತ್ರವಲ್ಲದೆ ನೇಕಾರರು, ಕಾರ್ಮಿಕರು, ಮೀನುಗಾರರು, ಆಟೋ, ಟ್ಯಾಕ್ಸಿ ಡ್ರೈವರ್ ಮಕ್ಕಳಿಗೂ ವಿದ್ಯಾನಿಧಿ ಕೊಡಲಾಗಿದೆʼʼ ಎಂದು ಹೇಳಿದರು.
ʻʻರಾಜ್ಯ ಸರಕಾರ ಸ್ವಂತ ಉದ್ಯೋಗಕ್ಕೆ ಪ್ರೋತ್ಸಾಹ ನೀಡುತ್ತಿದೆ. ಕಮ್ಮಾರ, ಚಮ್ಮಾರರಿಗೆ 30 ಸಾವಿರ ರೂ. ಸಾಲ ನೀಡಲಾಗುತ್ತಿದೆ. ಮಹಿಳೆಯರಿಗೆ ಸ್ವಯಂ ಉದ್ಯೋಗ ನೀಡುವ ದೃಷ್ಟಿಯಿಂದ ಎರಡು ಲಕ್ಷ ಔದ್ಯೋಗಿಕ ಯೋಜನೆ ರೂಪಿಸಲಾಗುತ್ತಿದೆ. ಔದ್ಯೋಗಿಕ ಕ್ರಾಂತಿ, ಶಿಕ್ಷಣ ಕ್ರಾಂತಿ ಮಾಡುವುದು ನಮ್ಮ ಗುರಿʼʼ ಎಂದರು ಬೊಮ್ಮಾಯಿ.
ʻʻಎರಡುವರೆ ಲಕ್ಷ ಸರ್ಕಾರಿ ಉದ್ಯೋಗ ಖಾಲಿ ಇದೆ. ಮುಂದಿನ ಎರಡು ವರ್ಷದಲ್ಲಿ ಅವುಗಳನ್ನು ತುಂಬುವ ಕೆಲಸ ಮಾಡಲಿದ್ದೇವೆ. ಈ ವರ್ಷವೇ ಒಂದುವರೆ ಲಕ್ಷ ಉದ್ಯೋಗ ತುಂಬುವ ಕೆಲಸ ಮಾಡಲಿದ್ದೇವೆʼʼ ಎಂದು ಹೇಳಿದ ಅವರು, ನವೆಂಬರ್ ೨ರಿಂದ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ನಡೆಯಲಿದೆ. ಏಳು ಲಕ್ಷ ಕೋಟಿ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ. ಇದರಿಂದ ಮೂರುವರೆ ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ ಎಂದರು.
ನವಕರ್ನಾಟಕದಿಂದ ನವಭಾರತ
ನಾವೆಲ್ಲರೂ ಕನ್ನಡಿಗರು ಎನ್ನುವ ಆತ್ಮಾಭಿಮಾನದಿಂದ ಮುನ್ನುಗ್ಗಬೇಕು. ಅದೇ ಹೊತ್ತಿಗೆ ನಾವು ಭಾರತೀಯರು ಎನ್ನುವುದು ಕೂಡಾ ಅಷ್ಟೇ ಮುಖ್ಯ. ನಮ್ಮ ರಾಜ್ಯ ಅಭಿವೃದ್ಧಿಯಾದರೆ ಅದು ದೇಶದ ಅಭಿವೃದ್ಧಿ ಕೂಡಾ. ನವ ಕರ್ನಾಟಕದಿಂದ ನವಭಾರತದ ಸೃಷ್ಟಿಯಾಗಲಿದೆ ಎಂದು ಹೇಳಿದರು ಬೊಮ್ಮಾಯಿ.
ಸಭಾ ಕಾರ್ಯಕ್ರಮಕ್ಕೆ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಬಿ.ಸಿ. ನಾಗೇಶ್, ಸಂಸದ ಪಿ.ಸಿ. ಮೋಹನ್ ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಗೋವಿಂದರಾಜ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಮತ್ತಿತರರು ಇದ್ದರು.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ| ಉದ್ಯೋಗ ನೇಮಕ ಪರೀಕ್ಷೆಯಲ್ಲಿ ಕನ್ನಡ ಅವಗಣನೆ, ಹಿಂದಿ ಹೇರಿಕೆಗೆ ಶಾಸಕ ರಿಜ್ವಾನ್ ಅರ್ಷದ್ ಆಕ್ರೋಶ