Site icon Vistara News

ಕನ್ನಡ ರಾಜ್ಯೋತ್ಸವ | ಬೆಳಗಾವಿಯಲ್ಲಿ ಮಧ್ಯರಾತ್ರಿಯಿಂದಲೇ ಸಂಭ್ರಮ, ʼಅಪ್ಪು ಉತ್ಸವʼ ಆಚರಣೆ, ʻಕರಾಳ ದಿನʼಕ್ಕೆ ಸೆಡ್ಡು

belagavi

ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಜೋರಾದ ರಾಜ್ಯೋತ್ಸವ ಸಂಭ್ರಮ ನಡೆದಿದೆ. ವಿವಿಧ ಕನ್ನಡಪರ ಸಂಘಟನೆಗಳು ಮಧ್ಯರಾತ್ರಿಯೇ ಸಂಭ್ರಮಾಚರಣೆಗೆ ಚಾಲನೆ ನೀಡಿದ್ದು, ರಾಣಿ ಚೆನ್ನಮ್ಮ ವೃತ್ತದಲ್ಲಿ ಕೇಕ್ ಕಟ್ ಮಾಡಿ, ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು. ಪುಟ್ಟ ಮಕ್ಕಳು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನರು ಸಂಭ್ರಮದಲ್ಲಿ ಭಾಗಿಯಾದರು.

ಇಂದು ಬೆಳಗಾವಿಯಲ್ಲಿ ಅದ್ಧೂರಿ ರಾಜ್ಯೋತ್ಸವ ಮೆರವಣಿಗೆ ನಡೆಯಲಿದ್ದು ಬೆಳಗ್ಗೆ 10.30ಕ್ಕೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಾಗೂ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಸಚಿವ ಗೋವಿಂದ ಕಾರಜೋಳ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ರೂಪಕ ವಾಹನಗಳು ಭಾಗಿಯಾಗಲಿವೆ. ಸುಮಾರು ಒಂದು ಲಕ್ಷ ಜನ ಸೇರುವ ಸಾಧ್ಯತೆಯಿದೆ. ಮೆರವಣಿಗೆಯಲ್ಲಿ ಮೂರು ಕಿಲೋಮೀಟರ್ ಉದ್ದದ ಕನ್ನಡ ಬಾವುಟವನ್ನು ಹಿಡಿದು ನಡೆಯಲಿದ್ದಾರೆ.

ಅಪ್ಪು ಉತ್ಸವ

ಮೂರು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ ನಡೆಯುತ್ತಿದ್ದು, ಎರಡು ವರ್ಷ ಕೋವಿಡ್ ಹಾಗೂ ಕಳೆದ ವರ್ಷ ಅಪ್ಪು ನಿಧನ ಹಿನ್ನೆಲೆಯಲ್ಲಿ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗಿತ್ತು. ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ʼಅಪ್ಪು ಉತ್ಸವʼ ಆಗಿ ಆಚರಿಸಲು ಕನ್ನಡಪರ ಸಂಘಟನೆಗಳು ತೀರ್ಮಾನಿಸಿವೆ. ಬೆಳಗಾವಿ ಫೇಸ್‌ಬುಕ್ ಪೇಜ್‌ನಿಂದ ಈಗಾಗಲೇ ಅಪ್ಪು ಭಾವಚಿತ್ರವಿರುವ 15 ಸಾವಿರ ಟೀ ಶರ್ಟ್‌ಗಳ ಮಾರಾಟ ಮಾಡಲಾಗಿದೆ. ‘ಅಪ್ಪು ಗತ್ತು ದೇಶಕ್ಕೆ ಗೊತ್ತು… ಬೆಳಗಾವಿ ಎಂದೆಂದೂ ಕನ್ನಡಿಗರ ಸ್ವತ್ತು’ ಎಂಬ ಬರಹದಡಿ ಅಪ್ಪು ಭಾವಚಿತ್ರದ ಟೀಶರ್ಟ್ ತಯಾರಿಸಲಾಗಿದೆ.

ಹುಕ್ಕೇರಿ ಹಿರೇಮಠದ ವತಿಯಿಂದ ಒಂದು ಲಕ್ಷ ಹೋಳಿಗೆ ದಾಸೋಹ ಏರ್ಪಡಿಸಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹೋಳಿಗೆ ದಾಸೋಹ ನಡೆಯಲಿದೆ. 50 ಸಾವಿರಕ್ಕೂ ಹೆಚ್ಚು ಜನರಿಗೆ ಹೋಳಿಗೆ, ಅನ್ನ, ಸಾಂಬಾರ್‌, ಬದನೆಕಾಯಿ ಆಲೂಗಡ್ಡೆ ಪಲ್ಯ ಊಟದ ವ್ಯವಸ್ಥೆ ಮಾಡಲಾಗಿದೆ. ಚಿತ್ರನಟ ಸಾಯಿಕುಮಾರ್ ರಾಜ್ಯೋತ್ಸವಕ್ಕೆ ಆಗಮಿಸಲಿದ್ದಾರೆ.

ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಇಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ, ರಜನಿಕಾಂತ್‌, ಜ್ಯೂ.ಎನ್‌ಟಿಆರ್‌ ಭಾಗಿ

ಇನ್ನೊಂದೆಡೆ ಎಂಇಎಸ್ ಕರಾಳ ದಿನಾಚರಣೆ

ಒಂದೆಡೆ ರಾಜ್ಯೋತ್ಸವ ನಡೆಯುತ್ತಿದ್ದರೆ, ಮತ್ತೊಂದೆಡೆ ಕರಾಳ ದಿನಾಚರಣೆ ಆಚರಿಸಲು ಎಂಇಎಸ್‌ ಸಿದ್ಧತೆ ನಡೆಸಿದೆ. ನವೆಂಬರ್ 23ರಂದು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದದ ಅಂತಿಮ ವಿಚಾರಣೆ ನಡೆಯಲಿದ್ದು, ಈ ವಿವಾದ ಪ್ರಸ್ತಾಪಿಸಿ ಸಹಸ್ರಾರು ಸಂಖ್ಯೆಯಲ್ಲಿ ಕರಾಳ ದಿನಾಚರಣೆಯಲ್ಲಿ ಭಾಗಿಯಾಗುವಂತೆ ಎಂಇಎಸ್ ಕರೆ ನೀಡಿದೆ. ಇಂದು ಬೆಳಗ್ಗೆ 9.30ಕ್ಕೆ ಸಂಭಾಜಿ ಉದ್ಯಾನದಿಂದ ಮರಾಠಾ ಮಂದಿರವರೆಗೆ ರ್ಯಾಲಿ ನಡೆಸಲು ಎಂಇಎಸ್ ತೀರ್ಮಾನಿಸಿದೆ. ಬೆಳಗ್ಗೆ 11.30ಕ್ಕೆ ಮರಾಠಾ ಮಂದಿರದಲ್ಲಿ ಸಭೆ ಸೇರಿ ಕರಾಳ ದಿನ ಆಚರಿಸಲು ನಿರ್ಧರಿಸಲಾಗಿದೆ.

ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿಟ್ಟ ದೇವರಾಜ ಅರಸರು ಏನೆಂದಿದ್ದರು ಗೊತ್ತೇ?

Exit mobile version