ಕೊಪ್ಪಳ: ಕನ್ನಡ ಮಾತೃ ಭಾಷೆಯಾದರೂ ಪ್ರಸ್ತುತ ಶುದ್ಧ ಕನ್ನಡ ಮಾತನಾಡುವವರು, ಓದು, ಬರೆಯುವವರ ಹಾಗೂ ಶುದ್ಧ ಕನ್ನಡ ಕಲಿಯುವವರ ಸಂಖ್ಯೆ ವಿರಳ. ಆದರೆ, ಇಲ್ಲೊಬ್ಬ ಐದು ವರ್ಷದ ಪುಟ್ಟ ಪೋರಿ ಸುಲಿದ ಬಾಳೆಹಣ್ಣಿನ ಹಾಗೆ ಕನ್ನಡದ ಯಾವುದೇ ಪದವನ್ನೂ ಓದಬಲ್ಲಳು ಹಾಗೂ ಬರೆಯಬಲ್ಲಳು. ಕನ್ನಡ ರಾಜ್ಯೋತ್ಸವ ದಿನದಂದೇ ಜನಿಸಿರುವ ಈ ಪೋರಿ ಕನ್ನಡದ ಕಂದ ಆಗಿದ್ದಾಳೆ.
ಕನ್ನಡದ ಯಾವುದೇ ಪದವನ್ನು ಪಟಪಟನೆ, ಶುದ್ಧವಾಗಿ ಹೇಳುವ ಹಾಗೂ ಬರೆಯುವ ಈ ಪುಟ್ಟ ಬಾಲೆಯ ಹೆಸರು ಸ್ವರ ಬೆಟಗೇರಿ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಸುಭಾಷ್ ಬೆಟಗೇರಿ ಹಾಗೂ ವಿಜಯಲಕ್ಷ್ಮೀ ಬೆಟಗೇರಿ ದಂಪತಿಯ ಮಗಳು. ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಜನಿಸಿರುವ ಸ್ವರ ಇವತ್ತಿಗೆ ಐದು ವರ್ಷಕ್ಕೆ ಕಾಲಿಡುತ್ತಿದ್ದಾಳೆ.
ಕೇವಲ 11 ತಿಂಗಳ ಅವಧಿಯಲ್ಲಿ ಬಾಲಕಿ ಸ್ವರ ತನ್ನ ತಂದೆ, ತಾಯಿಯ ಮಾರ್ಗದರ್ಶನದಲ್ಲಿ ಕನ್ನಡ ಕಲಿತಿದ್ದಾಳೆ. ಕನ್ನಡದ ಯಾವುದೇ ಶಬ್ಧವನ್ನೂ ಸರಳವಾಗಿ ಹೇಳಬಲ್ಲಳು, ಅಷ್ಟೇ ಅಲ್ಲ ಬರೆಯಬಲ್ಲಳು ಕೂಡಾ. ವಿಶೇಷ ಎಂದರೆ ಆಕೆ ಇನ್ನೂ ಶಾಲೆಗೆ ಹೋಗದೆಯೇ ಕನ್ನಡದ ಕಂಪನ್ನು ಪಸರಿಸುತ್ತಿದ್ದಾಳೆ. ಎಂತಹ ಕಠಿಣ ಪದಗಳೇ ಆದರೂ ಸರಿ ಅದನ್ನು ಯಾವುದೇ ಕಾಗುಣಿತ ತಪ್ಪಿಲ್ಲದೆ ತಕ್ಷಣವೇ ಹೇಳುತ್ತಾಳೆ, ಬರೆಯುತ್ತಾಳೆ.
ಬಾಲಕಿ ಸ್ವರಳ ತಂದೆ ಸುಭಾಷ ಶಿಕ್ಷಕರಾಗಿದ್ದವರು, ಸದ್ಯ ಸ್ವಯಂ ನಿವೃತ್ತಿ ಹೊಂದಿದ್ದಾರೆ. ತಾಯಿ ರೋಣ ತಾಲೂಕಿನ ನೆಲ್ಲೂರಿನಲ್ಲಿ ಶಿಕ್ಷಕಿಯಾಗಿದ್ದಾರೆ. ಇಬ್ಬರ ಮಾರ್ಗದರ್ಶನದಿಂದ ಕನ್ನಡ ಬರೆಯುವುದನ್ನು ಸರಳವಾಗಿ ಕಲಿತಿದ್ದಾಳೆ. ಕಳೆದ 11 ತಿಂಗಳಿನಿಂದ ಸ್ವರಳಿಗೆ ಕನ್ನಡ ಕಲಿಕೆಯನ್ನು ಆಕೆಯ ತಂದೆ ಪ್ರಾರಂಭಿಸಿದ್ದಾರೆ. ಅಷ್ಟೇ ಸೊಗಸಾಗಿ ಕನ್ನಡವನ್ನು ಬರೆಯುವುದು ಎಲ್ಲರನ್ನೂ ನಿಬ್ಬೆರಗಾಗಿಸಿದೆ.
ಉನ್ನತ ಶಿಕ್ಷಣ ಪಡೆದವರು ಸಹ ಕೆಲವೊಮ್ಮೆ ಕನ್ನಡ ಓದುವಾಗ, ಬರೆಯುವಾಗ ಹಾಗೂ ಮಾತನಾಡುವಾಗಲೂ ಕಾಗುಣಿತ ದೋಷಗಳ ಮಾಡುವುದನ್ನು ನೋಡಿದ್ದೇವೆ. ಆದರೆ ಬಾಲಕಿ ಸ್ವರಳ ಕಲಿಕಾ ಸಾಮಾರ್ಥ್ಯ ಹಾಗೂ ಕನ್ನಡ ಭಾಷೆಯ ಮೇಲಿನ ಹಿಡಿತ ನಿಜಕ್ಕೂ ಮೆಚ್ಚುವಂತಹದ್ದು ಎಂದು ಸ್ಥಳೀಯರು ಹೇಳುತ್ತಾರೆ.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ| ಕನ್ನಡ ಭಾಷಾ ಬಳಕೆ ಕಡ್ಡಾಯಕ್ಕೆ ಡಿಸೆಂಬರ್‌ನಲ್ಲಿ ಶಾಸನ: ಮುಖ್ಯಮಂತ್ರಿ ಬೊಮ್ಮಾಯಿ